ಬೆನ್ನಿಗೆ ಚೂರಿ ಹಾಕಿದ ಪವಾರ್: ಶಿವಸೇನಾ ಅಳಲು
ಮುಂಬೈ, ನವೆಂಬರ್ 23: 'ಅಜಿತ್ ಪವಾರ್ ಏನು ಹೇಳಿದ್ದಾರೋ ಅದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ ಅರು ಮಾಡಿರುವುದು ಎಲ್ಲರಿಗೂ ಕಾಣುವಂತಿದೆ. ಅವರು ಮಹಾರಾಷ್ಟ್ರದ ಜನರು ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಅಜಿತ್ ಪವಾರ್ ಹಿಂದಿನಿಂದ ಇರಿದಿದ್ದಾರೆ. ಅವರು ದೊಡ್ಡ ತಪ್ಪು ಮಾಡಿದ್ದಾರೆ' ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದರು.
ಮಹಾರಾಷ್ಟ್ರದಲ್ಲಿ ದಿಢೀರ್ ಬೆಳವಣಿಗೆಯ ಬಗ್ಗೆ ಶನಿವಾರ ಅಚ್ಚರಿ ವ್ಯಕ್ತಪಡಿಸಿದ ಅವರು, ಬಿಜೆಪಿ ಮತ್ತು ಅಜಿತ್ ಪವಾರ್ ವಿರುದ್ಧ ಹರಿಹಾಯ್ದರು. ಶಿವಸೇನಾ ಮತ್ತು ಶರದ್ ಪವಾರ್ ಅವರಿಗೆ ಈ ವಿಚಾರದಲ್ಲಿ ಸಂಬಂಧವೇ ಇಲ್ಲ. ಶರದ್ ಪವಾರ್ ಅವರಿಗೆ ಯಾವುದೇ ಮಾಹಿತಿ ಇಲ್ಲ. ಅಜಿತ್ ಪವಾರ್ ಅವರ ಸ್ಥಾನ ಇರುವುದು ಆರ್ಥರ್ ರಸ್ತೆ ಜೈಲಿನಲ್ಲಿ. ಆದರೆ ಅವರೀಗ ಉಪ ಮುಖ್ಯಮಂತ್ರಿಯಾಗುತ್ತಿದ್ದಾರೆ. ರಾತ್ರಿ ನಡೆದಿರುವುದು ಕೆಡುಕಿ ಬೆಳವಣಿಗೆ ಎಂದು ಹೇಳಿದರು.
ಕಳೆದ ರಾತ್ರಿ ನಡೆದ ಸಭೆಯಲ್ಲಿ ಅಜಿತ್ ಪವಾರ್ ಅವರ ದೇಹಭಾಷೆ ಅನುಮಾನಾಸ್ಪದವಾಗಿತ್ತು. ಅವರು ನಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವಂತಿರಲಿಲ್ಲ. ಅವರು ಇಡೀ ಮಹಾರಾಷ್ಟ್ರದ ಜನತೆಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇಂದು ಅವರು ಭೇಟಿಯಾಗಲಿದ್ದಾರೆ. ಅವರು ಜತೆಗೂಡಿ ಸುದ್ದಿಗೋಷ್ಠಿಯನ್ನೂ ನಡೆಸಬಹುದು. ಆದರೆ ಅಜಿತ್ ಪವಾರ್ ಮತ್ತು ಅವರನ್ನು ಬೆಂಬಲಿಸುತ್ತಿರುವ ಶಾಸಕರು ಛತ್ರಪತಿ ಶಿವಾಜಿ ಹಾಗೂ ಮಹಾರಾಷ್ಟ್ರವನ್ನು ವಂಚಿಸಿರುವುದಂತೂ ಸತ್ಯ ಎಂದು ಕಿಡಿಕಾರಿದರು.












Click it and Unblock the Notifications