ಯಾಕೂಬ್ ಮೆಮನ್ ಗಲ್ಲಿಗೇರಿಸಲು ಡೇಟ್ ಫಿಕ್ಸ್
ಮುಂಬೈ, ಜುಲೈ 15: 1993ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ ಗಲ್ಲಿಗೇರಿಸಲು ದಿನಾಂಕ ಫಿಕ್ಸ್ ಮಾಡಲಾಗಿದೆ. ಮಹಾರಾಷ್ಟ್ರದ ನಾಗ್ಪುರ ಜೈಲಿನಲ್ಲಿ ಜುಲೈ 30ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸಲು ಕೋರ್ಟ್ ಆದೇಶಿಸಿದೆ.
1993ರಲ್ಲಿ ನಡೆದಿದ್ದ ಮುಂಬೈ ಸರಣಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ವಿಶೇಷ ಟಾಡಾ ನ್ಯಾಯಾಲಯ ಮೆಮನ್ ಸೇರಿದಂತೆ 10 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಮರಣದಂಡನೆ ಶಿಕ್ಷೆ ಪ್ರಶ್ನಿಸಿ ಮೆಮೊನ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಏಪ್ರಿಲ್ 9, 2015 ರಂದು ಅರ್ಜಿ ತಿರಸ್ಕರಿಸಿತ್ತು.
[1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು]

ಟೈಗರ್ ಮೆಮನ್ ನ ಸೋದರನಾದ ಯಾಕೂಬ್ ಮೆಮನ್(53) ಚಾರ್ಟೆಡ್ ಅಕೌಂಟೆಂಟ್ ಕೆಲಸ ಮಾಡುತ್ತಿದ್ದ. ತನ್ನ ಅಣ್ಣನಿಗೆ ಈತ ಭಯೋತ್ಪಾದನೆಗೆ ಸಹಕಾರಿಯಾಗಿದ್ದ ಎಂದು ಪೊಲೀಸರು ಈತನನ್ನು 1994ರಲ್ಲಿ ನೇಪಾಳದ ಕಾಠ್ಮಂಡುವಿನಲ್ಲಿ ಬಂಧಿಸಲಾಗಿತ್ತು.
ಸುದೀರ್ಘ ವಿಚಾರಣೆ ನಡೆದು ಟಾಡಾ ನ್ಯಾಯಾಲಯ 2007ರಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ನಂತರ ಆತ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದ. ಅಲ್ಲೂ ಆತನ ಶಿಕ್ಷೆ ಖಾಯಂಗೊಂಡಿತ್ತು.
ನಂತರ 2013ರಲ್ಲಿ ಸುಪ್ರೀಂಕೋರ್ಟ್ ಅಂಗಳದಲ್ಲೂ ಪ್ರಕರಣದ ವಿಚಾರಣೆ ನಡೆದು ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಲಾಗಿತ್ತು. ಮುಂಬೈನಲ್ಲಿ 1993 ಮಾರ್ಚ್ 12 ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 713 ಮಂದಿ ಗಾಯಗೊಂಡಿದ್ದರು. ಸಿಬಿಐ ಇದರ ತನಿಖೆ ನಡೆಸಿ ದಾವೂದ್ ಇಬ್ರಾಹಿಂ ಸೇರಿದಂತೆ ಹಲವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು.(ಒನ್ ಇಂಡಿಯಾ ಸುದ್ದಿ)












Click it and Unblock the Notifications