Mayakonda Elections: ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಗೆಲುವು ಯಾರಿಗೆ?
ದಾವಣಗೆರೆ, ಮಾರ್ಚ್ 25: ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಭಾ ಕ್ಷೇತ್ರ ಮಾಯಕೊಂಡ ದಾವಣಗೆರೆ ಜಿಲ್ಲೆಯಲ್ಲಿದೆ. ಕ್ಷೇತ್ರದಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಸಮುದಾಯ ಭವನದ ಅಗತ್ಯವಿದೆ. ಉದ್ಯೋಗಕ್ಕಾಗಿ ಆಗ್ರಹ ಕೇಳಿ ಬರುತ್ತಿದ್ದು, ಈ ಹೊತ್ತಿನಲ್ಲಿ ಚುನಾವಣೆ ಬಂದಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ಆಕಾಂಕ್ಷಿಗಳ ದೊಡ್ಡ ದಂಡೇ ಕಾಣಿಸಿಕೊಂಡಿದೆ.
ಹೆಚ್ಚಿನ ಆಕಾಂಕ್ಷಿಗಳಿದ್ದ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿ ಯಾರೆಂದು ಟಿಕೆಟ್ ಘೋಷಣೆ ಮಾಡಿದೆ. ಆದರೆ, ಯಾರಿಗೆ ಟಿಕೆಟ್ ನೀಡಬೇಕು ಎಂಬ ಗೊಂದಲದಲ್ಲಿ ಆಡಳಿತರೂಢ ಬಿಜೆಪಿಯಿದೆ. ಇನ್ನು, ಈ ಕ್ಷೇತ್ರದಲ್ಲಿ ಬಂಡಾಯ ಎದ್ದು ಸ್ಪರ್ಧಿಸುವವರು ಹೆಚ್ಚು ಅಭ್ಯರ್ಥಿಗಳಿರುವುದು ಕೂಡ ಚುನಾವಣಾ ಕಣ ರಂಗೇರಲು ಮತ್ತಷ್ಟು ಕಾರಣವಾಗಿದೆ.

*ಮಾಯಕೊಂಡ ಇತಿಹಾಸ*
ದಾವಣಗೆರೆ ಆಗ್ನೇಯದಲ್ಲಿ 23 ಕಿಮೀ ದೂರದಲ್ಲಿ ಬೆಂಗಳೂರು-ಪುಣೆ ರೈಲು ಮಾರ್ಗದಲ್ಲಿ ಮಾಯಕೊಂಡವಿದೆ. ವ್ಯಾಪಾರಸ್ಥಳವಾಗಿ ಅಭಿವೃದ್ಧಿಯಾಗುತ್ತಿರುವ ಇಲ್ಲಿ ಅಂಚೆ, ವಿದ್ಯುಚ್ಛಕ್ತಿ, ಶಾಲೆಗಳು, ಆರೋಗ್ಯ ಕೇಂದ್ರ ಮುಂತಾದ ನಾಗರಿಕ ಸೌಲಭ್ಯಗಳು ಇನ್ನೂ ಹೆಚ್ಚಾಗಬೇಕಿದೆ. ಈ ಊರಿನಲ್ಲಿ ಕೇಶವ ಮತ್ತು ಓಬಳ ನರಸಿಂಹ ದೇವಾಲಯಗಳು ಪ್ರಸಿದ್ಧವಾಗಿವೆ.
ನರಸಿಂಹಸ್ವಾಮಿ ಗುಡಿಯ ನವರಂಗಕ್ಕೆ ದ್ರಾವಿಡ ಶಿಲ್ಪ ಶೈಲಿಯ ನಾಲ್ಕು ಕಂಬಗಳಿವೆ. ಈ ಘನಾಕೃತಿಯ ಕಂಬಗಳ ಮೇಲೆ ಗಣೇಶ, ಹನುಮಂತ ಮೊದಲಾದ ದೇವತೆಗಳೂ ಪುರುಷಾಮೃಗ, ನೃತ್ಯಗಾತಿಯರು, ದರ್ಪಣಮೋಹಿನಿ, ಕಾಳಿಂಗ ಮೊದಲಾದ ಉಬ್ಬುಶಿಲ್ಪದ ರಚನೆಗಳೂ ಇವೆ. ಇದು ಪ್ರವಾಸಿಗರನ್ನು ಸೆಳೆಯುತ್ತಿದೆ.

*ಮಾಯಕೊಂಡ ರಾಜಕೀಯ*
ದಾವಣಗೆರೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ 1978 ಮತ್ತು 1989 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಗಮ್ಮ ಕೇಶವಮೂರ್ತಿ ಶಾಸಕರಾಗಿ ಆಯ್ಕೆಯಾಗಿದ್ದರು. 1983 ರಲ್ಲಿ ಜನತಾ ಪಕ್ಷದ ಕೆ.ಜಿ.ಮಹೇಶ್ವರಪ್ಪ , 1985ರಲ್ಲಿ ಕನ್ನವರ ಮಲ್ಲಪ್ಪ ಅಧಿಕಾರಕ್ಕೆ ಬಂದಿದ್ದಾರೆ. ಬಳಿಕ 1994 ರಿಂದ 2004ರ ವರೆಗೆ ಸತತವಾಗಿ ಭಾರತೀಯ ಜನತಾ ಪಾರ್ಟಿಯ ಎಸ್.ಎ.ರವೀಂದ್ರನಾಥ್ ಹ್ಯಾಟ್ರಿಕ್ ಗೆಲವು ಸಾಧಿಸಿದ್ದರು.
2008 ರಲ್ಲಿ ಮಾಯಕೊಂಡ ಮೀಸಲು ಕ್ಷೇತ್ರವಾದ ಬಳಿಕ ಇದು ನಾಲ್ಕನೇ ಚುನಾವಣೆ. 2008 ಭಾರತೀಯ ಜನತಾ ಪಾರ್ಟಿಯ ಎಂ.ಬಸವರಾಜ ನಾಯ್ಕ್ ಆಯ್ಕೆಯಾಗಿದ್ದರು. 2013ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೆ. ಶಿವಮೂರ್ತಿ ಜಯ ಸಾಧಿಸಿದ್ದರು. ಈ ವೇಳೆ ಕೆಜೆಪಿಯ ಲಿಂಗಣ್ಣ ಪ್ರಬಲ ಪೈಪೋಟಿ ನೀಡಿದ್ದರು. 2018ರಲ್ಲಿ ಮತ್ತೆ ಭಾರತೀಯ ಜನತಾ ಪಾರ್ಟಿಯಿಂದ ಕಣಕ್ಕಿಳಿದ ಪ್ರೊ. ಲಿಂಗಣ್ಣ, ಕಾಂಗ್ರೆಸ್‌ನ ಕೆ.ಎಸ್. ಬಸವರಾಜ್ (ಬಸವಂತಪ್ಪ) ವಿರುದ್ಧ ಜಯ ಸಾಧಿಸಿದ್ದರು.
Mayakonda Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎನ್ ಲಿಂಗಣ್ಣ | 50556 | ಕೆ ಎಸ್ ಬಸವರಾಜ [ಬಸವಂತಪ್ಪ] | 44098 |
| 2013 | ಕೆ ಶಿವಮೂರ್ತಿ | 32435 | ಎನ್ ಲಿಂಗಣ್ಣ | 31741 |
| 2008 | ಎಂ ಬಸವರಾಜ ನಾಯ್ಕ | 52128 | ಡಾ ವೈ ರಾಮಪ್ಪ | 35471 |
ಕಳೆದ ಚುನಾವಣೆಯಲ್ಲಿ ಭಾರೀ ಪೈಪೋಟಿ ನೀಡಿದ್ದ ಕೆಎಸ್ ಬಸವರಾಜು ಅವರನ್ನೇ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಮಾಯಾಕೊಂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಂಜಾರ ಸಮುದಾಯದ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ನಿರಾಸೆಗೊಂಡಿದ್ದಾರೆ.
ಇತ್ತ ಬಿಜೆಪಿಯಲ್ಲಿ ಆಕಾಂಕ್ಷಿಗಳ ದೊಡ್ಡ ದಂಡೇ ಇದ್ದು, ಯಾರಿಗೆ ಟಿಕೆಟ್ ನೀಡುವುದು ಎಂಬ ಗೊಂದಲದಲ್ಲಿದೆ ಪಕ್ಷ. ಹಾಲಿ ಶಾಸಕ ಪ್ರೊ. ಎನ್. ಲಿಂಗಪ್ಪ, ಮಾಜಿ ಶಾಸಕ ಬಸವರಾಜ ನಾಯ್ಕ, 2008 ರಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಆಲೂರು ನಿಂಗರಾಜ್, ಎಚ್.ಕೆ. ಬಸವರಾಜ್, ಹೊಸಮುಖಗಳಾದ ಟಿ. ತಿಮ್ಮೇಶ್, ಹನುಮಂತನಾಯ್ಕ್, ಅನಿಲ್ ಕುಮಾರ್, ಶಾಮ್, ಶಿವಪ್ರಕಾಶ್ ಆರ್.ಎಲ್ ಸೇರಿ ಹಲವರು ಸ್ಪರ್ಧೆಯಲ್ಲಿದ್ದಾರೆ. ಜೆಡಿಎಸ್ ಇನ್ನು ಅಭ್ಯರ್ಥಿ ಘೋಷಿಸಿಲ್ಲ.
*ಮತದಾರರು*
2001 ರ ಭಾರತದ ಜನಗಣತಿಯ ಪ್ರಕಾರ, ಮಾಯಕೊಂಡವು 2933 ಪುರುಷರು ಮತ್ತು 2790 ಮಹಿಳೆಯರೊಂದಿಗೆ 5723 ಜನಸಂಖ್ಯೆಯನ್ನು ಹೊಂದಿದೆ. ಮಾಯಕೊಂಡ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಮತದಾರರು ಸರಿಸುಮಾರು 51,858 ರಷ್ಟಿದ್ದು, ಪರಿಶಿಷ್ಟ ಪಂಗಡದ ಮತದಾರರು ಸರಿಸುಮಾರು 30,447 ರಷ್ಟಿದೆ.
ಮುಸ್ಲಿಂ ಮತದಾರರು ಸರಿಸುಮಾರು 13,179 ರಷ್ಟಿದ್ದಾರೆ. ಗ್ರಾಮೀಣ ಮತದಾರರು ಸರಿಸುಮಾರು 1, 91,007 ರಷ್ಟಿದ್ದು, ನಗರ ಮತದಾರರು ಇಲ್ಲ. 2019 ರ ಸಂಸತ್ ಚುನಾವಣೆ ಮಾಹಿತಿಯಂತೆ ಮಾಯಕೊಂಡ ವಿಧಾನಸಭೆಯ ಒಟ್ಟು ಮತದಾರರು 1,91, 007 ಮಂದಿ.












Click it and Unblock the Notifications