ಜೈಲಿಗೆ ಹೋಗುವ ಭಯದಿಂದ ಆತ್ಮಹತ್ಯೆಗೆ ಶರಣಾದ ಯುವಕ
ಮಂಗಳೂರು, ಅಕ್ಟೋಬರ್ 8: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿನ್ನಿಕಲ್ಲು ಎಂಬಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದಿದ್ದ ಇಕ್ಬಾಲ್ ಸಾದಿಕ್ (27) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ಇಕ್ಬಾಲ್, ಮೇಕೆ ಮೇಯಿಸಲು ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದ. ಈ ಸಂದರ್ಭ ಸ್ಥಳೀಯರು ಆತನನ್ನು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು. ಆ.29ರಂದು ಪೊಲೀಸರು ಇಕ್ಬಾಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಇಕ್ಬಾಲ್ ಜೈಲು ಪಾಲಾಗಿದ್ದ. ಬಳಿಕ ಈತ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ. ಆದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈತ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ.

ನಿನ್ನೆಯೂ ಮುಂಡೂರು ಬಳಿ ರಫೀಕ್ ಮತ್ತು ಇಕ್ಬಾಲ್ ಸಾದಿಕ್, ಇತರರ ನಡುವೆ ಜಗಳವಾಗಿದ್ದು, ಈ ಬಗ್ಗೆ ರಫೀಕ್ ತನ್ನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸುತ್ತಾನೆ ಎಂದು ತುಂಬಾ ಹೆದರಿದ್ದ ಎನ್ನಲಾಗಿದೆ. ಮೊದಲೇ ಜೈಲಿನ ಅನುಭವ ಇದ್ದು, ಮತ್ತೆ ಜೈಲು ಸೇರುತ್ತೇನೆ ಎಂಬ ಭಯದಿಂದ ಈತ ಅ.7ರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications