ಕರಾವಳಿ ಚುನಾವಣಾ ಅಖಾಡದಲ್ಲಿನ್ನು 'ಯೋಗಿ ಮಾದರಿ' ರಾಜಕೀಯ
ಉಡುಪಿ, ಮಾರ್ಚ್ 13: ಕರಾವಳಿಯಲ್ಲಿ ಮಠಾಧೀಶರುಗಳ ರಾಜಕೀಯ ಪರ್ವ ಆರಂಭವಾಗಲಿದೆ. ಖಾವಿಧಾರಿಗಳು ರಾಜಕೀಯ ಅಖಾಡದಲ್ಲಿ ದಾಳಗಳನ್ನು ಉರುಳಿಸಲು ಆರಂಭಿಸಿದ್ದಾರೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿ ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೋಚರಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಕರಾವಳಿಯಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಲು ಸ್ವಾಮೀಜಿಗಳು ಒಬ್ಬರ ಹಿಂದೆ ಮತ್ತೊಬ್ಬರು ಸಿದ್ಧವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಈಗಾಗಲೇ ಘೋಷಿಸಿದ್ದಾರೆ.
ಬಿಜೆಪಿಯಿಂದ ಕಣಕ್ಕಿಳಿಯಲು ನಿರ್ಧರಿಸಿರುವ ರಾಜಶೇಖರಾನಂದ ಸ್ವಾಮೀಜಿ ಟಿಕೆಟ್ ಗಾಗಿ ಭಾರೀ ಲಾಬಿ ಆರಂಭಿಸಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇಂಗಿತವನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಅಷ್ಟಮಠದ ನಾಡು, ಕೃಷ್ಣನ ನೆಲೆವೀಡು ಉಡುಪಿಯ ಪ್ರಭಾವಿ ಸ್ವಾಮೀಜಿ ಚುನಾವಣೆಗೆ ಸ್ಪರ್ಧೆಸುವ ಘೋಷಣೆ ಮಾಡಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಇಬ್ಬರೂ ಮಠಾಧೀಶರಿಗೆ ರೋಲ್ ಮಾಡಲ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ .
ತನ್ನ ಕಾರ್ಯವೈಖರಿ ಮೂಲಕವೇ ಜನರಿಗೆ ಚಿರಪರಿಚಿತರಾಗಿರುವ ಉಡುಪಿ ಅಷ್ಟಮಠಾಧೀಶರಲ್ಲಿ ಒಬ್ಬರಾದ ಶಿರೂರು ಶ್ರೀಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಹಿರಿಯಡ್ಕದ ಶಿರೂರು ಮೂಲ ಮಠದಲ್ಲಿ ಅವರು ಘೋಷಣೆ ಮಾಡಿದ್ದಾರೆ. ಪಕ್ಷೇತರನಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿರುವ ಶಿರೂರು ಲಕ್ಷ್ಮೀವರ ತೀರ್ಥರು ಒಂದು ವೇಳೆ ಬಿಜೆಪಿ ಟಿಕೆಟ್ ನೀಡಿದರೆ ಬಿಜೆಪಿಯಿಂದಲೇ ಸ್ಪರ್ಧಿಸುವುದಾಗಿ ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ, ರಾಜ್ಯ ಬಿಜೆಪಿಯ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಅಂತ ಹೇಳಿರುವ ಸ್ವಾಮೀಜಿ ಉಡುಪಿಯ ಬಿಜೆಪಿ ನಾಯಕರ ಬಗ್ಗೆ ಅಸಮಾಧಾನ ಇದೆ ಅಂತ ಹೇಳಿದ್ದು, ತಾನು ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಉಡುಪಿ ಬಿಜೆಪಿಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸುತ್ತೇನೆ ಎಂದಿದ್ದಾರೆ.
ಮಾತ್ರವಲ್ಲದೆ ಹಾಲಿ ಸಚಿವ ಪ್ರಮೋದ್ ಮದ್ವರಾಜ್ ಅವರು ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಕೊಂಡಾಡಿರುವ ಸ್ವಾಮೀಜಿ, ರಾಜ್ಯಕ್ಕೆ ಪ್ರಮೋದ್ ರೋಲ್ ಮಾಡೆಲ್ ಅಂತ ಗೊಂದಲದ ಹೇಳಿಕೆಯನ್ನೂ ನೀಡಿದ್ದಾರೆ. ಏನೇ ಆಗಲಿ ತಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಂತೂ ಖಚಿತ ಅಂತ ಹೇಳಿದ್ದಾರೆ.
ಉಡುಪಿಯ ಶಿರೂರು ಶ್ರೀಗಳ ರಾಜಕೀಯ ಎಂಟ್ರಿ ಇದೀಗ ಸಾರ್ವಜನಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಷ್ಟ ಮಠಾಧೀಶರು ಅದರಲ್ಲೂ ಕೃಷ್ಣನ ಪೂಜೆ ಮಾಡುವ ಶ್ರೀಗಳು ರಾಜಕೀಯಕ್ಕೆ ಸೇರಬಾರದಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ. ಅದರಲ್ಲೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದರೆ ಅದು ಕಾಂಗ್ರೆಸ್ ಗೆ ವರದಾನವಾಗಲಿದೆ ಎಂದು ಹೇಳಲಾಗಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಈಗಾಗಲೇ ಮಾಜಿ ಶಾಸಕ ರಘುಪತಿ ಭಟ್ ಹಾಗೂ ರಾಜ್ಯ ಕಾರ್ಯಕಾರಣಿ ಸದಸ್ಯ ಉದಯ್ ಕುಮಾರ್ ಶೆಟ್ಟಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ . ಶಿರೂರು ಶ್ರೀಗಳ ರಾಜಕೀಯ ಪ್ರವೇಶದಿಂದ ಬಿಜೆಪಿ ಕಂಗಾಲಾಗಿದ್ದು ಸ್ವಾಮೀಜಿ ಬಳಿ ಮಾತುಕತೆ ನಡೆಸಿ, ಮನವೊಲಿಸಲು ಪ್ರಯತ್ನಕ್ಕೆ ಮುಂದಾಗಿದೆ.












Click it and Unblock the Notifications