Gruhalakshmi Scheme: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಹಣದಲ್ಲಿ ಪತಿಗೆ ಸ್ಕೂಟರ್ ಕೊಡಿಸಿದ ಪತ್ನಿ
Gruhalakshmi Scheme: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಮಹತ್ವದ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡಲಾಗುತ್ತಿದೆ. ಈಗಾಗಲೇ ಈ ಯೋಜನೆಯ ಹಣವನ್ನೇ ಬಳಸಿಕೊಂಡು ಮಹಿಳೆಯರು ಗೃಹ ಉಪಯೋಗಿ ವಸ್ತುಗಳು, ತಮ್ಮ ಮಕ್ಕಳಿಗೆ ವಾಹನಗಳನ್ನು ಕೊಡಿಸಿದ ಉದಾಹರಣೆಗಳಿವೆ.
ಹಾಗೆಯೇ ಇದೀಗ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಗೃಹಿಣಿಯೊಬ್ಬರು ತನ್ನ ಪತಿಗೆ ಸ್ಕೂಟರ್ ಕೊಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಾಗಾದರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ದಕ್ಷಿಣ ಕನ್ನಡ ಜಿಲ್ಲೆಯ ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಸ್ರಿಯಾ ಎಂಬವರು ತನ್ನ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಹಣದಿಂದ ಪತಿ ಸಲೀಂರಿಗಾಗಿ ಸ್ಕೂಟರ್ ಖರೀದಿ ಮಾಡಿದ್ದಾರೆ. ವೃತ್ತಿಯಲ್ಲಿ ಪೇಂಟರ್ ಆಗಿರುವ ಸಲೀಂ ನಿತ್ಯ ದೂರದ ಊರುಗಳಿಗೆ ಪೇಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಪತಿ ಕೆಲಸಕ್ಕೆ ತೆರಳಲು ಪತ್ನಿ ಮಿಸ್ರಿಯಾರ ಗೃಹಲಕ್ಷ್ಮಿ ಹಣ ಇದೀಗ ನೆರವಾದಂತಾಗಿದೆ.
ಇನ್ನು ಪತ್ನಿ ಕೊಡಿಸಿದ ತನ್ನ ಸ್ಕೂಟರ್ ಮೇಲೆ ಸಲೀಂ ಆರ್ಥಿಕ ನೆರವು ಗೃಹಲಕ್ಷ್ಮಿ ಎಂಬ ಭಿತ್ತಿಪತ್ರ ಅಂಟಿಸಿದ್ದಾರೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರ ಫೊಟೋ ಹಾಕಿಸಿದ್ದಾರೆ.
ಸನ್ಮಾನ ಸಲೀಂ ತನ್ನ ಪತ್ನಿ ನೀಡಿದ ಸ್ಕೂಟರ್‌ನೊಂದಿಗೆ ಶಾಸಕರನ್ನು ಭೇಟಿಯಾಗಿ ಸರ್ಕಾರದ ಗೃಹಲಕ್ಷ್ಮೀ ಹಣದಿಂದ ತನ್ನ ಬಾಳು ಬೆಳಗಿದೆ ಎಂದು ಹೇಳಿದ್ದಾರೆ. ತನಗೆ ಕೆಲಸಕ್ಕೆ ತೆರಳಲು ಈ ವಾಹನ ನೆರವಾಗಲಿದೆ. ಸರ್ಕಾರಕ್ಕೆ ಹಾಗೂ ಶಾಸಕರಿಗೆ ಅಭಿನಂದನೆ ತಿಳಿಸಿದರು. ಇದೇ ವೇಳೆ ಶಾಸಕರು ಸಲೀಂ ಅವರನ್ನು ಸನ್ಮಾನಿಸಿ ಗೌರವಿಸಿದರು.
ಯಾವೆಲ್ಲ ವಸ್ತುಗಳನ್ನು ಖರೀದಿಸಿದ್ದಾರೆ?: ಇತ್ತೀಚೆಗಷ್ಟೇ ಗೃಹಲಕ್ಷ್ಮೀ ಹಣದಿಂದ ಮಹಿಳೆಯೊಬ್ಬರು ಫ್ರಿಡ್ಜ್ ಖರೀದಿ ಮಾಡಿದ್ದು, ಮತ್ತೊಬ್ಬ ಮಹಿಳೆ ಗೃಹಲಕ್ಷ್ಮಿ ಹಣದಿಂದ ಫ್ಯಾನ್ಸಿ ಸ್ಟೋರ್ ಆರಂಭ ಮಾಡಿದ್ದರು. ಅಜ್ಜಿಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದು. ಅಲ್ಲದೆ, ಇದೇ ಯೋಜನೆಯ ಹಣದಿಂದ ಮಹಿಳೆಯೊಬ್ಬರು ತಮ್ಮ ಪತಿಯ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿತ್ತು. ಅಲ್ಲದೆ ಬೆಳಗಾವಿಯಲ್ಲಿ ಮಹಿಳೆಯೋಬ್ಬರು ತನ್ನ ಮಗನಿಗೆ ಬೈಕ್ ಬುಕ್ ಮಾಡಿದ ಘಟನೆ ನಡೆದಿದೆ.
ಬೆಳಗಾವಿಯ ಅನಿತಾ ಎಂಬ ಬಡ ಮಹಿಳೆಯೊಬ್ಬರಿಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದು, ಅವರು ಆ ಹಣದಿಂದ ತಮ್ಮ ಪತಿಯ ಕಣ್ಣಿನ ಆಪರೇಷನ್ ಮಾಡಿಸಿದ್ದರು. ಇದೀಗ ಇದೇ ಬೆಳಗಾವಿಯಲ್ಲಿ ಮಹಿಳೆಯೊಬ್ಬರು ಈ ಗೃಹ ಲಕ್ಷ್ಮಿ ಹಣದಿಂದ ತನ್ನ ಪುತ್ರನಿಗೆ ಬೈಕ್ ಬುಕ್ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ಸಣ್ಣಕ್ಕಿ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಪುತ್ರ ರಮೇಶ ನೀಲಪ್ಪನಿಗೆ ಬೈಕ್ ಖರೀದಿಸಲು ಮುಂಗಡವಾಗಿ ಕಟ್ಟಿದ್ದಾರೆ. ಇದರಿಂದ ದ್ವಿಚಕ್ರ ವಾಹನ ಕೊಳ್ಳಲು ತಾಯಿ ಗೃಹಲಕ್ಷ್ಮಿ ಹಣ ನೀಡಿರುವುದಕ್ಕೆ ಮತ ರಮೇಶ್ ಸಂತಸಗೊಂಡಿದ್ದಾನೆ.
ಇನ್ನು ಈ ವಿಚಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಮನಕ್ಕೆ ಬಂದಿದ್ದು, ಕೂಡಲೇ ಬಾಗವ್ವ ಸಣ್ಣಕ್ಕಿ ಅವರಿಗೆ ಪತ್ರ ಬರೆದು ಮಹಿಳೆಯ ಕಾರ್ಯಕ್ಕೆ ಶ್ಲಾಘಿಸಿದ್ದಾರೆ. ಅಲ್ಲದೇ ತಮ್ಮ ತಾಯಿಯ ಗೃಹ ಲಕ್ಷ್ಮಿ ಹಣದಿಂದಲೇ ಹೊಸ ಬೈಕ್ ಕೊಳ್ಳುತ್ತಿರುವ ರಮೇಶನಿಗೆ ಶುಭಾಶಯ ಕೋರಿದ್ದರು.












Click it and Unblock the Notifications