ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್, ಮಂಗಳೂರಿನಲ್ಲಿ ಐಟಿ-ಬಿಟಿ ಕಂಪೆನಿ: ರಾಜ್ಯ ಬಜೆಟ್ ಮೇಲೆ ಕರಾವಳಿಗರ ನಿರೀಕ್ಷೆಗಳೇನು?
ಮಂಗಳೂರು, ಫೆಬ್ರವರಿ 15: ರಾಜ್ಯ ಬಜೆಟ್‌ಗೆ ದಿನಗಣನೆ ಆರಂಭವಾಗಿದೆ. ಸಹಜವಾಗಿ ನಿರೀಕ್ಷೆಗಳು ಗರಿಗೆದರಿದೆ. ಕಡಲ ನಗರಿ ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುವ ಚೊಚ್ಚಲ ಬಜೆಟ್ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಬಜೆಟ್‌ನಲ್ಲಿ ಮೀನುಗಾರಿಕೆ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಿದೆ. ಸ್ಮಾರ್ಟ್ ಸಿಟಿ ಅನುದಾನದಿಂದ ಮೀನುಗಾರಿಕಾ ಬಂದರು ಅಭಿವೃದ್ಧಿ ಆಗಬೇಕಿತ್ತು, ಆದರೆ ಅದು ಆಗಿಲ್ಲ. ಆಹಾರ ಸಂಸ್ಕರಣಾ, ಶೇಖರಣಾ ಘಟಕದ ನಿರ್ಮಾಣವಾಗಬೇಕು. ಇದರಿಂದ ಕರಾವಳಿಯಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಸಮುದ್ರ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮಕ್ಕೆ ವ್ಯವಸ್ಥೆ ಆಗಬೇಕು ಎಂದು ಹೇಳಿದರು.

ಇನ್ನು ಮೀನುಗಾರಿಕಾ ಕ್ಷೇತ್ರದ ಬಗ್ಗೆ ನೀರಿಕ್ಷೆಗಳನ್ನು ಹಂಚಿಕೊಂಡ ಮೀನುಗಾರಿಕಾ ಬೋಟ್ ಮಾಲಕ ರಾಜರತ್ನ ಸನಿಲ್, ಸರ್ಕಾರ ಕಡಲ ಮಕ್ಕಳ ನೆರವಿಗೆ ನಿಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಬಂದರು ವಿಸ್ತರಣೆಗೆ ಕೇಂದ್ರಕ್ಕೆ ಒತ್ತಡಕ್ಕೆ ತರುವ ಜೊತೆಗೆ ಅಪಾರ ನಷ್ಟ ಹೊಂದಿದ ಮೀನುಗಾರರಿಗೆ ನೆರವು ನೀಡಲು ಸರ್ಕಾರ ಯೋಜನೆ ರೂಪಿಸಬೇಕು.
ಮಂಗಳೂರು ಬಂದರಿನಲ್ಲಿ ಮೀನು ಮಾರಾಟಗಾರ ಮಹಿಳೆಯರು ಬಿಸಿಲು, ಮಳೆಗೆ ಹೈರಾಣಾಗಿದ್ದಾರೆ. ಅವರಿಗೆ ಶಾಶ್ವತ ಶೆಡ್ ನಿರ್ಮಾಣ ಮಾಡಬೇಕು. ಮೀನುಗಾರ ಮಹಿಳೆಯರಿಗೆ ಸ್ವ ಉದ್ಯೋಗ ನೀಡಲು ಸರ್ಕಾರ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಇನ್ನು ಮಂಗಳೂರಿನ ಮಲ್ಲಿಕಟ್ಟೆಯ ಗೃಹಿಣಿ ಸುಮತಿ ಮಾತನಾಡಿ, "ಮಂಗಳೂರು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬಂದಿದೆ. ಶಿಕ್ಷಣ ಕ್ಷೇತ್ರದಲ್ಲೂ ಮಂಗಳೂರು ಮುಂದಿದೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಆಗಬೇಕು. ಮಂಗಳೂರಿನಲ್ಲಿ ಐಟಿ-ಬಿಟಿ ಕಂಪೆನಿಗಳು ಬರಬೇಕು. ಇಲ್ಲಿ ಶಿಕ್ಷಣ ಕಲಿತ ಹೆಣ್ಣುಮಕ್ಕಳು ಉದ್ಯೋಗಕ್ಕಾಗಿ ಅಪರಿಚಿತ ಪ್ರದೇಶದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.
ಮದುವೆಯಾದ ಹೆಣ್ಣು ಮಕ್ಕಳನ್ನು ಹೊರಗಡೆ ಕೆಲಸಕ್ಕೆ ಕಳುಹಿಸುವುದು ಕಡಿಮೆಯಾಗುತ್ತಿದೆ. ಹೀಗಾಗಿ ಹೆಣ್ಣು ಮಕ್ಕಳಿಗೆ ಪ್ರತಿಭೆಯಿದ್ದರೂ ಈ ಕಾರಣಗಳು ಅಡ್ಡಿಯಾಗುತ್ತಿದೆ. ಹೀಗಾಗಿ ಸರ್ಕಾರ ಮಂಗಳೂರಿನಲ್ಲಿ ಹೂಡಿಕೆದಾರರನ್ನು, ಕಂಪೆನಿಗಳನ್ನು ಸೆಳೆಯಲು ಮುಂದಾಗಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications