ಕಂಬಳದಲ್ಲಿ ಚಿನ್ನ ಗೆದ್ದು ಯಜಮಾನನಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಕೋಣಗಳು
ಮಂಗಳೂರು, ಜನವರಿ 21: ಪುತ್ತೂರಿನ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ತೆರೆಬಿದ್ದಿದೆ. ಜನವರಿ 19 ರಂದು ಶನಿವಾರ ಮುಂಜಾನೆ ಆರಂಭವಾದ ಪುತ್ತೂರಿನ 26 ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಭಾನುವಾರ (ಜನವರಿ 20) ರಂದು ಸಂಜೆಯ ವೇಳೆಗೆ ವಿಜೃಂಭಣೆಯಿಂದ ಸಂಪನ್ನಗೊಂಡಿದೆ. ಈ ಕಂಬಳ ಸ್ಪರ್ಧೆಯಲ್ಲಿ ಜನರ ಗಮನ ಸೆಳೆದಿದ್ದು ಹಗ್ಗ ಹಿರಿಯ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೂಡಬಿದ್ರೆ ಕರಿಂಜೆ ವಿನು ವಿಶ್ವನಾಥ ಶೆಟ್ಟರ ಕೋಣಗಳು.
ಇತ್ತೀಚೆಗೆ ಹೃದಯಾಘಾತದಿಂದ ಕರಿಂಜೆ ವಿನು ವಿಶ್ವನಾಥ ಶೆಟ್ಟಮೃತಪಟ್ಟಿದ್ದರು. ಹಗ್ಗ ಹಿರಿಯ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನು ವಿಶ್ವನಾಥ ಶೆಟ್ಟಿಯವರ ಕೋಣಗಳು ಪ್ರಥಮ ಸ್ಥಾನ ಪಡೆದು ಅಗಲಿದ ಪ್ರೀತಿಯ ಯಜಮಾನನಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದವು.
ಹೊಕ್ಕಾಡಿಗೋಳಿ ಎಂಬಲ್ಲಿ ನಡೆದ ಕಂಬಳದಿಂದ ಹಿಂದೆ ಬರುವ ಸಮಯದಲ್ಲಿ ಹೃದಯಾಘಾತದಿಂದ ವಿನು ಕರಿಂಜೆ ವಿಶ್ವನಾಥ ಶೆಟ್ಟ ನಿಧನರಾದರು. ಹೊಕ್ಕಾಡಿಗೋಳಿ ಕಂಬಳದಲ್ಲಿ ವಿನು ವಿಶ್ವನಾಥ್ ಶೆಟ್ಟರ ಕೋಣಗಳು ಪ್ರಥಮ ಸ್ಥಾನ ಪಡೆದಿದ್ದವು. ಆದರೆ ಆ ಸಂತೋಷ ಸಂಭ್ರಮದಲ್ಲಿ ಪಾಲ್ಗೊಳ್ಳಲು ವಿನು ವಿಶ್ವನಾಥ ಶೆಟ್ಟ ಇರಲಿಲ್ಲ.

ನಂತರ ನಡೆದ ಎರಡು ಕಂಬಳದಲ್ಲಿ ಈ ಕೋಣಗಳು ಭಾಗವಹಿಸಿರಲಿಲ್ಲ. ಆದರೆ ನಿನ್ನೆ ಪುತ್ತೂರಿನಲ್ಲಿ ನಡೆದ ಕೋಟಿ ಚೆನ್ನಯ ಜೋಡು ಕೆರೆ ಕಂಬಳದಲ್ಲಿ ವಿನು ವಿಶ್ವನಾಥ ಶೆಟ್ಟರ ಕೋಣಗಳು ಪಾಲ್ಗೊಂಡು ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡವು. ಈ ಮೂಲಕ ಕಂಬಳದಲ್ಲಿ ಮತ್ತೆ ಯಜಮಾನನ ಹೆಸರು ಮೊಳಗುವಂತೆ ಮಾಡಿದವು.

ಕೋಟಿ ಚಿನ್ನಯ ಜೋಡುಕೆರೆ ಕಂಬಳದಲ್ಲಿ ಒಟ್ಟು 133 ಜೊತೆ ಕೋಣಗಳು ಭಾಗವಹಿಸಿದ್ದವು. ಕಂಬಳದ ಕನೆಹಲಗೆ ಸ್ಪರ್ಧೆಯಲ್ಲಿ 3 ಜೊತೆ, ಅಡ್ಡಹಲಗೆ ಸ್ಪರ್ಧೆಯಲ್ಲಿ 4 ಜೊತೆ, ಹಗ್ಗ ಹಿರಿಯ ಸ್ಪರ್ಧೆಯಲ್ಲಿ 18 ಜೊತೆ, ನೇಗಿಲು ಹಿರಿಯ ಸ್ಪರ್ಧೆಯಲ್ಲಿ 22 ಜೊತೆ, ಹಗ್ಗ ಕಿರಿಯ ಸ್ಪರ್ಧೆಯಲ್ಲಿ 12 ಜೊತೆ, ನೇಗಿಲು ಕಿರಿಯ ಸ್ಪರ್ಧೆಯಲ್ಲಿ 72 ಜೊತೆ ಕೋಣಗಳು ಭಾಗವಹಿಸಿದ್ದವು.












Click it and Unblock the Notifications