ವೈರಲ್ ವಿಡಿಯೋ : 3 ತಿಂಗಳ ಬಳಿಕ ಸತ್ಯವಾಯ್ತು ಹಮೀದ್ ಎಚ್ಚರಿಕೆ
ಮಂಗಳೂರು ಜೂನ್ 26: ಬಂಟ್ವಾಳದ ಮೂಲರಪಟ್ನ ಎಂಬಲ್ಲಿ ನಿನ್ನೆ ಸಂಜೆ ಕುಸಿದಿದ್ದ ಸೇತುವೆಯ ಬಗ್ಗೆ ಸ್ಥಳೀಯರೊಬ್ಬರು 3 ತಿಂಗಳ ಹಿಂದೆ ವ್ಯಕ್ತಪಡಿಸಿದ್ದ ಆತಂಕ ಸತ್ಯವಾಗಿದೆ. ಈ ಕುರಿತ 3 ತಿಂಗಳ ಹಿಂದಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.
ಮೂಲರಪಟ್ನ ನಿವಾಸಿ ಹಮೀದ್ ಎಂಬುವವರು ಮೂರು ತಿಂಗಳ ಹಿಂದೆ ಈ ಸೇತುವೆ ಕುಸಿದು ಬೀಳುವ ಎಚ್ಚರಿಕೆ ನೀಡಿದ್ದರು. ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈಗ ಆ ವಿಡಿಯೋ ವೈರಲ್ ಆಗಿದೆ.
3 ತಿಂಗಳ ಹಿಂದೆ ಹಮೀದ್ ಈ ಸೇತುವೆ ಮೇಲೆ ನಿಂತು ಬ್ಯಾರಿ ಭಾಷೆಯಲ್ಲಿ ಸೇತುವೆ ಕುಸಿಯುವ ಆತಂಕ ವ್ಯಕ್ತಪಡಿಸಿದ್ದರು. "ಈ ಸೇತುವೆಯಲ್ಲಿ ಬಿರುಕು ಬಿಟ್ಟಿದೆ. ನಾನೇನು ಈ ಕುರಿತು ಹೇಳಬೇಕಾಗಿಲ್ಲ. ಈ ಸೇತುವೆ ನಮ್ಮಪ್ಪನಿಗೂ ಬೇಡ, ನನಗೂ ಬೇಡ..ಸೇತುವೆ ಅಂದರೇನು ಗೊತ್ತಾ..? ನೀವು ಎದುರು ಬನ್ನಿ. ಹೆದರಬೇಡಿ.

ನೀವು ದಿನಾಲೂ ಕಾರಿನಲ್ಲಿ ಓಡಾಡುತ್ತೀರಾ. ಈ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ವಿಚಾರ ನನಗೆ ಯಾವಾಗಲೋ ಗೊತ್ತಾಗಿದೆ. ನನ್ನ ಮನೆ ಇಲ್ಲಿಲ್ಲ. ನೀವೇ ಇಲ್ಲಿ ಓಡಾಡೋದು.
ಒಂದು ವೇಳೆ ಸೇತುವೆ ಕುಸಿದರೆ ನೀವು ದೋಣಿಯಲ್ಲಿ ಹೋಗಬೇಕಾದ ಪರಿಸ್ಥಿತಿ ಬರಬಹುದು.
ಮರಳು ತೆಗೆಯುವವರು ಇಲ್ಲಿಗೆ ಬರುತ್ತಾರೆ. ನೀವು ಈ ಬಗ್ಗೆ ಮಾತಾಡಿ. ನಾನು ಮಾತಾಡುತ್ತೇನೆ. ನಾನೇನು ಹೆದರಲ್ಲ" ಎಂದು ಸೇತುವೆ ಮೇಲೆ ನಿಂತು ಬ್ಯಾರಿ ಭಾಷೆಯಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಹಮೀದ್ ಅವರು ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ದರು .
ಅಕ್ರಮ ಮರಳುಗಾರಿಕೆಯಿಂದಾಗಿ ಸೇತುವೆಗೆ ಹಾನಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಆ ವಿಡಿಯೋ ಈಗ ವೈರಲ್ ಆಗಿದ್ದು ಮತ್ತೇ ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ಆರಂಭವಾಗುವ ಲಕ್ಷಣಗಳು ಗೋಚರಿಸತೊಡಗಿದೆ.

ಬಂಟ್ವಾಳ ಮತ್ತು ಮಂಗಳೂರು ಗಡಿ ಭಾಗದಲ್ಲಿರುವ ಈ ಸೇತುವೆ ಕುಸಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದೀಗ ವಾಹನಗಳು ಬಂಟ್ವಾಳ , ಸಿದ್ದಕಟ್ಟೆ, ಸಂಗಬೆಟ್ಟು, ಪುಚ್ಚಮುಗರು,ಮಾರ್ಗ ಮೂಲಕ ಮೂಡಬಿದ್ರೆಯಿಂದ ತೆರಳುವ ಪರಿಸ್ಥಿತಿ ಇದೆ.
ಮೂಲರಪಟ್ನ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಸ್ಥಳಿಯ ಜನರು ಪಕ್ಕದಲ್ಲಿಯೇ ಇರುವ ತೂಗುಸೇತುವೆಯ ಮೂಲಕ ತೆರಳುತ್ತಿದ್ದಾರೆ.












Click it and Unblock the Notifications