'ದಸರಾ, ಕ್ರಿಸ್ಮಸ್ ಹಬ್ಬದ ರಜೆ ವಿಚಾರದಲ್ಲಿ ಇಬ್ಬಗೆಯ ನೀತಿ ಏಕೆ'?
ಮಂಗಳೂರು, ಸೆಪ್ಟೆಂಬರ್.23: ಈ ಬಾರಿ ಶಾಲಾ ಮಕ್ಕಳ ದಸರಾ ರಜೆಯನ್ನು ಶಿಕ್ಷಣ ಇಲಾಖೆ ಕಡಿತಗೊಳಿಸಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಮಂಗಳೂರಿನ ಶಾಲಾ ಮಕ್ಕಳಿಗೆ ಕೊಡುವ ದಸರಾರಜೆಯನ್ನು ಯಾವುದೇ ಕಾರಣಕ್ಕೂ ಕಡಿಮೆಗೊಳಿಸಬಾರದು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕರಾವಳಿಯಲ್ಲಿ ಅದರಲ್ಲೂ ಮಂಗಳೂರಿನಲ್ಲಿ ದಸರಾ ಹಬ್ಬಕ್ಕೆ ವಿಶಿಷ್ಟ ಪ್ರಾಮುಖ್ಯತೆ ಇದೆ. ಮೈಸೂರು ದಸರಾ ಮಹೋತ್ಸವದಂತೆ ಮಂಗಳೂರು ದಸರಾ ಕೂಡ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.
ಮಂಗಳೂರಿನಲ್ಲಿರುವ ಪುರಾತನ ದೇವಿ ದೇವಾಲಯಗಳಾದ ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ, ಮಂಗಳಾದೇವಿ ಸನ್ನಿಧಿಗೆ ದಸರಾ ಸಂದರ್ಭದಲ್ಲಿ ಭಕ್ತಸಾಗರವೇ ಹರಿದುಬರುತ್ತದೆ.

ಹೀಗಿರುವಾಗ ಆ ಸಮಯದಲ್ಲಿ ಮಕ್ಕಳಿಗೆ ರಜೆ ನೀಡುವುದು ಈ ಹಿಂದಿನಿಂದಲೂ ನಡೆಸಿಕೊಂಡು ಬಂದ ಪ್ರತೀತಿಯಾಗಿದೆ. ಮಳೆಗಾಲದಲ್ಲಿ ಉಂಟಾದ ಪ್ರಕೃತಿ ವಿಕೋಪದ ತುರ್ತು ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ದರು.
ಈ ಕಾರಣಕ್ಕಾಗಿ ಶೈಕ್ಷಣಿಕ ದಿನಗಳನ್ನು ಸರಿದೂಗಿಸಲು ದಸರಾ ರಜೆ ಕಡಿತಗೊಳಿಸುವಂತೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಅಕ್ಟೋಬರ್ 7 ರಿಂದ 21 ರವರೆಗೆ ನೀಡಲಾಗುವ ರಜೆಯನ್ನು ಅಕ್ಟೋಬರ್ 14 ರಿಂದ 21 ರ ತನಕ ಸೀಮಿತಗೊಳಿಸಲಾಗಿದೆ. ಇದು ಸರಿಯಲ್ಲ.
ಮಕ್ಕಳಿಗೆ ನವರಾತ್ರಿಯ ಸಮಯದಲ್ಲಿ ನೀಡಲಾಗುವ ರಜೆಯನ್ನು ಯಾವ ಕಾರಣಕ್ಕೂ ಕಡಿಮೆ ಮಾಡಬಾರದು. ಪಕೃತಿ ವಿಕೋಪದ ಸಂದರ್ಭದಲ್ಲಿ ನೀಡಿರುವ ರಜೆಯನ್ನು ಶನಿವಾದ ದಿವಸ ಹೆಚ್ಚುವರಿ ತರಗತಿಗಳನ್ನು ನಡೆಸಿ ಸರಿದೂಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಸ್ಮಸ್ ರಜೆ ನೀಡುವ ವಿಚಾರದಲ್ಲಿ ಆಯಾಯ ಶಾಲಾ ಕಾಲೇಜುಗಳ ವಿವೇಚನೆಗೆ ಬಿಟ್ಟ ನಿರ್ಣಯ ಎಂದಿರುವ ಸರಕಾರ, ದಸರಾ ರಜೆಯನ್ನು ನೀಡುವ ವಿಚಾರವನ್ನು ಕೂಡ ಆಯಾಯ ಶಾಲಾ ಕಾಲೇಜುಗಳ ವಿವೇಚನೆಗೆ ಬಿಡಬೇಕಿತ್ತು.
ಆದರೆ ದಸರಾ ರಜೆ ಕಡಿಮೆ ಮಾಡುವ ಸುತ್ತೋಲೆಯನ್ನು ಸ್ವತಃ ರಾಜ್ಯ ಸರಕಾರವೇ ಹೊರಡಿಸಿರುವುದು ರಾಜ್ಯ ಸರಕಾರದ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.












Click it and Unblock the Notifications