ಉಳ್ಳಾಲ 'ಪಾಕಿಸ್ತಾನ' ಎಂದ ಕಲ್ಲಡ್ಕ ಭಟ್‌ಗೆ ಖಾದರ್ ತಿರುಗೇಟು
ಮಂಗಳೂರು, ಜೂ. 1: ಉಳ್ಳಾಲ ಪಾಕಿಸ್ತಾನ ಎಂದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್‌ಗೆ ಯುಟಿ ಖಾದರ್ ಪರೋಕ್ಷ ತಿರುಗೇಟು ನೀಡಿದ್ದಾರೆ. ಉಳ್ಳಾಲ ಊರನ್ನು ಸಂಪರ್ಕಿಸುವ ಪ್ರಮುಖ ಹೆಬ್ಬಾಗಿಲನ್ನಲ್ಲಿ ಅತೀ ದೊಡ್ಡ ಧ್ವಜಸ್ತಂಭ ಹಾಕಿ ಉಳ್ಳಾಲ ಪಾಕಿಸ್ತಾನ ಅಲ್ಲ ಭಾರತದ ಸೊತ್ತು ಎನ್ನುವ ಸಂದೇಶವನ್ನು ಖಾದರ್ ನೀಡಿದ್ದಾರೆ.
ಉಳ್ಳಾಲದ ಹೆಬ್ಬಾಗಿಲು ತೊಕ್ಕೊಟ್ಟು ಓವರ್ ಬ್ರಿಡ್ಜ್‌ನಲ್ಲಿ ಅತಿ ಎತ್ತರದ ರಾಷ್ಟ್ರಧ್ವಜಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಧ್ವಜಸ್ತಂಭದ ಶಿಲಾನ್ಯಾಸ ಮಾಡಿದ ಯು.ಟಿ ಖಾದರ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಇನ್ನು, ಹಿಂದೆ ಹಲವು ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಕೂಡ ಮಾತನಾಡಿ, ದೇಶದ ಹೊಸ ಪೀಳಿಗೆಯ ಮುಸ್ಲಿಮರು ಸಮಾಜದಲ್ಲಿ ಸೌಹಾರ್ದಯುತವಾಗಿ ಬದುಕಲಿ ಎಂದು ಕರೆ ನೀಡಿದ್ದರು. ಉಳ್ಳಾಲ ಮಿನಿ ಪಾಕಿಸ್ತಾನ ಆಗಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಮಾಜಿ ಗೃಹ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಯು ಟಿ ಖಾದರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಕಲ್ಲಡ್ಕ ಭಟ್ ಹೆಸರೆತ್ತದೇ ಟಾಂಟ್
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಅತೀ ದೊಡ್ಡ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜ ಉಳ್ಳಾಲದ ಹೆಬ್ಬಾಗಿಲಿನಲ್ಲಿ ಹಾರಾಡಲಿದೆ. ಸುಮಾರು 110 ಅಡಿ ಎತ್ತರದ ಧ್ವಜ ಸ್ತಂಭ ಇದಾಗಲಿದೆ. ಊರಿನಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿದ್ದರೆ ನಮಗೆ ಹೆಮ್ಮೆ ಮತ್ತು ಸ್ವಾಭಿಮಾನ. ಜಿಲ್ಲೆಯಲ್ಲಿ ಅತ್ಯಂತ ಎತ್ತರದ ರಾಷ್ಟ್ರ ಧ್ವಜ ಉಳ್ಳಾಲದಲ್ಲಿ ಹಾರಾಡಲಿದೆ. ರಾಷ್ಟ್ರ ಪ್ರೇಮದ ಸಂದೇಶ ಉಳ್ಳಾಲದಿಂದಲೇ ಹೋಗಬೇಕು. ಇಂದು ಶಂಕುಸ್ಥಾಪನೆ ಆಗಿದೆ, ಆದಷ್ಟು ಬೇಗ ಕಾಮಗಾರಿ ಪೂರೈಸುತ್ತೇವೆ. ಬಹಳ ಪವಿತ್ರತೆಯ ಕೆಲಸವನ್ನು ಮಾಡುತ್ತಿದ್ದೇವೆ. ಉಳ್ಳಾಲದ ಹೆಬ್ಬಾಗಿಲಿನಲ್ಲಿ ರಾಷ್ಟ್ರಧ್ವಜ ಹಾಕಿದ್ದಾರೆ ಎಂಬ ಸಂದೇಶ ಹೋಗಬೇಕು ಅಂತಾ ಯುಟಿ ಖಾದರ್ ಕಲ್ಲಡ್ಕ ಭಟ್ ಹೆಸರೆತ್ತದೇ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ರಾಷ್ಟ್ರ ಧ್ವಜವೇ ಅಂತಿಮ
ಮಂಗಳೂರಿನ ಉಳ್ಳಾಲದ ಹೆಬ್ಬಾಗಿಲು ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಅತಿ ಎತ್ತರದ ರಾಷ್ಟ್ರಧ್ವಜಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಬಳಿಕ ಯು.ಟಿ ಖಾದರ್ ಮಾಧ್ಯಮಗಳೊಂದಿಗೆ ಪ್ರತಿಯೊಬ್ಬ ಭಾರತೀಯನಿಗೆ ಇದರ ಸಂದೇಶ ಅರ್ಥ ಆಗಬೇಕು. ಭಾರತೀಯ ಸಂಸ್ಕೃತಿಯನ್ನು ಕಲಿಸುವುದು ಇದರ ಉದ್ದೇಶವಾಗಿದೆ. ಈ ರಸ್ತೆಯಲ್ಲಿ ಓಡಾಡುವ ಎಲ್ಲರಿಗೆ ಇದು ಗೊತ್ತಾಗಬೇಕು. ಉಳ್ಳಾಲ ಮತ್ತು ಮಂಗಳೂರು ಕ್ಷೇತ್ರದ ಜನರಿಂದ ದೇಶಪ್ರೇಮ ಕಲಿಯಬೇಕು ಅಂತಾ ಖಾದರ್ ಹೇಳಿದ್ದಾರೆ.
ಇದೇ ವೇಳೆ ಮುಂದೊಂದು ದಿನ ಕೇಸರಿ ಧ್ವಜ ರಾಷ್ಟ್ರವಾದ ದೂರವಾಗುತ್ತದೆ ಎಂದಿದ್ದ ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಖಾದರ್, ಬಿ.ಆರ್ ಅಂಬೇಡ್ಕರ್ ಬರೆದ ಸಂವಿಧಾನ ಅಂತಿಮ. ಭಾರತ ದೇಶದ ರಾಷ್ಟ್ರ ಧ್ವಜವೇ ಅಂತಿಮ. ಈಶ್ವರಪ್ಪ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಓಡಾಡುತ್ತಾರೆ ಎಂಬ ವಿಶ್ವಾಸ ಇದೆ ಅಂತಾ ಹೇಳಿದ್ದಾರೆ.

ಸಂಘರ್ಷದಿಂದ ಸಮಸ್ಯೆ ಬಗೆಹರಿಯುವುದಿಲ್ಲ
ಇನ್ನು ಪ್ರಸ್ತುತ ಬೆಳವಣಿಗೆ ಗಳ ಬಗ್ಗೆ ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಕೂಡಾ ಮಾತನಾಡಿದ್ದಾರೆ. ದೇಶದ ಮುಸಲ್ಮಾನರು ಹಿಂದಿನವರೊಂದಿಗೆ ತಮ್ಮನ್ನು ಜೋಡಿಸಿಕೊಳ್ಳಬಾರದು. ದೇಶದಲ್ಲಿ ಇರುವ ಮುಸಲ್ಮಾನರೆಲ್ಲಾ ನಮ್ಮವರೇ. ದೇಶದ ಮುಸ್ಲೀಮರು ಯಾವುದೋ ಸಂದರ್ಭದಲ್ಲಿ ಇಸ್ಲಾಂ ಅನ್ನು ಸ್ವೀಕರಿಸಿದವರು. ಇದಕ್ಕೆ ನಮ್ಮ ತಕರಾರಿಲ್ಲ. ದೇಶವನ್ನು ಆಳಿದ ವಿದೇಶಿ ಮುಸಲ್ಮಾನ ರಾಜರು ದೇವಸ್ಥಾನಗಳನ್ನು ಕೆಡವಿ ಮಸೀದಿ ಮಾಡಿಕೊಂಡಿದ್ದಾರೆ. ಇದೀಗ ಈ ದೇವಸ್ಥಾನಗಳ ಅಸ್ತಿತ್ವ ಬೆಳಕಿಗೆ ಬರುತ್ತಿದೆ.
ಈ ಸಮಯದಲ್ಲಿ ದೇಶದ ಮುಸಲ್ಮಾನರು ವಿದೇಶೀ ಮುಸಲ್ಮಾನರ ದೌರ್ಜನ್ಯವನ್ನು ಸಮರ್ಥಿಸಬಾರದು. ರಾವಣ ಬ್ರಾಹ್ಮಣ ಸಮಾಜಕ್ಕೆ ಸೇರಿದ ರಾಕ್ಷಸ.ಹಾಗೆಂದು ಬ್ರಾಹ್ಮಣರ್ಯಾರು ಆತನನ್ನು ಸಮರ್ಥಿಸಿಕೊಂಡಿಲ್ಲ. ಆತನ ಹೆಸರನ್ನು ಮಕ್ಕಳಿಗೆ ಇಟ್ಟಿಲ್ಲ. ವಿದೇಶೀ ಮುಸ್ಲಿಂ ರಾಜರೂ ಇದೇ ವರ್ಗಕ್ಕೆ ಸೇರಿದವರು. ಮಸೀದಿಗಳಲ್ಲಿ ದೇವಸ್ಥಾನ ಪತ್ತೆಯಾದರೆ ಅದನ್ನು ಸೌಹಾರ್ದದ ಮೂಲಕ ಬಗೆಹರಿಸಿಕೊಳ್ಳಬೇಕು. ಸಂಘರ್ಷದಿಂದ ಸಮಸ್ಯೆ ಬಗೆಹರಿಯುವುದಿಲ್ಲ ಅಂತಾ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ದೇಶಕ್ಕೋಸ್ಕರ ಸೇವೆ ಮಾಡಿದ ಆರ್ ಎಸ್ಎಸ್
ಇನ್ನು ಆರ್ ಎಸ್ ಎಸ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಭಟ್, "ದೇಶಕ್ಕೋಸ್ಕರ ಸೇವೆ ಮಾಡಿದ ಆರ್ ಎಸ್ಎಸ್ ದೇಶದ್ರೋಹಿ, ನಪುಂಸಕ ಆಗೋದು ಹೇಗೆ. ದೇಶದ್ರೋಹಿ, ನಪುಂಸಕ ಹೇಳೋದಕ್ಕೆ ಇನ್ನೇನು ಅರ್ಥ ಇದೆ? ದೇಶದಲ್ಲಿ ಎಲ್ಲೇ ಅವಘಡ ಆದರೂ ಸಂಘದ ಕಾರ್ಯಕರ್ತರು ಅಲ್ಲಿ ಮೊದಲು ಹಾಜರಾಗಾಗುತ್ತಾರೆ. ನೆರೆ, ಬರ ಹೀಗೆ ಎಲ್ಲಾ ಸಮಯದಲ್ಲೂ ಸೇವಾ ಕಾರ್ಯ ಮಾಡುತ್ತದೆ. ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಕೂಡಾ ಆರ್ಎಸ್ಎಸ್ ಅನ್ನು ಹೊಗಳಿದ್ದಾರೆ. ದೇಶವನ್ನು ಪ್ರೀತಿಸುವ ಆರ್ ಎಸ್ಎಸ್ ದೇಶದ್ರೋಹಿ, ನಪುಂಸಕ ಸಂಘಟನೆ ಹೇಗಾಗುತ್ತದೆ. ಹಾಗಾದರೆ ದೇಶದ್ರೋಹಿ, ನಪುಂಸಕ ಎನ್ನುವುದಕ್ಕೆ ಬೇರೆ ಅರ್ಥ ಏನಿದೆ?" ಎಂದು ಪ್ರಶ್ನೆ ಮಾಡಿದ್ದಾರೆ.
"ಆರ್‌ಎಸ್ಎಸ್ ದಿನನಿತ್ಯ ಭಾರತ್ ಮಾತಾ ಕಿ ಜೈ ಹೇಳುತ್ತದೆ. ಆದರೆ ಕಾಂಗ್ರೆಸ್ ಕೇವಲ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಮಾತ್ರ ಧ್ವಜ ಹಿಡಿದು ಭಾರತ್ ಮಾತಾ ಕಿ ಜೈ ಹೇಳಿರೋದು. ಕಾಂಗ್ರೇಸ್ ಇಟಲಿಗೆ, ಇನ್ಯಾರಿಗೋ ಜೈ ಹೇಳುವ ಪಕ್ಷ. ದೇಶವನ್ನು ವಿಭಜನೆ ಮಾಡಿ ಇಂದಿಗೂ ದೇಶಕ್ಕೆ ದೊಡ್ಡ ಗಂಡಾಂತರ ತಂದೊಡ್ಡಿದ್ದು ಯಾರು. ದೇಶ ವಿಭಜನೆಗೆ ನೆಹರೂ, ಗಾಂಧೀಜಿ, ಕಾಂಗ್ರೆಸ್ ಕಾರಣ. ಈ ಕಾರಣಕ್ಕಾಗಿಯೇ ಇಂದು ದೇಶದ ಒಳಗೆ ಮತ್ತು ಹೊರಗೆ ಪಾಕಿಸ್ತಾನಕ್ಕೆ ಜೈ ಘೋಷಣೆ ಕೂಗಲಾಗುತ್ತಿದೆ" ಅಂತಾ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.












Click it and Unblock the Notifications