ಭೂಗತ ಪಾತಕಿ ರವಿ ಪೂಜಾರಿ ಸಹಚರ ಬಂಧನ

ಬಂಧಿಸಲಾದ ಮೊಹಮ್ಮದ್ ಆಸೀಫ್ ಅಲಿಯಾಸ್ ಮುನ್ನ (30) ತಲಪಾಡಿ ಗ್ರಾಮದಲ್ಲಿ ನಡೆದ ಶೂಟೌಟ್, 25 ಲಕ್ಷ ಕೋಟಾ ನೋಟು ಸಾಗಣೆ ಮುಂತಾದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಬಳಿಯಿದ್ದ ಮೂರು ಸಜೀವ ಮದ್ದುಗುಂಡುಗಳು ಹಾಗೂ ಎರಡು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಕೇಶವ ಅವರ ಹತ್ಯೆಗೆ ಯತ್ನಿಸಿದ ಆರೋಪಿಗಳಿಗೆ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ಮುನ್ನ ಸರಬರಾಜು ಮಾಡಿದ್ದ ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. 2007ರಲ್ಲಿ ದುಬೈಯಿಂದ ಬೆಂಗಳೂರಿಗೆ 25 ಲಕ್ಷ ಮೌಲ್ಯದ ಖೋಟಾ ನೋಟನ್ನು ಸಾಗಾಟ ಮಾಡಿದ ಪ್ರಕರಣದಲ್ಲಿ ಕೂಡಾ ಈತ ಪ್ರಮುಖ ಆರೋಪಿಯಾಗಿದ್ದ.
ಕಾಸರಗೋಡು ಪೊಲೀಸರಿಗೂ ಬೇಕಾಗಿದ್ದ : ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣ, ಕಾಸರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಉದ್ಯಮಿ ಎಂ.ಟಿ ಮೊಹಮ್ಮದ್ ಮೇಲಿನ ಗುಂಡಿನ ದಾಳಿ ಪ್ರಕರಣ, ಎಂಬವರ ಮೇಲೆ ಗುಂಡು ಹಾರಾಟ ಪ್ರಕರಣ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣದಲ್ಲಿ ಮುನ್ನ ಪ್ರಮುಖ ಆರೋಪಿಯಾಗಿದ್ದ.
ಮಂಗಳೂರು ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಡಾ:ಜಗದೀಶ್ ಮತ್ತು ಅಪರಾಧ ವಿಭಾಗದ ಡಿ.ಸಿ.ಪಿ ವಿಷ್ಣುವರ್ಧನ ಅವರ ಈ ಕಾರ್ಯಾಚರಣೆ ನಡೆದಿದ್ದು, ಸಿಸಿಬಿ ಘಟಕದ ಇನ್ಸ್ ಪೆಕ್ಟರ್, ವೆಲೆಂಟೈನ್ ಡಿಸೋಜ, ಪಿಎಸ್ಐ ಶ್ಯಾಮ್ ಸುಂದರ್, ಸಿಬ್ಬಂದಿಗಳಾದ ಶಶಿಧರ ಶೆಟ್ಟಿ, ಗಣೇಶ್.ಎಂ.ಪಿ, ವೇಣುಗೋಪಾಲ ಮುಂತಾದವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications