2 ಕಾರು, 6 ನಿಮಿಷ: ಉಳ್ಳಾಲ ಬ್ಯಾಂಕ್ ದರೋಡೆ ಮತ್ತಷ್ಟು ವಿವರ ಬಹಿರಂಗ
ಮಂಗಳೂರು, ಜನವರಿ 19: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆಸಿ ರೋಡ್ ಶಾಖೆಯ ದರೋಡೆ ಪ್ರಕರಣದ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿದ್ದ ಸಂದರ್ಭದಲ್ಲಿಯೇ ಈ ದರೋಡೆ ಪ್ರಕರಣದ ನಡೆದಿದ್ದು, ವಿರೋಧ ಪಕ್ಷಗಳು ಟೀಕೆಗಳನ್ನು ಮಾಡಲು ಕಾರಣವಾಗಿದೆ.
ಉಳ್ಳಾಲ ತಾಲೂಕಿನ ಕೆಸಿ ರೋಡ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನುಗ್ಗಿದ 6 ದುಷ್ಕರ್ಮಿಗಳು ಚಿನ್ನ, ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಸದ್ಯದ ಮಾಹಿತಿಯಂತೆ 11 ಲಕ್ಷ ನಗದು, ಅಂದಾಜು 14 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ.

ಈ ಪ್ರಕರಣದ ಕುರಿತು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಈ ದರೋಡೆ ಕೃತ್ಯಕ್ಕೆ ಒಂದಲ್ಲ, ಎರಡು ಕಾರು ಬಳಸಿದ್ದರು ಎಂಬ ಮಾಹಿತಿ ಈಗ ಸಿಕ್ಕಿದೆ. ಕಾರು ಕೇರಳ ಕಡೆ ಹೋಗಿರುವ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಕಲಿ ನಂಬರ್ ಪ್ಲೇಟ್: ಕೃತ್ಯಕ್ಕೆ ಬಳಕೆ ಮಾಡಿದ ಎರಡು ಕಾರು ನಕಲಿ ನಂಬರ್ ಪ್ಲೇಟ್ ಹೊಂದಿದ್ದವು. ಒಂದು ಕಾರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿ ಟೋಲ್‌ಗೇಟ್ ಮೂಲಕ ಕೇರಳತ್ತ ಸಾಗಿದೆ. ಇನ್ನೊಂದು ಕಾರು ಮಂಗಳೂರಿನತ್ತ ಸಾಗಿದೆ.
6 ಜನರ ತಂಡ ಸರಿಯಾದ ಯೋಜನೆ ರೂಪಿಸಿಯೇ ಶುಕ್ರವಾರ ಈ ಕೃತ್ಯ ಎಸಗಿದೆ. ಮಧ್ಯಾಹ್ನ 1 ಗಂಟೆ 9 ನಿಮಿಷಕ್ಕೆ ಬ್ಯಾಂಕ್‌ಗೆ ನುಗ್ಗಿದ ಗ್ಯಾಂಗ್ 1.15ಕ್ಕೆ ಸಿಕ್ಕಷ್ಟು ಹಣ, ಚಿನ್ನವನ್ನು ದೋಚಿ ಪರಾರಿಯಾಗಿದೆ. 1.20ಕ್ಕೆ ಒಂದು ಕಾರು ತಲಪಾಡಿ ಟೋಲ್‌ಗೇಟ್ ಮೂಲಕ ಹಾದು ಹೋಗಿದೆ.
ಮುಖ್ಯಮಂತ್ರಿಗಳ ಪೋಸ್ಟ್: ಕೋಟೆಕರ್ ಉಲ್ಲಾಳದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಭೆ ನಡೆಸಿ ಶೀಘ್ರ ಆರೋಪಿಗಳ ಪತ್ತೆಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ದರೋಡೆ ಮಾಡಿ ಆರೋಪಿಗಳು ಇಷ್ಟು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ?. ಎಷ್ಟೆಲ್ಲಾ ಟೋಲ್‌ಗಳನ್ನು ದಾಟಿ ಹೋಗಿದ್ದಾರೆ, ತಕ್ಷಣ ಟೋಲ್‌ಗಳನ್ನು ಏಕೆ ಬಿಗಿ ಮಾಡಲಿಲ್ಲ?. ಎಲ್ಲಾ ಟೋಲ್‌ಗಳಲ್ಲೂ ಬಿಗಿ ತಪಾಸಣೆ ನಡೆಸಬೇಕು. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಪ್ಪಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಈ ಪ್ರಕರಣದ ತನಿಖೆಗೆ 4 ತಂಡಗಳನ್ನು ರಚನೆ ಮಾಡಲಾಗಿದೆ. ದರೋಡೆಕೋರರು ಸಿಬ್ಬಂದಿಗಳ ಮೊಬೈಲ್‌ಗಳನ್ನು ಕಿತ್ತುಕೊಂಡಿದ್ದರು. ಮೂರು ಮೊಬೈಲ್‌ಗಳನ್ನು ಕಛೇರಿ ಮೆಟ್ಟಿಲು ಬಳಿ ಎಸೆದಿದ್ದಾರೆ. ಒಂದು ಮೊಬೈಲ್ ತಲಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆಯಾಗಿದೆ. ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್, ಹಿರಿಯ ಪೊಲೀಸ್ ಅಧಿಕಾರಿಗಳು ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದರೋಡೆಕೋರರು ಕಾರನ್ನು ಅಜ್ಞಾತ ಸ್ಥಳದಲ್ಲಿ ಬಿಟ್ಟು ಬೋಟ್ ಮೂಲಕ ಕೇರಳಕ್ಕೆ ಪರಾರಿಯಾಗಿದ್ದಾರೆ ಎಂಬ ಆಯಾಮದಲ್ಲಿಯೂ ತನಿಖೆಯನ್ನು ಕೈಗೊಳ್ಳಲಾಗಿದೆ. ಟೋಲ್ ಬೂತ್‌ನಲ್ಲಿ ಪತ್ತೆಯಾದ ಕಾರಿನಲ್ಲಿ ಇಬ್ಬರು ಮಾತ್ರ ಕೂತಿರುವುದು ಕಂಡುಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಮ್ಮ ವ್ಯಾಪ್ತಿಗಳಲ್ಲಿರುವ ಬ್ಯಾಂಕ್ ಹಾಗೂ ಸಹಕಾರಿ ಸೊಸೈಟಿಗಳ ಮುಖ್ಯಸ್ಥರು/ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬ್ಯಾಂಕ್/ ಸೊಸೈಟಿಗಳ ಭದ್ರತೆಯ ಕುರಿತು ಸೂಕ್ತ ತಿಳುವಳಿಕೆಯನ್ನು ನೀಡಿದ್ದಾರೆ.












Click it and Unblock the Notifications