ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್ ಮಾಡುವುದಾದರೆ ಎಚ್ಚರ; ನಿಮ್ಮ ಹಣಕ್ಕೆ ಹೊಂಚು ಹಾಕುತ್ತಿದೆ ಟಿಬೆಟಿಯನ್ ಟೀಂ
ಮಂಗಳೂರು, ನವೆಂಬರ್ 11: ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರೂ ಇರುತ್ತಾರೆ ಅನ್ನುವ ಮಾತು ಮತ್ತೆ ನಿಜವಾಗಿದೆ. ಕ್ರೆಡಿಟ್ ಕಾರ್ಡ್ ಸಹವಾಸ ಸಾಕೇ ಸಾಕು ಅಂತಾ ಕಾರ್ಡ್ ಕ್ಯಾನ್ಸಲೇಷನ್ ಮಾಡಿದವರ ಹಣ ದೋಚಿದ ಪ್ರಸಂಗ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಚೀನಾದ ನಿಷೇಧಿತ ಆ್ಯಪ್ ಬಳಸಿ ಇಬ್ಬರು ಟಿಬೇಟಿಯನ್ನರು ಮಂಗಳೂರಿನ ವ್ಯಕ್ತಿಯ ಹಣ ದೋಚಿದ್ದು, ಸದ್ಯ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದು, ರಾಜ್ಯ ಕರಾವಳಿಯಲ್ಲಿ ವಾಸಿಸುತ್ತಿರುವ ಟಿಬೆಟ್ ಮೂಲದ ಪ್ರಜೆಗಳು ಬಂಧಿತ ಆರೋಪಿಗಳಾಗಿದ್ದಾರೆ.
ಕ್ರೆಡಿಟ್ ಕಾರ್ಡ್ ಕ್ಯಾನ್ಸಲೇಶನ್ ಮಾಡಿಸಲು ಮನವಿ ಮಾಡುತ್ತಿದ್ದವರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಆರೋಪಿಗಳು, ನಿಷೇಧಿತ ಚೀನಾ ಆ್ಯಪ್ ಬಳಸಿ ಹಣ ಲಪಟಾಯಿಸುತ್ತಿದ್ದರು. ಬಂಧಿತರ ಮಾಫಿಯಾ ದೊಡ್ಡ ಮಟ್ಟದಲ್ಲಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕ್ರೆಡಿಟ್ ಕಾರ್ಡ್ ಮೂಲಕ ಸಾರ್ವಜನಿಕರ ಗಮನಕ್ಕೆ ಬಾರದೇ ಹಣವನ್ನು ಮೋಸದಿಂದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದ ಖತರ್ನಾಕ್ ಆರೋಪಿಗಳಾದ ಲೋಬಸಂಗ್ ಸಂಗ್ಯೆ, ದಪಕ ಪುಂದೇ ಎಂಬ ಹೆಸರಿನ ಇಬ್ಬರನ್ನು ಮಂಗಳೂರು ಪೊಲೀಸರು ಬಂಧನ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡುವಿನ ಟಿಬೇಟಿಯನ್ ಕಾಲೊನಿಯಲ್ಲಿ ಇವರು ವಾಸಿಸುತ್ತಿದ್ದು, ಚೀನಾ ಆ್ಯಪ್ ಬಳಸಿ ಜನರ ಹಣವನ್ನು ದೋಚುತ್ತಿದ್ದರು.
ಕ್ರೆಡಿಟ್ ಕಾರ್ಡ್ ಕ್ಯಾನ್ಸಲೇಶನ್ ಮಾಡಿಸಲು ಮನವಿ ಮಾಡಿದವರಿಗೆ ಕರೆ ಮಾಡುತ್ತಿದ್ದ ಇವರು ಕ್ಯಾನ್ಸಲೇಷನ್‌ಗೆ ಒಟಿಪಿ ಬರುತ್ತದೆ ಎಂದು ಹೇಳಿ ಒಟಿಪಿ ಪಡೆದು ಹಣ ದೋಚುತ್ತಿದ್ದರು. ಇದೇ ರೀತಿ ಮಂಗಳೂರು ಅತ್ತಾವರದ ಅಲೆಕ್ಸಾಂಡರ್ ಎಂಬುವರ ಅಕೌಂಟ್‌ನಿಂದ ಒಂದು ಲಕ್ಷದ ಹನ್ನೆರಡು ಸಾವಿರ ಹಣ ಎಗರಿಸಿ ಇದೀಗ ಅಂದರ್ ಆಗಿದ್ದಾರೆ.
ವಿವಿಧ ಬ್ಯಾಂಕ್‌ಗಳಿಗೆ ಸೇರಿದ ಕ್ರೆಡಿಟ್ ಕಾರ್ಡ್ ಬಳಕೆದಾರರನ್ನು ಈ ರೀತಿಯಾಗಿ ಮೋಸ ಮಾಡಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಕೇವಲ ಮಂಗಳೂರು ಮಾತ್ರವಲ್ಲದೆ, ರಾಜ್ಯ, ಹೊರ ರಾಜ್ಯಗಳಲ್ಲೂ ಈ ತಂಡ ಸಕ್ರಿಯವಾಗಿರುವ ಸಾಧ್ಯತೆಗಳಿವೆ.
ಈ ರೀತಿ ದೋಚಿದ ಹಣವನ್ನು ಉತ್ತರಪ್ರದೇಶ, ಮಹಾರಾಷ್ಟ್ರ ಮೂಲದ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡುತ್ತಿದ್ದರು. ಅಲ್ಲಿಂದ ಮತ್ತೆ ಉತ್ತರ ಕನ್ನಡ ಜಿಲ್ಲೆಯ ಕೆನರಾ, ಡಿಸಿಸಿ ಬ್ಯಾಂಕ್‌ನ ತಮ್ಮ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ಈ ಹಣ ವರ್ಗಾವಣೆಯಲ್ಲಿ ಟಿಬೆಟ್ ಕ್ಯಾಂಪ್‌ನಲ್ಲಿರುವ ಓರ್ವ ಟಿಬೆಟ್ ಮೂಲದ ನಾಗರಿಕನ ಕೈವಾಡ ಇರುವುದು ಸಹ ಗೊತ್ತಾಗಿದೆ. ಆದರೆ ಈತನ ಬಂಧನ ಇನ್ನಷ್ಟೇ ಆಗಬೇಕಿದೆ.
ಈ ಹಣವನ್ನು ಚೀನಾದ ನಿಷೇಧಿತ ಆ್ಯಪ್‌ಗಳಾದ ಮೊಬಿವಿಕ್ ವ್ಯಾಲೆಟ್, ವಿಚ್ಯಾಟ್, ರೆಡ್‌ಪ್ಯಾಕ್ ಮೂಲಕ ವರ್ಗಾವಣೆ ಮಾಡುತ್ತಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಈ ರೀತಿಯ ಹಣವನ್ನು ಅನುಮಾನಾಸ್ಪದ ಚಟುವಟಿಕೆಗಳಿಗೂ ಬಳಸುತ್ತಿರುವ ಸಂಶಯವಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಪೊಲೀಸರು, ಅಗತ್ಯ ಬಿದ್ದರೆ ಹೆಚ್ಚಿನ ತನಿಖೆಗಾಗಿ ತನಿಖಾ ಸಂಸ್ಥೆ, ಗುಪ್ತಚರ ಸಂಸ್ಥೆಗಳಿಗೆ ನೀಡುವುದಾಗಿ ಹೇಳಿದ್ದಾರೆ.
ಇಂಡಿಯನ್ ಕರೆನ್ಸಿಯನ್ನು ಟಿಬೆಟ್ ಕರೆನ್ಸಿಯನ್ನಾಗಿ, ಟಿಬೆಟ್ ಕರೆನ್ಸಿಯನ್ನು ಇಂಡಿಯನ್ ಕರೆನ್ಸಿಯಾಗಿ ಕನ್ವರ್ಟ್ ಮಾಡುತ್ತಿದ್ದ ಬಗ್ಗೆಯೂ ವಿಚಾರಣೆ ಸಂದರ್ಭದಲ್ಲಿ ಗೊತ್ತಾಗಿದೆ. ಈ ರೀತಿ ಹಲವು ಮಂದಿಯ ಅಕೌಂಟ್‌ನಿಂದ ಹಣ ಎಗರಿಸಿರುವ ಮಾಹಿತಿ ಸಿಕ್ಕಿದೆ.
ಒಟ್ಟಿನಲ್ಲಿ ಈ ಮೋಸದ ಜಾಲದಲ್ಲಿ ಇನ್ನು ಅನೇಕ ಮಂದಿಯಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಒಟಿಪಿಯನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದೆಂದು ಬ್ಯಾಂಕ್‌ಗಳು ಹಲವು ಬಾರಿ ವಿಜ್ಞಾಪನೆ ಮಾಡಿಕೊಂಡರೂ, ಜನರು ಮಾತ್ರ ಖದೀಮರು ತೋಡಿದ ಹಗಲು ಬಾವಿಗೆ ಬೀಳುತ್ತಿರುವುದು ಮಾತ್ರ ದುರಂತವಾಗಿದೆ.