ಕಡಬದಲ್ಲಿ ಕಾಡಾನೆ ದಾಳಿ: ಯುವತಿ ಸೇರಿ ಇಬ್ಬರ ದಾರುಣ ಸಾವು
ಕಾಡಾನೆ ದಾಳಿಯಿಂದ ಯುವತಿ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ನಡೆದಿದೆ. ರಂಜಿತಾ(21) ಹಾಗೂ ರಮೇಶ್ ರೈ(55) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಮಂಗಳೂರು ಫೆಬ್ರವರಿ 20: ಬೆಳ್ಳಂಬೆಳಗ್ಗೆ ಏಕಾಏಕಿ ಕಾಡಾನೆ ನಡೆಸಿದ ದಾಳಿಯಿಂದ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ನಡೆದಿದೆ. ಸೋಮವಾರ ಬೆಳಿಗ್ಗೆ 6.30ರ ವೇಳೆಗೆ ಕಾಡಾನೆ ದಾಳಿ ನಡೆಸಿದ್ದು ಯುವತಿ ಸಹಿತ ಇಬ್ಬರು ಮೃತಪಟ್ಟಿದ್ದಾರೆ.
ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ(21) ಎನ್ನುವವರು ಸೋಮವಾರ ಮನೆಯಿಂದ ಹಾಲು ಡೈರಿಗೆ ಕಾಡಂಚಿನ ದಾರಿಯಲ್ಲಿ ತೆರಳುತ್ತಿದ್ದರು. ಈ ವೇಳೆ ನೈಲ ಎಂಬಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಯುವತಿ ಮೇಲೆ ಏಕಾಏಕಿ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ಹೈರಾಣಾದ ಯುವತಿ ಸಹಾಯಕ್ಕಾಗಿ ಕಿರುಚಾಡಿದ್ದು, ಯುವತಿಯ ಕೂಗು ಕೇಳೆ ಸ್ಥಳೀಯ ನಿವಾಸಿ ರಮೇಶ್ ರೈ ಸ್ಥಳಕ್ಕೆ ಓಡಿ ಬಂದಿದ್ದಾರೆ. ಯುವತಿಯ ಸಹಾಯಕ್ಕೆ ಬಂದ ರಮೇಶ್ ರೈ ಅವರ ಮೇಲೆ ಕೂಡ ಕಾಡಾನೆ ದಾಳಿ ನಡೆಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಯುವತಿ ರಂಜಿತಾರನ್ನು ಕೂಡಲೇ ಸ್ಥಳೀಯ ನೆಲ್ಯಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ರಂಜಿತಾ ನೆಲ್ಯಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಡಬ ಅರಣ್ಯ ಇಲಾಖೆಗೆ ಸ್ಥಳೀಯರು ಸಾಕಷ್ಟು ಬಾರಿ ಕಾಡಾನೆ ದಾಳಿ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಅರಣ್ಯ ಇಲಾಖಾಧಿಕಾರಿಗಳು ಈ ಬಗ್ಗೆ ಕ್ಯಾರೇ ಎಂದಿರಲಿಲ್ಲ. ಒಂದು ವಾರದ ಹಿಂದೆ ಮರ್ದಾಳದ ಸ್ಥಳೀಯ ಯುವಕ ಸಂತೋಷ್ ರೈ ಎನ್ನುವವರು ಫೇಸ್‌ಬುಕ್‌ನಲ್ಲಿ ಕಾಡಾನೆ ದಾಳಿ ಬಗ್ಗೆ ಮುನ್ಸೂಚನೆ ನೀಡಿದ್ದರು. ಆದರೆ ಗ್ರಾಮ ಪಂಚಾಯತಿ ಸಿಬ್ಬಂದಿ ಯುವಕನ ವಿರುದ್ಧವೇ ಕಡಬ ಠಾಣೆಗೆ ದೂರು ನೀಡಿ ಯುವಕನ ಮೇಲೆ ಕ್ರಮಕೈಗೊಳ್ಳುವಂತೆ ಮಾಡಿದ್ದರು. ಕಡಬ ಪೊಲೀಸರು ಆತನ ಬಳಿಯಿದ್ದ ಮಾಹಿತಿ ಹಾಗೂ ವೀಡಿಯೋವನ್ನು ಡಿಲೀಟ್ ಮಾಡಿಸಿದ್ದರು ಎನ್ನಲಾಗಿದೆ. ಇದೀಗ ಅದೇ ಪೊಲೀಸ್ ಠಾಣಾ ವ್ಯಾಪ್ತಿಯ ಮೀನಾಡಿಯಲ್ಲಿ ಭೀಕರ ಕಾಡಾನೆ ದಾಳಿ ನಡೆದು ಇಬ್ಬರು ಮೃತಪಟ್ಟಿದ್ದಾರೆ.

ಕಾಡಾನೆ ಬಗ್ಗೆ ಸುಳಿವು ನೀಡಿದರೂ ಕ್ರಮ ಕೈಗೊಳ್ಳದ ಕಡಬದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ರೆಂಜಿಲಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡು ಜೀವ ಬಲಿಯಾದ ಬಗ್ಗೆ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕಾಡಾನೆ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕರಾವಳಿ ಭಾಗಕ್ಕೂ ಕಾಡಾನೆ ಕಾಟ ಆರಂಭವಾಗಿದೆ.












Click it and Unblock the Notifications