ಮಂಗಳೂರಿನ ಶ್ರೀಮಂತ ಉದ್ಯಮಿ ದರೋಡೆ ಸಂಚು ವಿಫಲ
ಮಂಗಳೂರು, ಜೂ. 5 : ನಗರದ ಶ್ರೀಮಂತ ಉದ್ಯಮಿಯೊಬ್ಬರ ದರೋಡೆ ಮತ್ತು ಒಬ್ಬರ ಕೊಲೆ ಸಂಚು ರೂಪಿಸುತ್ತಿದ್ದ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಮೂವರು ಸಹಚರರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತರಿಂದ ಪಿಸ್ತೂಲು ಮತ್ತು 5 ಸಜೀವ ಗುಂಡು, 2 ಚೂರಿಗಳು, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ನಗರದ ಮರೋಳಿಯ ದೀಕ್ಷಿತ್ ಪೂಜಾರಿ (25), ಮಣ್ಣಗುಡ್ಡೆಯ ಸುಶೀಲ್ ಕುಮಾರ್ (28) ಹಾಗೂ ದೇರೆಬೈಲಿನ ಪುನೀತ್ (21) ಎಂದು ಗುರುತಿಸಲಾಗಿದೆ. ನಗರದ ಶ್ರೀಮಂತ ಉದ್ಯಮಿಯೊಬ್ಬರ ದರೋಡೆ ಮತ್ತು ಕೊಲೆಗೆ ಇವರು ಸಂಚು ರೂಪಿಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನ ನಗರದ ದೇರೆಬೈಲ್ ರಸ್ತೆಯ ಪ್ರಶಾಂತನಗರ ಬಡಾವಣೆ 1ನೇ ಕ್ರಾಸ್ ರಸ್ತೆಯ ಬಳಿ ದೀಕ್ಷಿತ್ ಪೂಜಾರಿ, ಸುಶೀಲ್ ಕುಮಾರ್ ಹಾಗೂ ಇತರರು ಸೇರಿಕೊಂಡು ಸಂಚು ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ನಗರದ ಶ್ರೀಮಂತ ಉದ್ಯಮಿಯನ್ನು ದರೋಡೆ ಮಾಡಿ ನಂತರ ರೌಡಿ ಬಿಜೈ ರಾಜಾನನ್ನು ಕೊಲೆ ಮಾಡಿದ ಆರೋಪಿಗಳ ಪೈಕಿ ಕೊಟ್ಟಾರ ನಿವಾಸಿ ಚಂದ್ರಹಾಸ ಶೆಟ್ಟಿ ಯಾನೆ ಚಂದು ಮತ್ತು ಬೊಕ್ಕಪಟ್ನದ ಭರತೇಶ್ ಎಂಬವರನ್ನು ಕೊಲೆ ಮಾಡುವ ಸಂಚನ್ನು ಬಂಧಿತರು ರೂಪಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪಿಸ್ತೂಲ್ ವಶ : ಮೂವರು ಬಂಧಿತ ಆರೋಪಿಗಳಿಂದ ಒಂದು ಪಿಸ್ತೂಲು ಮತ್ತು 5 ಸಜೀವ ಗುಂಡು, 2 ಚೂರಿಗಳು, ಒಂದು ಕಾರು ಮತ್ತು ಒಂದು ಆಕ್ಟಿವ್ ಮ್ಯಾಟ್ರಿಕ್ಸ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಳಿ ಇದ್ದ ಕಾರಿನಲ್ಲಿ 4 ಮೊಬೈಲ್ ಪೋನ್‍ಗಳು ಹಾಗೂ 1 ಪ್ಯಾಕೇಟ್ ಮೆಣಸಿನ ಪುಡಿ ಪತ್ತೆಯಾಗಿದೆ.
ಬಂಧಿತ ಆರೋಪಿಗಳ ಪೈಕಿ ದೀಕ್ಷಿತ್ ಪೂಜಾರಿ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರನಾಗಿದ್ದು, ವಿಜಯೇಂದ್ರ ಭಟ್ ಶೂಟೌಟ್ ಪ್ರಕರಣ, ವಕೀಲರಾದ ಪ್ರಕಾಶ್ ಅಪಹರಣ ಪ್ರಕರಣ, ಮಣ್ಣಗುಡ್ಡೆಯಲ್ಲಿ ನಡೆದ ಜಾನ್‍ಪಿಂಟೋ ಎಂಬವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಡಾ. ಜಗದೀಶ್ ಮತ್ತು ಅಪರಾಧ ವಿಭಾಗದ ಡಿ.ಸಿ.ಪಿ ವಿಷ್ಣುವರ್ಧನ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಈ ದಾಳಿಯನ್ನು ನಡೆಸಿತ್ತು. ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸ್ಐ ಶ್ಯಾಮ್ ಸುಂದರ್, ಸಿಬ್ಬಂದಿಗಳಾದ ಶಶಿಧರ ಶೆಟ್ಟಿ, ಗಣೇಶ್ ಎಂಪಿ ಗಣೇಶ್ ಕಲ್ಲಡ್ಕ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications