Get Updates
Get notified of breaking news, exclusive insights, and must-see stories!

ವೈಭವದ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮ ರಥೋತ್ಸವ; ಲಕ್ಷಾಂತರ ಭಕ್ತರು ಭಾಗಿ

ಸುಳ್ಯ, ಡಿಸೆಂಬರ್ 9: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿಯ ವೈಭವ ಮೇಳೈಸಿದೆ. ಚಂಪಾಷಷ್ಠಿಯ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯನು, ಬ್ರಹ್ಮರಥದಲ್ಲಿ ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ಗುರುವಾರ ದರ್ಶನ ನೀಡಿದ್ದಾನೆ.

ದಕ್ಷಿಣ ಭಾರತದ ಪರಮ ಪವಿತ್ರ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವರ್ಷದ ಅದ್ಭುತ ಸನ್ನಿವೇಶಕ್ಕೆ ಮತ್ತೆ ಸಾಕ್ಷಿಯಾಗಿದೆ. ಮುಂಜಾವು ಬೆಳಕು ಹರಿಯುವ ಸಂದರ್ಭದಲ್ಲಿ ದೇವಳದ ಮುಂಭಾಗದಲ್ಲಿರುವ ಬ್ರಹ್ಮರಥವನ್ನೇರಿದ ಸುಬ್ರಹ್ಮಣ್ಯ ಲಕ್ಷಾಂತರ ಜನರಿಗೆ ದರುಶನ ಭಾಗ್ಯ ನೀಡಿದ್ದಾನೆ.

ಈ ದಿನ ಚಂಪಾಷಷ್ಠಿ ಹಿನ್ನಲೆ ಪ್ರಾತಃಕಾಲ 6.58ರ ಹೊತ್ತಿನ ವೃಶ್ಚಿಕ ಲಗ್ನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥದ ಮೇಲೆ ವಿರಾಜಮಾನರಾಗಿ, ನೆರೆದ ಭಕ್ತ ಸಮೂಹಕ್ಕೆ ದರ್ಶನ ನೀಡಿದ್ದಾನೆ. ಇದಕ್ಕೂ ಮುನ್ನ ದೇಗುಲದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದಿವೆ.

Thousands of Devotees Take Part in Panchami Rathotsava Held At Kukke Subramanya Temple

ಮೊದಲು ಸುಬ್ರಹ್ಮಣ್ಯನ ಹೂವಿನ ತೇರು ರಥಬೀದಿಯಲ್ಲಿ ಮುಂದೆ ಸಾಗಿದರೆ, ಬಳಿಕ ಸುಬ್ರಹ್ಮಣ್ಯನನ್ನು ಹೊತ್ತ ಬ್ರಹ್ಮರಥ ಸಾಗಿದೆ. ಬ್ರಹ್ಮರಥವನ್ನು ಎಳೆಯಲು ಮೊದಲೇ ಸೇವೆಯನ್ನು ಬುಕ್ಕಿಂಗ್ ಮಾಡಿದವರಿಗಷ್ಟೇ ಅವಕಾಶ ನೀಡಲಾಗಿತ್ತು. ಲಕ್ಷಾಂತರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೇರಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮಾಡಿದ್ದಾರೆ.

ಬ್ರಹ್ಮರಥ ಸಾಗುತ್ತಿರುವಾಗ ತೇರಿಗೆ ಎಳ್ಳು, ನಾಣ್ಯಗಳನ್ನು ಎಸೆದು ಹರಕೆ ತೀರಿಸಿಕೊಂಡಿದ್ದಾರೆ. ತೇರು ಸಂಪೂರ್ಣವಾದ ಬಳಿಕ ರಥದಲ್ಲಿ ಅಳವಡಿಸಲಾಗಿದ್ದ ಹಿಂಗಾರ, ಫಲಪುಷ್ಪಗಳನ್ನು ಅರ್ಚಕರು ಭಕ್ತರತ್ತ ವೃಷ್ಟಿ ಮಾಡಿದ್ದಾರೆ.

ಕೊರೊನಾ ಸೋಂಕಿನ ಕಾರಣದಿಂದ ಈ ವರ್ಷ ಕ್ಷೇತ್ರದಲ್ಲಿ ಎಡೆಸ್ನಾನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಬೀದಿ ಮಡೆ ಸ್ನಾನಕ್ಕೆ ಅವಕಾಶ ನೀಡಲಾಗಿತ್ತು. ನೂರಾರು ಭಕ್ತರು ಕುಮಾರಧಾರಾ ನದಿಯಲ್ಲಿ ಮಿಂದು ನದಿ ದಡದಿಂದಲೇ ಸುಬ್ರಹ್ಮಣ್ಯನ ಸನ್ನಿಧಿಯ ತನಕ ಬೀದಿಯಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿಕೊಂಡರು.

Thousands of Devotees Take Part in Panchami Rathotsava Held At Kukke Subramanya Temple

ಈ ಕಠಿಣ ಹರಕೆ ಸೇವೆಯನ್ನು ಮಹಿಳೆಯರು, ಮಕ್ಕಳೆನ್ನದೇ ಮಾಡುತ್ತಾರೆ. ದೇವಳದಲ್ಲಿ ನಡೆಯುವ ಎಡೆಸ್ನಾನಕ್ಕೆ ಮಾತ್ರ ಅವಕಾಶ ನಿರಾಕರಿಸಲಾಗಿತ್ತು. ಆದರೆ ಜನರಿಗೆ ಯಾವುದೇ ನಿರ್ಬಂಧವನ್ನು ಹೇರಿರಲಿಲ್ಲ. ಹೀಗಾಗಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರ ದಂಡು ಸುಬ್ರಹ್ಮಣ್ಯದತ್ತ ಹರಿದು ಬಂದಿದೆ‌.

ಈ ಬ್ರಹ್ಮ ರಥೋತ್ಸವವನ್ನು ಬಿದಿರಿನಿಂದಲೇ ಎಳೆಯುವುದು ಕ್ಷೇತ್ರದ ವಿಶೇಷತೆ. ರಥವನ್ನು ಎಳೆಯಲು ಎಷ್ಟು ಮಂದಿ ಭಕ್ತರಿದ್ದರೂ ರಥ ಹಾದಿ ತಪ್ಪದಂತೆ ಜಾಗೂರಕತೆಯಿಂದ ನಿರ್ವಹಿಸಲು ರಥ ನಿರ್ಮಿಸಿದ ಸ್ಥಳೀಯರ ತಂಡ ಕಾರ್ಯನಿರ್ವಹಿಸಿತ್ತು. ಈ ಬಿದಿರಿನಿಂದ ರಥವನ್ನು ಎಳೆದ ಬಳಿಕ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.‌

ಡಿ.1ರಂದು ಕೊಪ್ಪರಿಗೆ ಏರುವ ಮೂಲಕ ಕ್ಷೇತ್ರದಲ್ಲಿ ಆರಂಭವಾಗಿದ್ದ ಚಂಪಾಷಷ್ಠಿ ಉತ್ಸವ, ಡಿ.15ಕ್ಕೆ ಕೊಪ್ಪರಿಗೆ ಇಳಿಸುವ ಮೂಲಕ ತೆರೆ ಕಾಣಲಿದೆ. ದೇವರ ಅವಭೃತ ಸ್ನಾನ, ನೌಕಾ ವಿಹಾರ, ಬಂಡಿ ಉತ್ಸವ, ಪುರುಷರಾಯ ನೇಮೋತ್ಸವ ಕ್ಷೇತ್ರದಲ್ಲಿ ನಡೆಯಲಿದೆ‌.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಈ ಜಾತ್ರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಬೇರೆ ಬೇರೆ ಊರುಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಮೊದಲ ಬಾರಿಗೆ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ನೋಡಿದ ಭಕ್ತಾದಿಗಳಿಗೆ ಜೀವನದಲ್ಲಿ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾದ ಅನುಭವವನ್ನೂ ಪಡೆದರು.

ರಾಜ್ಯದ ಅತ್ಯಂತ ದೊಡ್ಡ ರಥಗಳಲ್ಲಿ ಸುಬ್ರಹ್ಮಣ್ಯನ ಬ್ರಹ್ಮರಥವೂ ಒಂದಾಗಿದೆ. ಚಂಪಾ ಷಷ್ಠಿಯ ದಿನದಂದು ಈ ರಥೋತ್ಸವ ನಡೆದಿದ್ದು, ಅಸಂಖ್ಯಾತ ಭಕ್ತರು ಇದನ್ನು ಬ್ರಹ್ಮ ರಥೋತ್ಸವವನ್ನು ಕಣ್ತುಂಬಿಕೊಂಡರು. ಈ ಧಾರ್ಮಿಕ ವಿಧಿ ವಿಧಾನದಲ್ಲಿ ಭಕ್ತರನ್ನೂ ಸೇರಿಸಿಕೊಳ್ಳುವ ಪದ್ಧತಿ ಕ್ಷೇತ್ರದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿತ್ತು.

ಬ್ರಹ್ಮರಥ ಎಳೆಯುವುದು ಪುಣ್ಯದ ಕೆಲಸ ಎನ್ನುವ ನಂಬಿಕೆ ಕ್ಷೇತ್ರದಲ್ಲಿದ್ದು, ಈ ಕಾರಣಕ್ಕಾಗಿಯೇ ಮುಂಜಾನೆ ನಡೆಯುವ ಈ ರಥೋತ್ಸವದಲ್ಲಿ ರಥ ಎಳೆಯಲು ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಸೇರುತ್ತಾರೆ. ಸೇವೆಯ ರೂಪದಲ್ಲೂ ಬ್ರಹ್ಮರಥ ಎಳೆಯುವ ಅವಕಾಶವನ್ನೂ ಕ್ಷೇತ್ರದಲ್ಲಿ ನೀಡಲಾಗಿದೆ.

ಒಟ್ಟಿನಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿ ನಡುವೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿಯ ಪ್ರಮುಖ ಆಕರ್ಷಣೆ ಬ್ರಹ್ಮರಥೋತ್ಸವ ನಿರ್ವಿಘ್ನವಾಗಿ ನಡೆದಿದೆ. ‌ಕಳೆದರಡು ವರ್ಷಗಳಿಂದ ಎಡೆ ಸ್ನಾನಕ್ಕೆ ಅವಕಾಶ ನೀಡದಿರುವ ಬೇಸರದ ನಡುವೆ ಕುಕ್ಕೆ ಸುಬ್ರಹ್ಮಣ್ಯನ ವೈಭವವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+