ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ತೆಲಂಗಾಣದ ಸಚಿವ: ಯಾಕೆ ಗೊತ್ತಾ..?
ಬೆಂಗಳೂರು, ಡಿಸೆಂಬರ್ 20: ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆಲಂಗಾಣ ಸರ್ಕಾರದ ಕಂದಾಯ ಸಚಿವ ಪೊಂಗುಲೆಟಿ ಶ್ರೀನಿವಾಸ ರೆಡ್ಡಿ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯನಲ್ಲಿ ಪ್ರಾರ್ಥಿಸಿ ಇಷ್ಟಾರ್ಥ ಸಿದ್ಧಿಯಾದ ಹಿನ್ನಲೆಯಲ್ಲಿ ಸಚಿವರು ಕುಕ್ಕೆ ಸುಬ್ರಹ್ಮಣ್ಯ ದ ಅನ್ನದಾನ ಸೇವೆಯಾರ್ಥವಾಗಿ ಒಂದು ಕೋಟಿ ರೂಪಾಯಿ ಚೆಕ್ ಅನ್ನು ದೇಗುಲದ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಿದ್ದಾರೆ.
ಕುಕ್ಕೆಯಲ್ಲಿ ನಡೆಯ ಚಂಪಾಷಷ್ಠಿ ಸಂಭ್ರಮದಲ್ಲಿ ಕುಟುಂಬ ಸಮೇತ ಭಾಗವಹಿಸಿದ ಸಚಿವ ಶ್ರೀನಿವಾಸ ರೆಡ್ಡಿ ಮಂಗಳವಾರವೂ ಇಡೀ ದಿನ ಕ್ಷೇತ್ರದ ಇತರ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದಾರೆ. ಈ ಹಿಂದೆಯೂ ಕ್ಷೇತ್ರಕ್ಕೆ ಬಂದಿದ್ದ ಅವರು ಪ್ರಾರ್ಥನೆಯನ್ನು ಮಾಡಿಕೊಂಡಿದ್ದರು. ಪ್ರಾರ್ಥನೆಯ ಫಲ ಸಿದ್ಧಿಯಾಗಿದ್ದು, ಅಂದುಕೊಂಡತೇ ಕುಟುಂಬ ಸಮೇತರಾಗಿ ಕ್ಷೇತ್ರಕ್ಕೆ ಆಗಮಿಸಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಂ ಸುಳ್ಳಿಯವರಿಗೆ ಒಂದು ಕೋಟಿ ರೂಪಾಯಿಯ ಚೆಕ್ ಅನ್ನು ಅನ್ನದಾನ ಸೇವೆಯಾರ್ಥವಾಗಿ ನೀಡಿದ್ದಾರೆ.

ಇನ್ನೊಂದೆಡೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವದ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ಬ್ರಹ್ಮರಥೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿದೆ. ಬ್ರಹ್ಮರಥೋತ್ಸವದ ಬಳಿಕ ಸ್ವಾಮಿಗೆ ಅವಭೃತ ಸ್ನಾನ ನಡೆದಿದ್ದು, ನೂರಾರು ಸಂಖ್ಯೆಯ ಭಕ್ತಾಧಿಗಳು ಈ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದಾರೆ. ಸ್ವಾಮಿಯ ಉತ್ಸವ ಮೂರ್ತಿಯ ಅವಭೃತ ಸ್ನಾನದ ಬಳಿಕ ಭಕ್ತಾಧಿಗಳೆಲ್ಲಾ ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡುವ ಮೂಲಕ ಕೃತಾರ್ಥರಾಗಿದ್ದಾರೆ.
ಭಕ್ತಾಧಿಗಳ ಜೊತೆಗೆ ಕ್ಷೇತ್ರದ ಆನೆಯಾದ ಯಶಸ್ವಿ ಕೂಡಾ ಸ್ನಾನ ಮಾಡಲು ನದಿಗೆ ಇಳಿಯುವುದನ್ನು ನೋಡಲೆಂದೇ ನೂರಾರು ಸಂಖ್ಯೆಯ ಜನ ನದಿ ತೀರಕ್ಕೆ ಬರುತ್ತಾರೆ. ಸುಬ್ರಹ್ಮಣ್ಯ ಸ್ವಾಮಿಗೆ ನಡೆಯುವ ಎಲ್ಲಾ ಧಾರ್ಮಿಕ ಉತ್ಸವಗಳಲ್ಲಿ ಜೊತೆಯಾಗಿ ನಿಲ್ಲುವ ಕ್ಷೇತ್ರದ ಆನೆಯಾದ ಯಶಸ್ವಿಗೆ ಸ್ವಾಮಿಯ ಜೊತೆಗೆ ಸ್ನಾನ ಮಾಡುವ ಅವಕಾಶವನ್ನೂ ನೀಡಲಾಗುತ್ತದೆ.
ಯಶಸ್ವಿ ಜೊತೆಗೆ ಪುಟ್ಟ ಮಕ್ಕಳೂ ನೀರಿಗೆ ಇಳಿಯುತ್ತಿದ್ದು, ಪುಟ್ಟ ಮಕ್ಕಳ ಜೊತೆಗೆ ಆನೆ ನೀರಾಟವಾಡುವ ದೃಶ್ಯ ನೆರದಿದ್ದವರ ಮನ ತಣಿಸುತ್ತದೆ. ಕೇವಲ ಆರು ತಿಂಗಳ ಮರಿಯಾನೆಯಾಗಿ ಕ್ಷೇತ್ರಕ್ಕೆ ಬಂದಿದ್ದ ಯಶಸ್ವಿಯನ್ನು ಮಾಜಿ ಸಚಿವ ಆನಂದ್ ಸಿಂಗ್ ಕ್ಷೇತ್ರಕ್ಕೆ ನೀಡಿದ್ದರು. ಆ ಬಳಿಕ ಯಶಸ್ವಿ ಸುಬ್ರಹ್ಮಣ್ಯ ಪರಿಸರದ ಜನರ ಒಡನಾಡಿಯಾಗಿ ಎಲ್ಲರ ಅಚ್ಚುಮೆಚ್ಚಿನ ಆನೆಯಾಗಿ ಚಿರಪರಿಚಿತಳಾಗಿದ್ದಳು.

ದೇವಸ್ಥಾನದಿಂದ ಕುಮಾರಧಾರಾ ನದಿ ತಟಕ್ಕೆ ಸ್ನಾನಕ್ಕೆ ಬರುವ ಸಂದರ್ಭದಲ್ಲಿ ಯಶಸ್ವಿಯನ್ನು ಭಕ್ತಾಧಿಗಳು ಮುಟ್ಟಿ ಆನಂದಿಸುತ್ತಿದ್ದರು. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ತನ್ನ ಸೊಂಡಿಲನ್ನು ಎತ್ತಿ ಆಶೀರ್ವಾದ ನೀಡುವ, ತುಂಟತನ ಮಾಡುವ ಯಶಸ್ವಿ ಚಂಪಾಷಷ್ಠಿಯ ಮಹೋತ್ಸವದ ದಿನಗಳಂದು ತುಂಬಾ ಬ್ಯುಸಿಯಾಗುತ್ತಾಳೆ.
ಸ್ವಾಮಿಗೆ ರಥೋತ್ಸವ ನಡೆಯುವ ಸಂದರ್ಭದಲ್ಲಿ ರಥಕ್ಕೆ ಮುಂಚೂಣಿಯಾಗಿ ನಡೆಯುವ ಯಶಸ್ವಿನಿ, ರಥವನ್ನು ಮೊದಲಿಗೆ ತನ್ನ ತಲೆಕೊಟ್ಟು ದೂಡುವ ಕೆಲಸವನ್ನೂ ಮಾಡುತ್ತದೆ. ಇತ್ತೀಚಿನ ಕೆಲ ವರ್ಷಗಳ ಹಿಂದೆ ಅಸೌಖ್ಯದಿಂದ ಬಳಲಿದ್ದ ಯಶಸ್ವಿಯ ಆರೋಗ್ಯ ಚೇತರಿಕೆಗಾಗಿ ಕ್ಷೇತ್ರದ ಭಕ್ತರು ಹಲವು ರೀತಿಯ ಹರಕೆಯನ್ನು ಹೊತ್ತ ಉದಾಹರಣೆಗಳೂ ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ.












Click it and Unblock the Notifications