South Western Railway: ರಾಜ್ಯದ ಈ ಮಾರ್ಗಗಳಲ್ಲಿ 154 ದಿನಗಳವರೆಗೆ ರೈಲು ಸಂಚಾರ ಸ್ಥಗಿತ
South Western Railway: ಸಾಮಾನ್ಯವಾಗಿ ಹಳಿ ಅಳವಡಿಕೆ ಸೇರಿದಂತೆ ಇನ್ನಿತರೆ ರೈಲ್ವೆಗೆ ಸಂಬಂಧಿಸಿದ ಕಾಮಗಾರಿ ನಡೆಯುವಂತಹ ಮಾರ್ಗಗಳಲ್ಲಿ ರೈಲು ಸಂಚಾರ ರದ್ದಗೊಳಿಸಲಾಗುತ್ತದೆ. ಹಾಗೆಯೇ ಇದೀಗ ರಾಜ್ಯದಲ್ಲಿನ ಈ ಭಾಗದ ರೈಲು ಸಂಚಾರರನ್ನು 154 ದಿನಗಳವರೆಗೆ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಹಾಗಾದರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ರೈಲ್ವೆ ವಿದ್ಯುದೀಕರಣ ಮಾಡಲಾಗುತ್ತಿದೆ. ಈ ಹಿನ್ನೆಲೆ ಮೇ 31ರಿಂದ 154 ದಿನಗಳವರೆಗೆ ಯಶವಂತಪುರ ಮತ್ತು ಮಂಗಳೂರು ಜಂಕ್ಷನ್/ಕಾರವಾರ ನಡುವಿನ ಹಗಲು ವೇಳೆ ರೈಲು ಸೇವೆ ರದ್ದುಗೊಳಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಈ ನಿರ್ಧಾರದಿಂದ ತುಂಬಾ ತೊಂದರೆ ಆಗಲಿದೆ ಎಂದು ಪ್ರಯಾಣಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.

ನೈಋತ್ಯ ರೈಲ್ವೆಯು ಈ ಅಧಿಸೂಚನೆಯನ್ನು ಮೇ 15ರಂದು ಹೊರಡಿಸಿದೆ. ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಮತ್ತು ಮೂರು ವಾರದ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ. ಯಶವಂತಪುರ-ಕಾರವಾರ-ಯಶವಂತಪುರ ನಡುವೆ ಮೂರು ವಾರಕ್ಕೊಮ್ಮ ಸಂಚರಿಸುವ ರೈಲು ಸಂಖ್ಯೆ 16515/516 ಸೇವೆಯನ್ನು ಮೇ 31ರಿಂದ ನವೆಂಬರ್ 1ರ ವರೆಗೆ ರದ್ದುಗೊಳಿಸಲಾಗುವುದು ಎಂದು ತಿಳಿಸಿದೆ.
ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ. ಹನುಮಂತ ಕಾಮತ್ ಅವರು ಈ ಬಗ್ಗೆ ಮಾತನಾಡಿದ್ದು, ರೈಲ್ವೆ ವಿದ್ಯುದೀಕರಣ ಕಾರ್ಯಕ್ಕಾಗಿ ಎಲ್ಲಿಯೂ ರೈಲು ಸೇವೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿಲ್ಲ. ಈ ರದ್ದತಿಯು ಕುಕ್ಕೆ ಸುಬ್ರಹ್ಮಣ್ಯ ಮಾರ್ಗದಲ್ಲಿ ಪ್ರಯಾಣಿಕರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಿಳಿಸಿದರು ಅಂತಾ ದಿ ಹಿಂದೂ ವರದಿ ಮಾಡಿದೆ.
ರೈಲ್ವೆ ವಿದ್ಯುದೀಕರಣ ಅತ್ಯಗತ್ಯವಾಗಿದೆ. ಆದರೂ, ಪ್ರಯಾಣಿಕ ಸೇವೆಗಳನ್ನು ಪ್ರತ್ಯೇಕ ಮಾಡಿ ಸರಕು ರೈಲುಗಳಿಗೆ ಅವಕಾಶ ನೀಡುವುದರಿಂದ ಪ್ರಯಾಣಿಕರಿಗೆ ಅನ್ಯಾಯ ಮಾಡಿದಂತಾಗಲಿದೆ. ಅಲ್ಲದೆ, ಬೆಂಗಳೂರು-ಮಂಗಳೂರು ಮಾರ್ಗದ ಬಹುತೇಕ ರಸ್ತೆಗಳು ಮಳೆಗಾಲದಲ್ಲಿ ಭೂಕುಸಿತದಿಂದ ಮುಚ್ಚಲ್ಪಟ್ಟಿರುತ್ತವೆ. ಆದ್ದರಿಂದ ಈ ಭಾಗದ ಜನರಿಗೆ ರೈಲು ಸೇವೆ ಅತ್ಯಗತ್ಯವಾಗಿದೆ. ಇದೀಗ ಹಗಲು ರೈಲು ಸೇವೆಗಳನ್ನು ರದ್ದುಗೊಳಿಸಿದರೆ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಯಾಕಂದ್ರೆ ಇದೀಗ ಮಳೆ ಆರಂಭವಾಗಿದ್ದು, ಯಾವಾಗ ರಸ್ತೆಗಳು ಹಾಳಾಗುತ್ತವೋ ಹೇಳುವುದಕ್ಕೆ ಆಗುವುದಿಲ್ಲ.
ಕುಂದಾಪುರ ರೈಲ್ವೆ ಪ್ರಯಾಣಿಕ ಸಮಿತಿಯ ಗೌತಮ್ ಶೆಟ್ಟಿ ಮಾತನಾಡಿ, ವಿದ್ಯುದೀಕರಣಕ್ಕಾಗಿ ನೈಋತ್ಯ ರೈಲ್ವೆಯು ಗೂಡ್ಸ್ ರೈಲುಗಳನ್ನು ರದ್ದುಗೊಳಿಸಿ, ಪ್ರಯಾಣಿಕ ರೈಲು ಸೇವೆಗಳನ್ನು ಮುಂದುವರೆಸಬೇಕಾಗಿತ್ತು. ಸುಮಾರು 5 ತಿಂಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರ ರದ್ದಾದರೆ, ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪ್ರಯಾಣಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಬೆಂಗಳೂರು, ಮಂಗಳೂರು, ಕಾರವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಡುವೆ ಪ್ರಯಾಣಿಸಲು ಹಗಲು ರೈಲು ಸೇವೆಗಳನ್ನೇ ಅವಲಂಬಿಸಿದ್ದಾರೆ. ಯಾಕಂದ್ರೆ ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡರೆ ಜನರಿಗೆ ತುಂಬಾ ತೊಂದರೆಗೀಡಾಗಲಿದ್ದಾರೆ ಅಂತಲೂ ತಿಳಿಸಿದ್ದಾರೆ.
ರೈಲ್ವೆ ವಿದ್ಯುದೀಕರಣ ಮತ್ತು ಅಭಿವೃದ್ಧಿಗೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಈ ಕಾಮಗಾರಿಯನ್ನು ಮಳೆಗಾಲದ ನಂತರದ ಮಾಡುವಂತೆ ನೈಋತ್ಯ ರೈಲ್ವೆಯನ್ನು ಒತ್ತಾಯಿಸುತ್ತಿದ್ದಾರೆ.












Click it and Unblock the Notifications