ಮಂಗಳೂರು : ಕಟೀಲಿನ ಚಿನ್ನದ ರಥ ನೋಡಿದ್ದಿರಾ?
ಮಂಗಳೂರು, ಫೆ.6 : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿನ ಚಿನ್ನದ ರಥ ಸಿದ್ಧವಾಗಿದ್ದು, ಫೆ.8ರಂದು ದೇವರಿಗೆ ಸಮರ್ಪಿತವಾಗಲಿದೆ. ಸುಮಾರು ರೂ.4.75 ಕೋಟಿ ವೆಚ್ಚದದಲ್ಲಿ ಚಿನ್ನದ ರಥವನ್ನು ನಿರ್ಮಾಣ ಮಾಡಲಾಗಿದೆ.
ರಥದ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು ಬುಧವಾರ ದೇವಾಲಯದ ಆವರಣದಲ್ಲಿ ಪ್ರಾಯೋಗಿಕವಾಗಿ ಎಳೆದು ಪರೀಕ್ಷೆ ನಡೆಸಲಾಗಿದೆ. ಫೆ.8ರ ಭಾನುವಾರದಿಂದ ಆರು ದಿನಗಳ ಕಾಲ ರಾತ್ರಿ ದೇವಿಯನ್ನು ಆಕರ್ಷಕವಾದ ಈ ರಥದಲ್ಲಿ ಕೂರಿಸಿ ವೈಭವದ ರಥೋತ್ಸವ ನಡೆಸಲಾಗುತ್ತದೆ.

ಇದು ರಾಜ್ಯದಲ್ಲೇ ಅತೀ ಎತ್ತರದ ಚಿನ್ನದ ರಥ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 175 ಕೆಜಿ ಬೆಳ್ಳಿ ಹಾಗೂ 11 ಕೆಜಿ. ಚಿನ್ನದಲ್ಲಿ 14 ಅಡಿ ಎತ್ತರದ ಈ ರಥವನ್ನು ನಿರ್ಮಿಸಲಾಗಿದೆ. ಉಡುಪಿಯ ಸ್ವರ್ಣ ಜ್ಯುವೆಲರ್ಸ್ ಸಂಸ್ಥೆ ಚಿನ್ನದ ರಥವನ್ನು ನಿರ್ಮಾಣ ಮಾಡಿದೆ. [ತಿರುಪತಿಗೆ ಬಂತು 24 ಕೋಟಿಯ ಚಿನ್ನದ ರಥ!]
ಸುರತ್ಕಲ್‌ನಲ್ಲಿರುವ ಎನ್‌ಐಟಿಕೆಯಲ್ಲಿ ಚಿನ್ನದ ಗುಣಮಟ್ಟ ಪರೀಕ್ಷಿಸಿ 24 ಕ್ಯಾರೆಟ್ ಚಿನ್ನವನ್ನು ರಥದ ನಿರ್ಮಾಣಕ್ಕೆ ಬಳಸಲಾಗಿದೆ. ಜಿಲ್ಲಾಧಿಕಾರಿ ಸಮ್ಮುಖದಲ್ಲಿಯೇ ಪರೀಕ್ಷಿಸಿ ಕೆಲಸ ಆರಂಭಿಸಲಾಗಿತ್ತು ಎಂದು ಸ್ವರ್ಣ ಜ್ಯುವೆಲ್ಲರ್ಸ್ ನಿರ್ದೇಶಕ ರಾಮದಾಸ್ ನಾಯಕ್ ಹೇಳಿದ್ದಾರೆ.
ಚಿನ್ನದ ರಥದಲ್ಲಿ ಅಷ್ಟ ಲಕ್ಷ್ಮೀಯರು, ನವದುರ್ಗೆಯರ ಮೂರ್ತಿಗಳ ಉಬ್ಬು ರಚನೆ, ನವರಾತ್ರಿಯ ಆರಾಧನೆಯ ಮೂರ್ತಿಗಳ ಕೆತ್ತನೆ ಆಳವಡಿಸಲಾಗಿದೆ. ಸಿಂಹ, ಆನೆ, ಪದಾತಿಗಳ ಚಿತ್ರಣ ಇದೆ. ಸುಮಾರು ಆರು ತಿಂಗಳ 1,500 ಜನರ ತಂಡ ರಥ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿತ್ತು.












Click it and Unblock the Notifications