ತರಗತಿಯ ಒಳಗೆ ಸಾವರ್ಕರ್ ಫೋಟೋ: ವಿದ್ಯಾರ್ಥಿಗಳ ನಡುವೆ ಹೊಡೆದಾಟ
ಮಂಗಳೂರು, ಜೂ 10: ಹಿಜಾಬ್ ವಿಚಾರದಿಂದ ಗೊಂದಲದ ಗೂಡಾಗಿದ್ದ ಮಂಗಳೂರಿನ ವಿವಿ ಕಾಲೇಜು ಮತ್ತೆ ಸುದ್ದಿಯಲ್ಲಿದೆ. ಹಿಜಾಬ್ ಗಲಾಟೆಯ ಮುಂದುವರಿದ ಭಾಗವಾಗಿ ಕಾಲೇಜಿನಲ್ಲಿ ಎರಡು ತಂಡದ ವಿದ್ಯಾರ್ಥಿಗಳ ಗುಂಪಿನ ನಡುವೆ ಗಲಾಟೆಯಾಗಿದೆ.
ಮಂಗಳೂರಿನ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಜೂನ್ 8 ರಂದು ಕೆಲ ವಿದ್ಯಾರ್ಥಿಗಳು ತರಗತಿಯೊಳಗೆ ವೀರ ಸಾವರ್ಕರ್ ಮತ್ತು ಭಾರತಮಾತೆಯ ಫೋಟೋ ಅಳವಡಿಸಿದ ಹಿನ್ನಲೆಯಲ್ಲಿ ಸಿಫ್ಐ ಸಂಘಟನೆಯ ಕೆಲ ವಿದ್ಯಾರ್ಥಿಗಳು ಶುಕ್ರವಾರ ಪ್ರಾಂಶುಪಾಲೆ ಡಾ.ಅನುಸೂಯ ರೈ ಬಳಿ ಫೋಟೋ ಅಳವಡಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು. ಈ ವೇಳೆ ಮನವಿ ಪತ್ರದಲ್ಲಿ ಸಾವರ್ಕರ್ ಕುರಿತು ದೇಶದ್ರೋಹಿ ಎಂಬ ಪದ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ತಂಡಗಳ ನಡುವೆ ಘರ್ಷಣೆಯಾಗಿದೆ.

ಸಾವರ್ಕರ್ ಪೊಟೋ ತೆಗೆಸಿದ ಪ್ರಾಂಶುಪಾಲೆ
ಸಾವರ್ಕರ್ ಪೋಟೊ ಅಳವಡಿಕೆ ವಿಚಾರದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕೈಕೈ ಮಿಲಾಯಿಸಿಕೊಂಡಿದ್ದಾರೆ. 3-4 ದಿನಗಳ ಹಿಂದೆ ಕಾಲೇಜು ಕೊಠಡಿಯ ಬೋರ್ಡ್ ಮೇಲೆ ಸಾವರ್ಕರ್ ಪೋಟೊವವನ್ನು ವಿದ್ಯಾರ್ಥಿಯೊಬ್ಬ ಅಳವಡಿಸಿರುವ ವೀಡಿಯೊ ವೈರಲ್ ಆಗಿತ್ತು. ಇದು ಗಮನಕ್ಕೆ ಬಂದ ತಕ್ಷಣ ಪ್ರಾಂಶುಪಾಲೆ ಅನುಸೂಯ ಅವರು ಸಾವರ್ಕರ್ ಪೊಟೋ ತೆಗೆದಿದ್ದರು.
ಈ ವಿಚಾರದಲ್ಲಿ ಇಂದು ಮಧ್ಯಾಹ್ನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ವಾದವಿವಾದ ಆರಂಭವಾಗಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿ ವಿ ಕಾಲೇಜಿನಲ್ಲಿ ಹಿಜಾಬ್ ವಿಚಾರದಲ್ಲಿ ವಿವಾದ ಆರಂಭದ ಬಳಿಕ ವಿದ್ಯಾರ್ಥಿಯೊಬ್ಬ ಸಾಗರದ ಕರ್ ಪೊಟೋ ಹಾಕಿದ ಘಟನೆ ನಡೆದಿತ್ತು. ಇದೀಗ ಇದೇ ವಿಚಾರ ವಿದ್ಯಾರ್ಥಿಗಳ ನಡುವೆ ಘರ್ಷಣೆಗೆ ಕಾರಣವಾಗಿದೆ.

ಮಧ್ಯಪ್ರವೇಶಿಸಿದ ಪೊಲೀಸರು
ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ಬಂಧನ ಮಾಡುವಂತೆ ಸಿಎಫ್ ಐ ಮತ್ತು ಎನ್ ಎಸ್ ಯು ಐ ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ಮಾಡಿದೆ. ಸುಮಾರು ಇಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲೇಜಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು,ಗೇಟ್ ಮುರಿಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ.
ಆ ಬಳಿಕ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ಸಂಘಟನೆಗಳ ಮುಖಂಡರು, ಒಂದು ವಾರದ ಒಳಗಾಗಿ ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ಬಂಧನ ಮಾಡಬೇಕು..ಎಬಿವಿಪಿಯ ಕೆಲಸಗಳಿಗೆ ಬೆಂಬಲನೀಡುತ್ತಿರುವ ಪ್ರಾಂಶುಪಾಲೆ ಡಾ.ಅನುಸೂಯ ರೈ ಅವರನ್ನು ಅಮಾನತು ಮಾಡಬೇಕು ಇಲ್ಲವಾದಲ್ಲಿ ಕೋಣಾಜೆಯಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಯಲಕ್ಕೆ ಮುತ್ತಿಗೆ ಹಾಕೋದಾಗಿ ಹೇಳಿದ್ದಾರೆ.

ಹಿಜಾಬ್ ವಿದ್ಯಾರ್ಥಿನಿಯರ ಮನವಿ
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆದ ಹಿಜಾಬ್ ಪ್ರಕರಣ ಮತ್ತೊಂದು ಆಯಾಮವನ್ನು ಪಡೆದಿದೆ. ಹಿಜಾಬ್ ವಿದ್ಯಾರ್ಥಿನಿಯರು ಮಂಗಳೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಬೆಂಬಲಕ್ಕೆ ಧಾರ್ಮಿಕ ಮುಖಂಡರು ಬರುವಂತೆ ಮನವಿ ಮಾಡಿದ್ದಾರೆ. ಮಂಗಳೂರು ವಿವಿ ಸಮನ್ವಯ ಸಮಿತಿಯ ಹೆಸರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿದ್ಯಾರ್ಥಿನಿಯರು ತಮಗೆ ವಿವಿ ಕಾಲೇಜಿಂದ ಅನ್ಯಾಯ ಆಗಿದೆ. ವಿವಿ ಕಾಲೇಜಿನ ನಿಯಮದ ಪ್ರಕಾರವಾಗಿ ನಾವು ನಡೆದುಕೊಂಡಿದ್ದೇವೆ. ಆದರೆ ನಮಗೆ ಕಾಲೇಜಿನಲ್ಲಿ ಶೋಷಣೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಜಾಬ್ ಪರವಾಗಿರುವ ವಿದ್ಯಾರ್ಥಿನಿ ಗೌಸಿಯಾ, ಈ ಹಿಂದೆ ವಿವಿ ಕಾಲೇಜಿನಲ್ಲಿ ಯಾವುದೇ ಹಿಜಾಬ್ ಸಮಸ್ಯೆ ಇರಲಿಲ್ಲ. ಹೈ ಕೋರ್ಟ್ ಆದೇಶದ ಬಳಿಕವೂ ನಾವು ಹಿಜಾಬ್ ಹಾಕಿಕೊಂಡು ಹೋಗಿದ್ದೇವೆ. ಆದರೆ ಕೆಲ ದಿನಗಳ ಬಳಿಕ ರಾತ್ರೋ ರಾತ್ರಿ ಈ ಸಮಸ್ಯೆ ಆರಂಭವಾಗಿದೆ.
ಈ ವಿಚಾರದಲ್ಲಿ ನಾವು ಹಲವು ಬಾರಿ ವಿವಿ ಕುಲಪತಿ ಬಳಿಗೆ ಹೋಗಿದ್ದೆವು. ಆಗ ವಿಸಿ ಜಿಲ್ಲಾಧಿಕಾರಿ ಬಳಿ ಕೋರ್ಟ್ ಆದೇಶದ ಸ್ಪಷ್ಟನೆ ಲೆಟರ್ ತನ್ನಿ ಎಂದಿದ್ದು. ಹೀಗಾಗಿ ನಾವು ಜಿಲ್ಲಾಧಿಕಾರಿ ಬಳಿಗೆ ಹೋಗಿದ್ದೆವು, ಆದರೆ ಅವರು ಮೊದಲಿಗೆ ಸಿಗಲಿಲ್ಲ. ಆ ಬಳಿಕ ಮತ್ತೆ ಕಾಲೇಜಿಗೆ ಹೋದಾಗ ನಮ್ಮನ್ನ ಹೊರಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಚ್ಚಳಿಕೆ ಬರೆದು ಕೊಟ್ಟು ಕಾಲೇಜಿಗೆ ಹಾಜರ್
ಮಂಗಳೂರು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿದೆ. ತಮ್ಮ ಪಟ್ಟು ಸಡಿಲಿಸಿ ಕಾಲೇಜಿನ ಸುಮಾರು 46 ವಿದ್ಯಾರ್ಥಿನಿಯರು ಹಿಜಾಬ್ ಕಳಚಿಟ್ಟು ತರಗತಿಗಳಿಗೆ ಹಾಜರಾಗಿದ್ದಾರೆ. ಒಟ್ಟು 101 ಮುಸ್ಲಿಂ ವಿದ್ಯಾರ್ಥಿನಿಯರು ಇರುವ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜು ಇದಾಗಿದ್ದು, ಕಳೆದ ಒಂದು ವಾರದಿಂದ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಸುದ್ದಿಯಾಗಿತ್ತು.
ರಾಜ್ಯದಲ್ಲಿ ಹಿಜಾಬ್ ವಿವಾದ ತಣ್ಣಗಾಗಿದ್ದ ಸಂದರ್ಭದಲ್ಲಿ ಮಂಗಳೂರಿನ ಶ್ವವಿದ್ಯಾಲಯ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ತೊಡುತ್ತೇವೆ, ವಿಶ್ವವಿದ್ಯಾಲಯದಲ್ಲಿ ನಿಯಮದಲ್ಲಿ ಹಿಜಾಬ್ ತೊಡಲು ಅವಕಾಶ ಇದೆ ಎಂದು ಹೇಳಿ ಮೊದಲು ಹಿಜಾಬ್ ವಿವಾದ ಪುನಾರಂಭ ಮಾಡಿದರು. ಈ ವಿವಾದ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನ ಆರು ಮಂದಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ನಮಗೆ ಹಿಜಾಬ್ ಬೇಕು ಎಂದು ಹಠ ಹಿಡಿದರು. ಕೊನೆಗೆ ಕಾಲೇಜಿ ಮಂಡಳಿ ಈ ಆರು ವಿದ್ಯಾರ್ಥಿನಿಯರನ್ನು 6 ದಿನಗಳ ಕಾಲ ಅಮಾನತು ಮಾಡಿತ್ತು. ಇದೀಗ ಆರೂ ವಿದ್ಯಾರ್ಥಿನಿಯರು ಕಾಲೇಜಿನ ಸಮವಸ್ತ್ರ ನಿಯಮಾಳಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟು ಗುರುವಾರದಿಂದ ಕಾಲೇಜಿಗೆ ಹಾಜರಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications