ಕುಕ್ಕೆ ಸುಬ್ರಹ್ಮಣ್ಯದ ದಾಸೋಹ ತಯಾರಿಸುವ ಕೋಣೆಯಲ್ಲಿ ಇನ್ಮುಂದೆ ಸಿಸಿಟಿವಿ ಕಡ್ಡಾಯ
ಮಂಗಳೂರು, ಡಿಸೆಂಬರ್ 20: ಚಾಮರಾಜನಗರದ ಕಿಚ್ಚುಗುತ್ತಿಯ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ 15 ಮಂದಿ ಮೃತಪಟ್ಟಿರುವ ಘೋರ ದುರಂತ ರಾಷಷ್ಟ್ರವ್ಯಾಪಿ ಗಮನ ಸೆಳೆಯಿತು. ಸುಳ್ವಾಡಿ ಮಾರಮ್ಮ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳಲ್ಲಿ ಅನ್ನದಾಸೋಹ, ನೈವೇದ್ಯ, ಪ್ರಸಾದ ವಿತರಣೆಗೆ ಅನುಮತಿ ಪಡೆಯಲೇಬೇಕು. ಅನುಮತಿ ಪಡೆಯದೆ ಅನ್ನದಾಸೋಹ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ದಾಸೋಹ ತಯಾರಿಸುವ ಕೋಣೆಯಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ದೇವರಿಗೆ ನೈವೇದ್ಯ ನೀಡುವ ಮುನ್ನ ಪರಿಶೀಲನೆ ನಡೆಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಸುಳ್ವಾಡಿ ಮಾರಮ್ಮ ದೇಗುಲದಲ್ಲಿ ಪ್ರಸಾದ ದುರಂತ ಹಿನ್ನೆಲೆಯಲ್ಲಿ ಕರಾವಳಿಯ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಾಗಿ ನಿಯಮ ಜಾರಿ ತರಲಾಗಿದೆ. ರಾಜ್ಯದ ಶ್ರೀಮಂತ ದೇಗುಲ ಎಂದೇ ಗುರುತಿಸಲಾಗುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುರಕ್ಷಾ ಕ್ರಮಕ್ಕೆ ದೇವಾಲಯದ ಆಡಳಿತ ಮಂಡಳಿ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದೆ.
ದೇವಾಲಯದಲ್ಲಿ ಅಡುಗೆ ತಯಾರಿ, ಆಹಾರ ಶೇಖರಣೆ, ಪ್ರಸಾದ ಕೊಠಡಿಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದೇವರ ನೈವೇದ್ಯ, ದಾಸೋಹ ಕೊಠಡಿಗಳಿಗೆ ಸಿಸಿಟಿವಿ ಅಳವಡಿಸಲು ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಈ ಕುರಿತು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾಹಿತಿ ನೀಡಿದ್ದಾರೆ.












Click it and Unblock the Notifications