ಮಂಗಳೂರು: ದೇವಸ್ಥಾನಗಳಲ್ಲಿ ಸಲಾಂ ಪೂಜೆ ನಿಲ್ಲಿಸಿ, ಧಾರ್ಮಿಕ ಷರಿಷತ್ ಆದೇಶ
ಮಂಗಳೂರು, ಡಿಸೆಂಬರ್, 09: ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಟಿಪ್ಪುವಿನ ಕಾಲದ ದೀವಟಿಗೆ ಸಲಾಂಗೆ ಇತೀಶ್ರೀ ಹಾಕಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯ ಧಾರ್ಮಿಕ ಪರಿಷತ್ ಈ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ರಾಜ್ಯದ ಯಾವುದೇ ದೇವಸ್ಥಾನಗಳಲ್ಲಿ ದೀವಿಟಿಗೆ ಪೂಜೆ ಅಥವಾ ಸಲಾಂ ಪೂಜೆಯನ್ನು ಮಾಡಬಾರದು ಎಂದು ಧಾರ್ಮಿಕ ಷರಿಷತ್ ಆದೇಶ ಹೊರಡಿಸಿದೆ.
ಟಿಪ್ಪು ಕಾಲದಲ್ಲಿ ಆರಂಭಗೊಂಡಿದ್ದ ದೀವಿಟಿಗೆ ಅಥವಾ ಸಲಾಂ ಪೂಜೆ ರಾಜ್ಯದ ಕೆಲ ಎಲ್ಲಾ ಪ್ರಸಿದ್ಧ ದೇವಾಲಯಗಳಲ್ಲಿ ನಡೆಯುತ್ತಿದೆ. ದೇವಸ್ಥಾನದಲ್ಲಿ ಸಂಜೆ ಸಮಯದಲ್ಲಿ ದೀವಿಟಿಗೆ ಪೂಜೆ ನಡೆಯುತ್ತಿತ್ತು. ಆದರೆ ಇನ್ಮುಂದೆ ದೇವಸ್ಥಾನಗಳಲ್ಲಿ ದೀವಟಿಕೆ ಸಲಾಂ ಪೂಜೆ ನಡೆಯುವುದಿಲ್ಲ ಅಂತಾ ಧಾರ್ಮಿಕ ಪರಿಷತ್ ಹೇಳಿದೆ.
'ಟಿಪ್ಪು ನಿಜ ಕನಸುಗಳು' ಕೃತಿ ಮಾರಾಟಕ್ಕಿದ್ದ ತಡೆ ತೆರವು
ಸಲಾಂ ಪೂಜೆ ನಿಲ್ಲಿಸಲು ಸೂಚನೆ
ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರು ಮಹಾಲಿಂಗೇಶ್ವರ ಮೊದಲಾದ ದೇವಸ್ಥಾನಗಳಲ್ಲಿ ಇಂದಿಗೂ ಸಲಾಂ ಪೂಜೆ ಪದ್ಧತಿ ನಡೆದುಕೊಂಡು ಬರುತ್ತಿದೆ. ಆದರೆ ಇನ್ಮುಂದೆ ಈ ದೀವಟಿಕೆ ಸಲಾಂ ಪೂಜೆ ನಡೆಸದಂತೆ ಧಾರ್ಮಿಕ ಪರಿಷತ್‌ನಿಂದ ಸುತ್ತೋಲೆಯನ್ನು ಹೊರಡಿಸಲಾಗಿದೆ. ಸಂಜೆ ಸಮಯದಲ್ಲಿ ದೀಪ ನಮಸ್ಕಾರ ಪೂಜೆ ನೆರವೇರಿಸಲು ದೇವಸ್ಥಾನಗಳಿಗೆ ಸೂಚಿಸಲಾಗಿದೆ. ರಾಜ್ಯವನ್ನಾಳುವ ರಾಜ, ಮಂತ್ರಿ ಮತ್ತು ಪ್ರಜೆಗಳ ಒಳಿತಿಗಾಗಿ ದೀಪ ನಮಸ್ಕಾರ ಪೂಜೆ ನಡೆಯಬೇಕು ಎಂದು ಧಾರ್ಮಿಕ ಪರಿಷತ್ ದೇವಸ್ಥಾನಗಳಿಗೆ ಸೂಚನೆ ನೀಡಿದೆ.
ಸೂರ್ಯನಾರಾಯಣ ಭಟ್ ಹೇಳಿದ್ದೇನು?
ಅಲ್ಲದೇ ಮುಜರಾಯಿ ಇಲಾಖೆ ಎನ್ನುವ ಹೆಸರನ್ನೂ ರಾಜ್ಯ ಧಾರ್ಮಿಕ ಪರಿಷತ್ ಬದಲಾಯಿಸಿದ್ದು, ಇದನ್ನು ಇದೀಗ ಧರ್ಮಾದಾಯ ದತ್ತಿ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, "ದೀವಿಟಿಗೆ ಅಥವಾ ಸಲಾಂ ಪೂಜೆ ಅನ್ನುವುದು ನಮ್ಮ ಆಚರಣೆಯಲ್ಲಿ ಬರುವುದಿಲ್ಲ. ಸಲಾಂ ಅನ್ನುವುದು ನಮ್ಮ ಭಾಷೆಯಲ್ಲ. ಹೀಗಾಗಿ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ದೀವಿಟಿಗೆ ಪೂಜೆ ಅಥವಾ ಸಲಾಂ ಪೂಜೆಯನ್ನು ನಿಲ್ಲಿಸುವುದಾಗಿ," ಹೇಳಿದ್ದಾರೆ. ಇನ್ಮುಂದೆ ಧಾರ್ಮಿಕ ಪರಿಷತ್ ಅನ್ನು ಮುಜರಾಯಿ ಇಲಾಖೆ ಅಂತಾ ಯಾರೂ ಕರೆಯಬಾರದು ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದರು.