ತುರ್ತು ನೀರಿನ ಪೂರೈಕೆಗಾಗಿ ದಕ್ಷಿಣ ಕನ್ನಡಕ್ಕೆ 6 ಕೋಟಿ ರೂ.ಬಿಡುಗಡೆ
ಮಂಗಳೂರು, ಮೇ.07:ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ತುರ್ತು ನೀರು ಪೂರೈಕೆಗೆ ರಾಜ್ಯ ಸರಕಾರದಿಂದ ಜಿಲ್ಲಾಡಳಿತಕ್ಕೆ 6 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ನೀರು ಪೂರೈಕೆಯ ತುರ್ತು ಪರಿಸ್ಥಿತಿ ನಿರ್ವಹಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ಕಳೆದ ವರ್ಷ ಇದೇ ಸಮಯ 5.6 ಮೀಟರ್ ನೀರಿತ್ತು. ಆದರೆ ಈ ಬಾರಿ ತುಂಬೆಯಲ್ಲಿ ಈಗ 4.38 ಮೀಟರ್ ನೀರು ಇದೆ. ಈ ಹಂತದಲ್ಲಿ ಟ್ಯಾಂಕರ್ ಸಹಿತ ಇತರ ವ್ಯವಸ್ಥೆಗಳ ಮೂಲಕ ನೀರು ಪೂರೈಕೆ ಮಾಡಲು ಜಿಲ್ಲಾಧಿಕಾರಿ ಜತೆ ಸಮಾಲೋಚನೆ ಮಾಡಲಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಭೀರ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಸಡಿಲಿಸಬೇಕು ಎಂದು ಒತ್ತಾಯಿಸಿದ ಡಿಸೋಜಾ, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಗೆ ಜನರು ಎದುರಿಸುವ ನೀರಿನ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಸಡಿಲಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಕುರಿತು ಪ್ರಧಾನಿ ಮೋದಿಯವರು ಕೀಳು ಮಟ್ಟದ ಭಾಷೆ ಪ್ರಯೋಗಿಸಿದ್ದಾರೆ ಎಂದು ಕಿಡಿಕಾರಿದ ಡಿಸೋಜಾ, ರಾಜೀವ ಗಾಂಧಿ ವಿರುದ್ಧ ತೀರಾ ಕೆಳಮಟ್ಟದ ಭಾಷಾ ಪ್ರಯೋಗ ಪ್ರಧಾನಿಯ ಘನತೆಗೆ ತಕ್ಕುದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೋಫೋರ್ಸ್ ಪ್ರಕರಣದಿಂದ ನ್ಯಾಯಾಲಯದ ಮೂಲಕ ದೋಷ ಮುಕ್ತರಾದ ಬಳಿಕವೂ ಪ್ರಧಾನಿ ಮೋದಿ ಅವರು ರಾಜೀವ್ ಗಾಂಧಿ ಅವರ ಕುರಿತು ಈ ರೀತಿಯ ಹೇಳಿಕೆ ನೀಡಿರುವುದು ವಿಷಾದನೀಯ ಎಂದು ಹೇಳಿದರು.












Click it and Unblock the Notifications