SSLC Result: ಮೊಟ್ಟ ಮೊದಲ ಬಾರಿಗೆ 100% ಫಲಿತಾಂಶದ ಮೂಲಕ ಇತಿಹಾಸ ಸೃಷ್ಟಿಸಿದ ಮಂಗಳೂರಿನ ಈ ಶಾಲೆ
ಮಂಗಳೂರು, ಮೇ, 13: ರಾಜ್ಯದಲ್ಲಿ ಮೇ 09ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆಯಾಗಿದ್ದು, ಆ ವೇಳೆ ಯಾವ್ಯಾವ ಜಿಲ್ಲೆಗಳಿಗೆ ಎಷ್ಟನೇ ಸ್ಥಾನ ಎನ್ನುವ ಮಾಹಿತಿಯನ್ನು ಒದಗಿಸಲಾಗಿತ್ತು. ಆದರೆ ಕಲವು ಶಾಲೆಗಳು ತಲೆಮರೆಕಾಯಿಯಂತೆ ಉತ್ತಮ ಸಾಧನೆ ಮಾಡಿದರೂ ಬೆಳಕಿಗೆ ಬಂದಿಲ್ಲ. ಇದೀಗ ಅಂತಹ ಒಂದೊಂದೇ ಶಾಲೆಗಳ ಸಾಧನೆಗಳು ಹೊರಬರುತ್ತಿವೆ. ಹಾಗೆಯೇ ಈ ಬಾರಿ ಮಂಗಳೂರು ಜಿಲ್ಲೆ ಸುರತ್ಕಲ್‌ನ ಮದ್ಯದಲ್ಲಿರುವ ವಾಲ್ಮೀಕಿ ಆಶ್ರಮ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಲಿತಾಂಶದಲ್ಲಿ ವಿಶೇಷ ಸಾಧನೆ ಮೂಲಕ ಗುರುತಿಸಿಕೊಂಡಿದೆ.
ವಾಲ್ಮೀಕಿ ಆಶ್ರಮ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಲಿತಾಂಶದಲ್ಲಿ ಶೇಕಡಾ 100ರಷ್ಟು ಫಲಿತಾಂಶ ಪಡೆದು ಇತಿಹಾಸ ಬರೆದಿದೆ. 2004-05ರಲ್ಲಿ ಹೈಸ್ಕೂಲ್ ಮಾನ್ಯತೆ ಪಡೆದ ನಂತರ ಶಾಲೆಯು ಮೊದಲ ಬಾರಿಗೆ ಈ ಸಾಧನೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೊರಗ ಸಮುದಾಯದ ವಿದ್ಯಾರ್ಥಿ ಸೋಮನಾಥ್ ಎಸ್‌ಎಸ್‌ಎಲ್‌ಸಿಯಲ್ಲಿ 540 (ಶೇಕಡಾ 86.4) ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಗಳಿಸಿದ್ದಾರೆ. ಇದು ಶಾಲೆಯ ವಿದ್ಯಾರ್ಥಿಯೊಬ್ಬ ಇಲ್ಲಿಯವರೆಗೆ ಗಳಿಸಿದ ಅತ್ಯಧಿಕ ಅಂಕವಾಗಿದೆ. ಸಾಮಾನ್ಯ ವಿಭಾಗದಲ್ಲಿ ಸೌಜನ್ಯ ಟಿ. ಶಾಲೆಯಲ್ಲಿ 513 ಅಂಕ ಗಳಿಸಿದ್ದಾಳೆ. ಈ ಮೂಲಕ ವಾಲ್ಮೀಕಿ ಆಶ್ರಮ ಶಾಲೆ ಮೊಟ್ಟ ಮೊದಲ ಬಾರಿಗೆ ವಿಶೇಷ ಸಾಧನೆ ಮಾಡಿದೆ.
ಇನ್ನು 10ನೇ ತರಗತಿಯಲ್ಲಿ 19 ಮಕ್ಕಳಿದ್ದು, 2015-16ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆ ಶೂನ್ಯ ಫಲಿತಾಂಶ ದಾಖಲಿಸಿತ್ತು. ಆದರೆ ಈ ಬಾರಿ ಅಂದರೆ 2024ರ ಫಲಿತಾಂಶದಲ್ಲಿ ಶೇ.100 ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ.
ಶಾಲಾ ಪ್ರಭಾರಿ ಮುಖ್ಯಶಿಕ್ಷಕ ಕಮ್ ವಾರ್ಡನ್ ನಿಂಗರಾಜು ಮಾತನಾಡಿ , "ಶೈಕ್ಷಣಿಕ ವರ್ಷದ ಆರಂಭದಿಂದಲೂ ಉತ್ತಮ ಶ್ರೇಣಿಗಾಗಿ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಶ್ರಮವಹಿಸಿದ್ದರು. ಅಷ್ಟೇ ಅಲ್ಲದೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ ಕೆ, ಐಟಿಡಿಪಿ ಅಧಿಕಾರಿ ಶಿವಕುಮಾರ್ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಿ.ಎಚ್.ಅಧಿಕಾರಿ ಸುರೇಶ ಅಡಿಗ ಅವರು ನಮಗೆ ಉತ್ತಮ ಮಾರ್ಗದರ್ಶನ ನೀಡಿದ್ದರು," ಎಂದು ಹೇಳಿದರು.
"ಶೈಕ್ಷಣಿಕ ವರ್ಷದಲ್ಲಿ ಶಿವಕುಮಾರ್ ನಿಯಮಿತವಾಗಿ ಶಾಲೆಗೆ ಭೇಟಿ ನೀಡುತ್ತಿದ್ದರು ಮತ್ತು ನಮಗೆ ನಿರಂತರವಾಗಿ ಬೆಂಬಲ ನೀಡುತ್ತಿದ್ದರು. ಶಿಕ್ಷಕರು ಪ್ರತಿದಿನ ಬೆಳಗ್ಗೆ 7ರಿಂದ 9 ರವರೆಗೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು. ಮತ್ತು ರಾತ್ರಿ 9 ರವರೆಗೆ ವಿದ್ಯಾರ್ಥಿಗಳ ಗೊಂದಲಗಳನ್ನು ನಿವಾರಿಸುವಲ್ಲಿ ನಿರತರಾಗಿದ್ದರು," ಎಂದರು.
19 ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕ ಗಳಿಸಿದ್ದು, ಒಂಬತ್ತು ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಐವರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇನ್ನು ಈ ಪ್ರದೇಶದ ಮೂಲನಿವಾಸಿ ಬುಡಕಟ್ಟುಗಳೆಂದು ಪರಿಗಣಿಸಲ್ಪಟ್ಟ ಕೊರಗ ಸಮುದಾಯದ ಮಕ್ಕಳಿಗಾಗಿ ವಸತಿ ಶಾಲೆಯನ್ನು ಆಶ್ರಮ ಶಾಲೆಯಾಗಿ ಪ್ರಾರಂಭಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಪಂಗಡ ಇಲಾಖೆಯಿಂದ ಶಾಲೆ ನಡೆಸಲಾಗುತ್ತಿದೆ. ಕೊರಗ ಸಮುದಾಯದ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕ್ಷೀಣಿಸಿದಾಗ, ವಸತಿ ಶಾಲೆಯಲ್ಲಿ ಎಸ್‌ಟಿ, ಎಸ್‌ಸಿ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಪ್ರವೇಶ ನೀಡಿ ಉಚಿತ ಶಿಕ್ಷಣ ನೀಡಲಾಯಿತು.
2023-24ರಲ್ಲಿ 202 ವಿದ್ಯಾರ್ಥಿಗಳು 1 ರಿಂದ 10ನೇ ತರಗತಿಯವರೆಗೆ ತಮ್ಮ ಅಧ್ಯಯನವನ್ನು ಮುಂದುವರೆಸುತ್ತಿದ್ದರು. ಇನ್ನು 2024-25ನೇ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿಯಲ್ಲಿ 26 ವಿದ್ಯಾರ್ಥಿಗಳು ಇದ್ದರು. ಕಳೆದ ವರ್ಷ 13 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಒಂಬತ್ತು ಮಂದಿ ಉತ್ತೀರ್ಣರಾಗಿದ್ದರು ಎಂದು ನಿಂಗರಾಜು ಹೇಳಿದರು. ಇನ್ನು ಈ ಬಾರಿ ಸೋಮನಾಥ್ ಎಂಬ ವಿದ್ಯಾರ್ಥಿ ಕಠಿಣ ಪರಿಶ್ರಮದಿಂದ ಉತ್ತಮ ಅಂಕಗಳನ್ನು ಪಡೆದಿದ್ದಾನೆ," ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿರುವ ಸೋಮನಾಥ್ ಮಾತನಾಡಿ, "ಕಲಾ ವಿಭಾಗದಲ್ಲಿ ವ್ಯಾಸಂಗವನ್ನು ಮುಂದುವರೆಸುತ್ತೇನೆ. ನಾನು 1ನೇ ತರಗತಿಯಿಂದ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಓದಿದ್ದೇನೆ. ಇನ್ನು ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು," ಎಂದು ಹೇಳಿದರು.












Click it and Unblock the Notifications