ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು-ಬೆಳಕಿನ ಕ್ರೀಡೋತ್ಸವ: ಸರ್ವಕಲೆಗೂ ಸೈ ಎನಿಸಿಕೊಂಡ ವಿದ್ಯಾರ್ಥಿಗಳು
ಮಂಗಳೂರು, ಡಿಸೆಂಬರ್ 11: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಕ್ರೀಡೋತ್ಸವ ನೋಡುಗರನ್ನು ಬೆರಗುಗೊಳಿಸಿದೆ. ಇಲ್ಲಿ ಚಿಣ್ಣರ ಲೋಕವೇ ಸೃಷ್ಠಿಯಾಗಿತ್ತು. ಎಳೆಯ ಮಕ್ಕಳು ಮೈದಾನದ ತುಂಬೆಲ್ಲಾ ಹರಡಿ ನೃತ್ಯ ಮಾಡಿದರೆ, ಬಾಲಕರು ಸಾಹಸ ಪ್ರದರ್ಶನ ಮಾಡಿ ಮೈ ರೋಮಾಂಚನಗೊಳಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ನೃತ್ಯಕ್ಕೂ ಸಾಹಸಕ್ಕೂ, ಶಿಸ್ತಿಗೂ ಮನೋಸಾಮರ್ಥ್ಯಕ್ಕೂ ಸೈ ಎನಿಸಿಕೊಂಡರು. ರಾಜ್ಯದಲ್ಲೇ ಅತ್ಯಂತ ವಿಭಿನ್ನವಾಗಿ ನಡೆಯುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಸಾಹಸ ಜಗತ್ತು ನಿರ್ಮಾಣವಾಗಿತ್ತು.

ಶಾಲೆಯ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಈ ಬಾರಿಯೂ ವಿದ್ಯಾರ್ಥಿಗಳು ಜನರ ಹೃದಯ ಗೆದ್ದಿದ್ದು, ಎಲ್ಲಾ ಪ್ರಕಾರಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಶಾಲೆಯ ಮೂರುವರೆ ಸಾವಿರ ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದು, ವಿವಿಧ ಕಾರ್ಯಕ್ರಮಗಳನ್ನು ಕ್ರೀಡೋತ್ಸವದಲ್ಲಿ ನೀಡಿದ್ದಾರೆ. ಸಮೂಹ ಪ್ರದರ್ಶನದಲ್ಲಿ ಮಕ್ಕಳ ಶಿಸ್ತು ಕಾರ್ಯಕ್ರಮದ ಅಂದವನ್ನು ಇಮ್ಮಡಿ ಮಾಡಿದೆ.
ಕ್ರೀಡೋತ್ಸವದ ಪ್ರಾರಂಭದಲ್ಲಿ ಇತ್ತೀಚಿಗೆ ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ಎನ್ ಕೌಂಟರ್‌ನಲ್ಲಿ ಹುತಾತ್ಮರಾದ ನಾಲ್ವರು ಧೀರ ಯೋಧರನ್ನು ನೆನಪಿಸಲಾಯಿತು. ಯೋಧರ ಹೆಸರುಳ್ಳ ಪ್ಲೆಕಾರ್ಡ್ ಹಿಡಿದು ಪಥಸಂಚಲನ ಮಾಡಿ ವಿದ್ಯಾರ್ಥಿಗಳು ಗೌರವವಂದನೆ ಮಾಡಿದರು. ಶ್ರೀರಾಮ ವಿದ್ಯಾಕೇಂದ್ರದ ಶಿಶು ಮಂದಿರದ ಪುಟಾಣಿ ಗಳಿಂದ ಸಮೂಹ ನೃತ್ಯ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಘೋಷ್ ಪ್ರದರ್ಶನ, ನಿಯುದ್ಧ, ದೀಪಾರತಿ, ಯೋಗಾಸನ, ಮಲ್ಲಕಂಬ, ನ್ಯತ್ಯ ವೈವಿಧ್ಯ, ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಕ್ಕಳು ಪ್ರದರ್ಶನ ಮಾಡಿದ್ದಾರೆ.

ಬೆಂಕಿಯಲ್ಲಿ ಸಾಹಸ, ಸೈಕಲ್ ಸಾಹಸ, ಬೈಕ್ ಸಾಹಸ, ಕೇರಳ ಚೆಂಡೆವಾದನ ಹೀಗೆ ಸರ್ವಕಲೆಯನ್ನೂ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಪ್ರದರ್ಶನ ಮಾಡಿದ್ದಾರೆ. ಈ ಬಾರಿಯ ಕಲ್ಲಡ್ಕ ಕ್ರೀಡೋತ್ಸವದ ವಿಶೇಷವಾಗಿ ಚಂದ್ರಯಾನ ಮೂರರ ಯಶಸ್ಸಿನ ಬಗ್ಗೆ ಸ್ತಬ್ಧ ಚಿತ್ರ ಮಾಡಲಾಗಿತ್ತು. ಚಂದ್ರನಂಗಳಕ್ಕೆ ಲ್ಯಾಂಡರ್ ಸ್ಪರ್ಶ, ಪ್ರಧಾನಿ ಮೋದಿಯಿಂದ ಸಂಭ್ರಮಾಚರಣೆ, ವಿಜ್ಞಾನಿಗಳಿಗೆ ಅಭಿನಂದನೆ ಹೀಗೆ ಸಂಪೂರ್ಣ ಘಟನೆಯನ್ನು ಕಣ್ಣಿಗೆ ಕಟ್ಟುವ ರೀತಿ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.
ವಿದ್ಯಾರ್ಥಿಗಳ ಈ ಪ್ರದರ್ಶನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಸ್ರೋ ವಿಜ್ಞಾನಿಗಳು, ಗಣ್ಯರು ಭಾರೀ ಪ್ರಶಂಸೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಕಲ್ಲಡ್ಕದ ಕನ್ನಡ ಮಾಧ್ಯಮದ ಈ ಶಾಲೆಯ ಕ್ರೀಡೋತ್ಸವದಲ್ಲಿ ಮಕ್ಕಳ ಸಾಹಸವೇ ಆಕರ್ಷಣೆಯಾಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications