Mangaluru: ಇಟಲಿಯ ಸ್ಪೆಷಲ್ ಒಲಿಂಪಿಕ್ ಫ್ಲೋರ್ ಬಾಲ್ ಕೋಚ್ ಆಗಿ ಕರ್ನಾಟಕದ ಸೌಮ್ಯಾ ಆಯ್ಕೆ
ಮಂಗಳೂರು, ಮಾರ್ಚ್ 04: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಲಯನ್ಸ್ ವಿಶೇಷ ಶಾಲೆಯ ಶಿಕ್ಷಕಿ ಸೌಮ್ಯ ದೇವಾಡಿಗ ಮುಂಬರುವ ವಿಶೇಷ ಒಲಿಂಪಿಕ್ಸ್ ವಿಶ್ವ ಚಳಿಗಾಲದ ಕ್ರೀಡಾಕೂಟದಲ್ಲಿ ಭಾರತೀಯ ಫ್ಲೋರ್‌ಬಾಲ್ ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಇಟಲಿಯ ಟುರಿನ್‌ನಲ್ಲಿ ನಡೆಯಲಿರುವ ಈ ವಿಶೇಷ ಒಲಿಂಪಿಕ್ಸ್ ವಿಶ್ವ ಚಳಿಗಾಲದ ಕ್ರೀಡಾಕೂಟಕ್ಕೆ ತರಬೇತುದಾರರಾಗಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮಹಿಳೆಯಾಗಿದ್ದಾರೆ. ಸೌಮ್ಯ ದೇವಾಡಿಗ ಅವರ ಈ ವಿಶೇಷ ಸಾಧನೆ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ಸಂಪೂರ್ಣ ಕರ್ನಾಟಕವೇ ಹೆಮ್ಮೆ ಪಡುವಂತಹದ್ದು.
ಇಟಲಿಯಲ್ಲಿ ಮಾರ್ಚ್ 8 ರಿಂದ 15 ರವರೆಗೆ ವಿಶೇಷ ಒಲಿಂಪಿಕ್ಸ್ ವಿಶ್ವ ಚಳಿಗಾಲದ ಕ್ರೀಡಾಕೂಟ 2025 (Special Olympics World Winter Games) ನಡೆಯಲಿದೆ. ಸೌಮ್ಯ ದೇವಾಡಿಗ ಅವರು ಇಂದು (ಮಾರ್ಚ್ 04) ಮಂಗಳವಾರ ದೆಹಲಿಗೆ ಪ್ರಯಾಣಿಸಲಿದ್ದು, ಮಾರ್ಚ್ 6 ರಂದು ಇಟಲಿಗೆ ತೆರಳಲಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಸೌಮ್ಯ ದೇವಾಡಿಗ ಅವರು, 'ಮೊದಲು ರಾಷ್ಟ್ರೀಯ ಆಯ್ಕೆ ಶಿಬಿರದಲ್ಲಿ ನನ್ನನ್ನು ಕರ್ನಾಟಕ ತಂಡದ ಕೋಚ್ ಎಂದು ಘೋಷಿಸಿದಾಗ ಹೆಮ್ಮೆ ಅನಿಸಿತು. ಇದೀಗ ಭಾರತವನ್ನು ಪ್ರತಿನಿಧಿಸುವುದು ನನಗೆ ಇನ್ನಷ್ಟು ಹೆಮ್ಮೆಯ ವಿಷಯವಾಗಿದೆ. ನನ್ನ ಪ್ರಯತ್ನದಲ್ಲಿ ಸುರತ್ಕಲ್‌ನ ಲಯನ್ಸ್ ವಿಶೇಷ ಶಾಲೆ ನನಗೆ ಬಹಳ ಬೆಂಬಲ ನೀಡಿದೆ ಮತ್ತು ವಿಶೇಷ ಒಲಿಂಪಿಕ್ಸ್ ಭಾರತ್‌ನ ಪ್ರದೇಶ ನಿರ್ದೇಶಕ ಅಮರೇಂದ್ರ ಅವರು ನನಗೆ ತುಂಬಾ ಬೆಂಬಲ ನೀಡಿದ್ದಾರೆ' ಎಂದು ಹೇಳಿದರು.
ಮಾಜಿ ಕಬಡ್ಡಿ ಆಟಗಾರ್ತಿಯಾಗಿದ್ದ ಸೌಮ್ಯ ದೇವಾಡಿಗ ಅವರು ಮೊದಲು ಸಾಮಾನ್ಯ ಶಾಲೆಯಲ್ಲಿ ಕಲಿಸುತ್ತಿದ್ದರು. ಬಳಿಕ ಅವರು ಸುರತ್ಕಲ್‌ನ ಲಯನ್ಸ್ ವಿಶೇಷ ಶಾಲೆಯ ಶಿಕ್ಷಕಿಯಾಗಿ ಸೇರಿದ ಬಳಿಕ ವಿಶೇಷ ಮಕ್ಕಳಿಗೆ ತರಬೇತಿ ನೀಡಿ ವಿವಿಧ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಮಾಡಿದರು. ಬಳಿಕ ಹಾಕಿಯಂತೆಯೇ ಇರುವ ಕ್ರೀಡೆಯಾದ ಫ್ಲೋರ್‌ಬಾಲ್ ಬಗ್ಗೆ ತಮ್ಮ ಆಸಕ್ತಿ ಬೆಳೆಸಿಕೊಂಡು ಇಂದು ವಿಶೇಷ ಒಲಿಂಪಿಕ್ಸ್ ವಿಶ್ವ ಚಳಿಗಾಲದ ಕ್ರೀಡಾಕೂಟ 2025ರ ಕರ್ನಾಟಕದ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.
ಇನ್ನು ಫ್ಲೋರ್‌ಬಾಲ್ ತಂಡಕ್ಕೆ ಹಿಮಾಚಲ ಪ್ರದೇಶದಿಂದ ಇಬ್ಬರು ಮತ್ತು ಕರ್ನಾಟಕದಿಂದ ಮೂವರು ಆಯ್ಕೆ ಯಾಗಿದ್ದಾರೆ. ಸ್ಪೆಷಲ್ ಒಲಿಂಪಿಕ್ಸ್ ನಲ್ಲಿ 8 ವಿಭಾಗದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಭಾರತೀಯರು ಸ್ನೋ ಬೋರ್ಡಿಂಗ್, ಸ್ನೋ ಶೂ, ಅಲ್ಪೆನ್ ಸ್ಕೇಟಿಂಗ್, ಕ್ರಾಸ್ ಕಂಟ್ರಿ, ಫ್ಲೋರ್‌ಬಾಲ್ ಮತ್ತು ಫಿಗರ್ ಸ್ಕೇಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications