ಮಂಗಳೂರು ವಿವಿಯಲ್ಲಿದೆ ಕೃತಿ ಚೌರ್ಯ ತಡೆ ತಂತ್ರಾಂಶ
ಮಂಗಳೂರು, ಏ. 16 : ವಿಶ್ವವಿದ್ಯಾಲಯದ ಕಪಾಟಿನಲ್ಲಿರುವ ಕಡತಗಳನ್ನು ಕದ್ದು, ಅದರಲ್ಲಿನ ಸಂಶೋಧನೆಗಳನ್ನು ಯಥಾವತ್ತಾಗಿ ನಕಲು ಮಾಡಿ ತಮ್ಮ ಹೆಸರಿನಲ್ಲಿ ಪ್ರಕಟಿಸುವ ಬುದ್ಧಿವಂತ ಕಳ್ಳರನ್ನು ಹಿಡಿಯಲು ಮಂಗಳೂರು ವಿವಿ ಹೊಸ ತಂತ್ರ ರೂಪಿಸಿದೆ.
ಪಿಎಚ್‌ಡಿ ಪಡೆಯಲು ಸಲ್ಲಿಸುವ ಪ್ರಬಂಧಗಳಲ್ಲಿ ಕೃತಿ ಚೌರ್ಯವಾಗುತ್ತಿರುವುದನ್ನು ಗಮನಿಸಿದ ವಿವಿ ಈ ನೂತನ ತಂತ್ರಜ್ಞಾನವನ್ನು ಅಳವಡಿಸಿದೆ. 'ಆ್ಯಂಟಿ ಪ್ಲಜೇರಿಸಮ್' ಎಂಬ ಸಾಫ್ಟ್‌ವೇರ್ ಇದಾಗಿದ್ದು, ವಿದ್ಯಾರ್ಥಿಗಳು ಸಲ್ಲಿಸುವ ಪ್ರಬಂಧಗಳನ್ನು ತಪಾಸಣೆ ಮಾಡಿ ಕೃತಿ ಚೌರ್ಯ ಪತ್ತೆ ಹಚ್ಚುತ್ತದೆ.

ಈ ನೂತನ ತಂತ್ರಾಂಶವನ್ನು ಎರಡು ತಿಂಗಳ ಹಿಂದೆ ಅಳವಡಿಸಲಾಗಿದ್ದು, ಸಂಶೋಧನಾ ಗೈಡ್‌ಗಳಿಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದ್ದಾರೆ.
ನಿರ್ಣಯ ಕೈಗೊಳ್ಳಲಾಗಿತ್ತು : ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕೃತಿ ಚೌರ್ಯ ತಡೆಗಟ್ಟಲು ತಂತ್ರಾಂಶ ಅಳವಡಿಸುವ ಕುರಿತು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ರಾಜ್ಯದ ಎಲ್ಲ ವಿವಿಗಳಲ್ಲಿ ತಂತ್ರಾಂಶ ಆಳವಡಿಕೆಗೆ ನಿರ್ದೇಶನ ನೀಡಿತ್ತು. ಮಂಗಳೂರು ವಿವಿ ತಂತ್ರಾಂಶವನ್ನು ಅಳವಡಿಸಿಕೊಂಡಿದೆ.
ಈ ನೂತನ ತಂತ್ರಾಂಶದಿಂದ ಪ್ರಬಂಧದಲ್ಲಿ ಕೃತಿ ಚೌರ್ಯವಾಗಿದ್ದರೆ ಪತ್ತೆ ಹಚ್ಚಲಾಗುತ್ತದೆ. ಶೇ.25ಕ್ಕೂ ಅಧಿಕ ಕೃತಿಚೌರ್ಯವಿದ್ದರೆ ಮಂಡಿಸಿದ ಪ್ರಬಂಧವನ್ನು ತಿರಸ್ಕರಿಸಲಾಗುತ್ತದೆ ಎಂದು ಕುಲಪತಿಗಳು ಹೇಳಿದ್ದಾರೆ.
ಹೇಗೆ ಕೆಲಸ ಮಾಡುತ್ತದೆ : ಈ ತಂತ್ರಾಂಶವನ್ನು ಕಂಪ್ಯೂಟರ್‌ಗೆ ಅಳವಡಿಸಲಾಗಿದೆ. ಅಭ್ಯರ್ಥಿಗಳು ಸಿಡಿಯಲ್ಲಿ ನೀಡುವ ಪ್ರಬಂಧವನ್ನು ಕಂಪ್ಯೂಟರ್‌ಗೆ ಹಾಕಲಾಗುತ್ತದೆ. ಈ ತಂತ್ರಾಂಶದಲ್ಲಿ ಜಗತ್ತಿನ ಸಂಶೋಧನೆ ಮಾಹಿತಿಯನ್ನು ಸೇರಿಸಲಾಗಿರುತ್ತದೆ. ಪ್ರಬಂಧವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡುವ ಇದು ಎಷ್ಟು ಪ್ರಮಾಣದ ಕೃತಿ ಚೌರ್ಯವಾಗಿದೆ ಎಂದು ಪತ್ತೆ ಹಚ್ಚಲಿದೆ.












Click it and Unblock the Notifications