ಪುತ್ತೂರು ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರು ಅಮಾನತು
ಮಂಗಳೂರು, ಜೂನ್ 2: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಹಿಜಾಬ್ ವಿವಾದ ಜೋರಾಗಿದೆ. ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ಆರು ಮಂದಿ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಅಮಾನತು ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಕಾಲೇಜಿನ ಒಂದು ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದ ಕ್ರಮವನ್ನು ಖಂಡಿಸಿ ಧರಣಿ ಕೂತಿದ್ದಾರೆ. ಈ ಸಂದರ್ಭದಲ್ಲಿ ವರದಿಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು ಕೋಣೆಯಲ್ಲಿ ಕೂಡಿಹಾಕಿ ಕ್ಯಾಮರಾದಲ್ಲಿದ್ದ ದೃಶ್ಯಗಳನ್ನು ಬಲವಂತವಾಗಿ ಡಿಲೀಟ್ ಮಾಡಿದ್ದಾರೆ.
ಉಪ್ಪಿನಂಗಡಿಯ ಸರಕಾರಿ ಪದವಿ ಕಾಲೇಜಿನ ಆರು ವಿದ್ಯಾರ್ಥಿನಿಯರು ಕೋರ್ಟ್ ಆದೇಶದ ನಂತರವೂ ಹಿಜಾಬ್ ಧರಿಸಿ ತರಗತಿಗೆ ಹಾಜರಾದ ಹಿನ್ನಲೆ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ. ಈಗಾಗಲೇ ಕಾಲೇಜು ಮಂಡಳಿ ಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸುವಂತೆ ಸೂಚನೆ ನೀಡಿತ್ತು. ಆದರೂ ಆರು ಮಂದಿ ಹಿಜಾಬ್ ಧರಿಸಿ ಬಂದ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಕ್ರಮ ಕೈಗೊಂಡಿದ್ದರು.

ಆರು ದಿನ ಅಮಾನತು
ಅಮಾನತು ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಲೇಜು ಪ್ರಾಂಶುಪಾಲರು, ಹಿಜಾಬ್ ಗೆ ಸಂಬಂಧಿಸಿದ ನೋಟಿಸ್‌ಗಳನ್ನು ತರಗತಿಗಳಿಗೆ ಕಳಿಸಿದ್ದೇವೆ. ಹೈಕೋರ್ಟ್ ನಿಯಮದ ಪ್ರಕಾರ ಹಿಜಾಬ್ ನಿಷೇಧ ಮಾಡಿ ತರಗತಿಗಳನ್ನು ನಡೆಸುತ್ತಿದ್ದೇವೆ. ಯಾವುದೇ ವಿದ್ಯಾರ್ಥಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಆಗಮಿಸುತ್ತಿರಲಿಲ್ಲ. ಆದರೆ ಪ್ರಥಮ ಬಿಕಾಂ ಕೆಲವು ವಿದ್ಯಾರ್ಥಿನಿಯರು ತರಗತಿಗಳು ನಡೆಯದ ಸಂದರ್ಭದಲ್ಲಿ ತರಗತಿಯಲ್ಲಿ ಶಿರವಸ್ತ್ರವನ್ನು ಹಾಕಿದ್ದರು. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಲು ಉಪನ್ಯಾಸಕರ ಸಭೆ ನಿರ್ಧಾರ ಮಾಡಿದೆ. ಅವರ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಕೆಲವು ವಿದ್ಯಾರ್ಥಿಗಳಿಂದ ಹಠ
ನಿಯಮ ಉಲ್ಲಂಘಿಸಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು 6 ದಿನ ಅಮಾನತು ಮಾಡುವ ನಿರ್ಧಾರವನ್ನು ಕಾಲೇಜು ಆಡಳಿತ ಮಂಡಳಿ ತೆಗೆದುಕೊಂಡಿದೆ. ಆ ಬಳಿಕವೂ ಕಾಲೇಜಿನ ಶಿಸ್ತು ಚೆನ್ನಾಗಿತ್ತು. ಆದರೆ ಬುಧವಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಗಳಾಗಿವೆ. ಸಣ್ಣ ಜಗಳ ಬೇರೆ ರೀತಿಯ ಆಯಾಮವನ್ನು ಪಡೆದಿದೆ. ಗುರುವಾರದ ಉಪನ್ಯಾಸಕರ ಸಭೆಯಲ್ಲಿ ಎಲ್ಲಾ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದೆವು. ಕೆಲವರು ಹಿಜಾಬ್ ತೆಗೆಯೋಕೆ ಒಪ್ಪಿಕೊಂಡಿದ್ದಾರೆ, ಇನ್ನೂ ಕೆಲವರು ಹಿಜಾಬ್ ಬೇಕೆಂದು ಹಠ ಮಾಡಿದ್ದಾರೆ. ಹಠ ಮಾಡಿದ ವಿದ್ಯಾರ್ಥಿಯರ ಹೆತ್ತವರ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಹಿಜಾಬ್ ವಿಚಾರ ದೊಡ್ಡದಾಗುತ್ತಿದ್ದಂತೆ ಶಾಸಕರ ಮಧ್ಯಪ್ರವೇಶಿಸಲು ನಿರ್ಧರಿಸಿದ್ದು, ಶನಿವಾರ ಕಾಲೇಜಿನ ಅಭಿವೃದ್ಧಿ ಸಮಿತಿಯ ಸಭೆಯನ್ನು ಮಾಡುವುದಾಗಿ ಹೇಳಿದ್ದಾರೆ. ಶನಿವಾರ 9 ಗಂಟೆಗೆ ನಡೆಯುವ ಸಭೆಯಲ್ಲಿ ಸಮವಸ್ತ್ರದ ನಿಯಮದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಹಿಜಾಬ್ ಗೆ ವಿರುದ್ಧವಾಗಿ ಕೆಲ ಮಕ್ಕಳು ಕೇಸರಿ ಶಾಲು ಧರಿಸುವುದಾಗಿ ಹಠ ಮಾಡಿದ್ದಾರೆ. ಹಾಗಾಗಿ ಹಠ ಮಾಡಿದ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಪ್ರವೇಶ ಮಾಡಲು ಅನುವು ಮಾಡಿಕೊಟ್ಟಿಲ್ಲ ಎಂದು ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.

ಹಲ್ಲಗೊಳಗಾದ ಪತ್ರಕರ್ತರಿಂದ ದೂರು
ಹಿಜಾಬ್ ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ವರದಿಗಾರನನ್ನು ತಡೆದು, ಹಲ್ಲೆ ಮಾಡಿ. ಕೂಡಿಹಾಕಿದ ವಿಚಾರವಾಗಿ, ಹಲ್ಲೆಗೊಳಗಾದ ಪತ್ರಕರ್ತ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದು ಎರಡನೇ ಕಾಲೇಜು
ಇನ್ನು ಮಂಗಳೂರಿನಲ್ಲಿ ಹಿಜಾಬ್ ವಿವಾದ ನಡೆಯುತ್ತಿರುವುದು ಎರಡನೇ ಕಾಲೇಜಿನಲ್ಲಿ. ಹೀಗಾಗಲೇ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಈಗಾಗಲೇ ವಿವಾದ ದೊಡ್ಡಮಟ್ಟದಲ್ಲಿ ಚರ್ಚಿತವಾಗುತ್ತಿದೆ. ಅಲ್ಲೂ ಕೂಡ ಒಟ್ಟು 43 ವಿದ್ಯಾರ್ಥಿನಿಯರಲ್ಲಿ 12 ವಿದ್ಯಾರ್ಥಿನಿಯರು ಮಾತ್ರ ಹಿಜಾಬ್‌ಗಾಗಿ ಹೋರಾಟ ಮಾಡುತ್ತಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಬಂದಿದ್ದಾರೆ. ಆದರೆ ಕಾಲೇಜು ಮಂಡಳಿ ಮಾತ್ರ ಹಿಜಾಬ್‌ಗೆ ಅವಕಾಶ ಇಲ್ಲ, ನ್ಯಾಯಾಲಯದ ತೀರ್ಪನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಹೇಳಿದೆ. ಜಿಲ್ಲಾಧಿಕಾರಿ ಕೂಡ ವಿದ್ಯಾರ್ಥಿನಿಯರಿಗೆ ಕಾನೂನನ್ನು ಗೌರವಿಸಬೇಕೆಂದು ಬುದ್ದಿವಾದ ಹೇಳಿದ್ದಾರೆ.












Click it and Unblock the Notifications