ಮಂಗಳೂರು; ಟೇಕಾಫ್ ಆಗದ ವಿಮಾನ, ಪ್ರಯಾಣಿಕರ ಪರದಾಟ!
ಮಂಗಳೂರು, ಅಕ್ಟೋಬರ್ 04: ಒಮಾನ್ ರಾಷ್ಟ್ರದಲ್ಲಿ ಶಾಹೀನ್ ಚಂಡಮಾರುತದ ಅಬ್ಬರದಿಂದಾಗಿ ಒಮಾನ್ ರಾಷ್ಟ್ರ ಭಾನುವಾರ ಮತ್ತು ಸೋಮವಾರ ರಾಷ್ಟ್ರದ ಜನರಿಗೆ ರಜೆ ಘೋಷಣೆ ಮಾಡಿದೆ. ಚಂಡಮಾರುತದ ಪರಿಣಾಮ ಭಾರೀ ಮಳೆಯಾಗುವ ಹಿನ್ನಲೆಯಲ್ಲಿ ಒಮಾನ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಆದರೆ ಒಮಾನ್ ರಾಷ್ಟ್ರದಲ್ಲಿ ಚಂಡಮಾರುತದ ಅಬ್ಬರದಿಂದಾಗಿ ಮಂಗಳೂರಿನಿಂದ ಮಸ್ಕತ್‌ಗೆ ತೆರಳಬೇಕಾಗಿದ್ದ ಪ್ರಯಾಣಿಕರು ಪರದಾಡಿದರು. ಮಸ್ಕತ್‌ಗೆ ತೆರಳಬೇಕಾದ ವಿಮಾನ ಟೇಕಾಫ್ ಆಗದ ಕಾರಣ ಪ್ರಯಾಣಿಕರು ದಿನವೀಡೀ ವಿಮಾನ ನಿಲ್ದಾಣದಲ್ಲಿ ಕಾಯಬೇಕಾಯಿತು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಬೆಳಗ್ಗೆ ಮಸ್ಕತ್‌ಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಜೆಯವರೆಗೂ ಟೇಕಾಫ್ ಆಗಲಿಲ್ಲ. ವಿಮಾನಯಾನ ಮಾಡಲು ಬಂದಿದ್ದ 100ಕ್ಕೂ ಹೆಚ್ಚು ಜನರು ವಿಮಾನ ನಿಲ್ದಾಣದಲ್ಲೇ ಕಾಯುವಂತಾಯಿತು.

ಏರ್ ಇಂಡಿಯಾ ವಿಮಾನ ಸಂಜೆಯವರೆಗೂ ಟೇಕಾಫ್ ಆಗುವುದಿಲ್ಲ ಎಂಬ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡದ ಕಾರಣ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾದು ಕಾದು ಆಕ್ರೋಶ ವ್ಯಕ್ತಪಡಿಸಿದರು. ಸಂಜೆಯ ವೇಳೆಗೆ ಮಸ್ಕತ್‌ಗೆ ತೆರಳಬೇಕಾಗಿದ್ದ ವಿಮಾನ ರದ್ದಾಗಿರುವ ಮಾಹಿತಿ ನೀಡಿದ್ದು, ಬೆಳಗ್ಗೆಯಿಂದ ಕಾದಿದ್ದ ಪ್ರಯಾಣಿಕರು ಮತ್ತೆ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು.
ರದ್ದಾಗಿರುವ ವಿಮಾನ ಅಕ್ಟೋಬರ್ 7ರಂದು ಮಸ್ಕತ್‌ಗೆ ಪ್ರಯಾಣ ಬೆಳೆಸಲಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ಬೆಳಗ್ಗೆಯೇ ಅದನ್ನು ತಿಳಿಸಿದ್ದರೆ ಕಾಯುವುದು ತಪ್ಪುತ್ತಿತ್ತು ಎಂದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದರು.
ಸಂಜೆಯವರೆಗೂ ಕಾಯಿಸಿ ಬೇಜವಾಬ್ದಾರಿ ತೋರಿದ ಏರ್ ಇಂಡಿಯಾ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ, ಏರ್ ಪೋರ್ಟ್ ಒಳಭಾಗದಲ್ಲಿ ನೆಲದಲ್ಲೇ ಕುಳಿತು ಪ್ರಯಾಣಿಕರು ಏರ್ ಇಂಡಿಯಾ ನೀಡುವ ಆದೇಶಕ್ಕಾಗಿ ಕಾಯುವಂತಾಯಿತು. ಶಾಹೀನ್ ಚಂಡಮಾರುತದ ಪರಿಣಾಮದಿಂದ ಭಾರತದ ವಿವಿಧ ರಾಜ್ಯಗಳಲ್ಲಿ ಸಹ ಎರಡು ದಿನಗಳಿಂದ ಮಳೆಯಾಗುತ್ತಿದೆ.
ಏರ್ ಇಂಡಿಯಾ ವಿಮಾನಯಾನ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕ ಮಹಮ್ಮದ್ ಆಲಿ ಮಾತನಾಡಿ, "ಬೆಳಗ್ಗಿನಿಂದ ಸಂಜೆಯವರೆಗೆ ಏರ್ ಪೋರ್ಟ್ ಒಳಗೆ ನೆಲದಲ್ಲಿ ಕೂತು ಕಾದಿದ್ದೇವೆ. ಒಮಾನ್‌ನಲ್ಲಿ ಚಂಡಮಾರುತ ಒಮ್ಮೆಲೇ ನಿರ್ಧಾರವಾಗಿದ್ದು ಅಲ್ಲ. ಏರ್ ಇಂಡಿಯಾಗೆ ಮೊದಲೇ ಮಾಹಿತಿಯಿದ್ದರೇ ಬೆಳಗ್ಗೆಯೇ ಮಾಹಿತಿ ನೀಡಬೇಕಾಗಿತ್ತು. ಆದರೆ ಸಂಜೆಯವರೆಗೂ ಕಾಯಿಸಿ, ಆ ಬಳಿಕ ಅಕ್ಟೋಬರ್ 7ರಂದು ಇದೇ ವಿಮಾನ ಮಸ್ಕತ್‌ಗೆ ಹೋಗೋದಾಗಿ ಹೇಳಿದ್ದಾರೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಮಹಿಳೆಯರು ಮಕ್ಕಳು ಪರದಾಡುವಂತಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಮಾನ್‌ನಲ್ಲಿ ಶಾಹೀನ್ ಚಂಡಮಾರುತದ ಅಬ್ಬರ ಮುಂದಿನ 48 ಗಂಟೆಗಳಲ್ಲಿ ಜೋರಾಗಲಿದ್ದು, ಜನರು ಮನೆಯಿಂದ ಹೊರಬಾರದಂತೆ ಒಮಾನ್ ಸರ್ಕಾರ ಸೂಚಿಸಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಎರಡು ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ ಎಂದು ಒಮಾನ್ ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ.
ಚಂಡಮಾರುತದ ಅಬ್ಬರದಿಂದ ಒಮಾನ್ ದೇಶದ ಈಶಾನ್ಯ ಭಾಗದಲ್ಲಿ ಭಾರೀ ಗುಡ್ಡ ಕುಸಿತ ಸಂಭವಿಸಿದೆ. ಭಾರೀ ಗಾಳಿಗೆ ಮರಗಳನ್ನೆಲ್ಲಾ ಧರೆಗುರುಳಿದ್ದು ಹಲವು ರಸ್ತೆಗಳು ಸಹ ಬಂದ್ ಆಗಿವೆ. ಅಂಗಡಿ ಮುಂಗಟ್ಟುಗಳೆಲ್ಲಾ ಬಂದ್ ಮಾಡಿ ಜನ ಪ್ರವಾಹದಿಂದ ಭೀತಿಯಿಂದ ಮನೆ ಸೇರಿರುವ ಬಗ್ಗೆ ಮಾಹಿನಿ ವರದಿ ಮಾಡಿದೆ.
ರಸ್ತೆಗಳು ಕೇವಲ ಶೇ 30ರಷ್ಟು ಮಾತ್ರ ಕಾಣುತ್ತಿದ್ದು, ವಾಹನ ಸಂಚಾರ ಮಾಡಲು ಅಸಾಧ್ಯವಾಗಿದೆ. ಜೋರಾಗಿ ಗಾಳಿ ಬೀಸುತ್ತಿದ್ದು, ಮಳೆಯಾಗುತ್ತಿದೆ. ಮರಗಳೆಲ್ಲಾ ಕಣ್ಣೆದುರಲ್ಲೇ ಹಾರಿಹೋಗುತ್ತಿದೆ ಅಂತಾ ಮಸ್ಕತ್ ನಿವಾಸಿ ಅಹ್ಮದ್ ಆಲ್ ಸಿಯಾಬಿ ಶಹೀನ್ ಚಂಡಮಾರುತದ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.











Click it and Unblock the Notifications