ಹಿರಿಯ ಸಾಹಿತಿ ಡಾ. ಅಮೃತ್ ಸೋಮೇಶ್ವರ್‌ಗೆ ಭಾಷಾ ಸಮ್ಮಾನ್ ಗೌರವ
ಮಂಗಳೂರು, ಆಗಸ್ಟ್ 31: ಹಿರಿಯ ಸಾಹಿತಿ ಡಾ . ಅಮೃತ್ ಸೋಮೇಶ್ವರ್ ಅವರನ್ನು ಭಾಷಾ ಸಮ್ಮಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಖ್ಯಾತ ತುಳು ವಿದ್ವಾಂಸ ಹಾಗೂ ಬರಹಗಾರ ಡಾ. ಅಮೃತ್ ಸೋಮೇಶ್ವರ್ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವ ಲಭಿಸಿದೆ .
ಪ್ರಶಸ್ತಿಯೂ ಒಂದು ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಯನ್ನು ಒಳಗೊಂಡಿದೆ.

ಡಾ. ಅಮೃತ ಸೋಮೇಶ್ವರ ಅವರ ಹೆಸರನ್ನು ಹಿರಿಯ ಸಾಹಿತಿ ಡಾ .ಚಿನ್ನಪ್ಪ ಗೌಡ, ಪ್ರೊ. ಚಂದ್ರಕಲಾ ನಂದಾವರ ಮತ್ತು ಜಾನಕಿ ಬ್ರಹ್ಮಾವರ ಅವರನ್ನೊಳಗೊಂಡ ಆಯ್ಕೆ ಸಮಿತಿ ಸರ್ವಾನುಮತದಿಂದ ಭಾಷಾ ಸಮ್ಮಾನ್ ಗೌರವಕ್ಕೆ ಆಯ್ಕೆ ಮಾಡಿದೆ .
ತುಳು ಭಾಷೆಯ ಸಂಶೋಧನೆ, ಭಾಷಾ ಅಭಿವೃದ್ಧಿಗೆ ಡಾ. ಅಮೃತ ಸೋಮೇಶ್ವರ ಅಪಾರ ಕೊಡುಗೆ ನೀಡಿದ್ದಾರೆ. ತುಳು ಭಾಷೆಯಲ್ಲಿರುವ ತಮ್ಮ ಹಲವಾರು ಕೃತಿಗಳನ್ನು ಸೋಮೇಶ್ವರ್ ಕನ್ನಡಕ್ಕೆ ಅನುವಾದಿಸಿದ್ದಾರೆ. 7 ತುಳು ನಾಟಕಗಳನ್ನು ಬರೆದಿರುವ ಸೋಮೇಶ್ವರ್ ಅವರ 'ತಂಬಿಲಾ' ಮತ್ತು 'ರಂಗಿತಾ' ಪ್ರಮುಖ ಕಾವ್ಯ ಸಂಕಲನಗಳು .
ಇಲ್ಲಿಯವರೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸೋಮೇಶ್ವರ್ ಅವರನ್ನು ಅರಸಿ ಬಂದಿವೆ . ಪ್ರಸ್ತುತ 2016 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ.
ಈ ಕುರಿತು ಮಾತನಾಡಿರುವ ಡಾ. ಅಮೃತ ಸೋಮೇಶ್ವರ್, "ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಗೌರವಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಆದರೆ ಆ ಮಟ್ಟದ ಸಾಧನೆ ನಾನೇನು ಮಾಡಿಲ್ಲ. ಆದರೂ ಭಾಷಾ ಸನ್ಮಾನಕ್ಕೆ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಹೇಳುತ್ತೇನೆ," ಎಂದು ಪ್ರತಿಕ್ರಿಯಿಸಿದ್ದಾರೆ.
ಡಾ. ಅಮೃತ ಸೋಮೇಶ್ವರ್ ಜತೆ ಮರಾಠಿ ಸಾಹಿತಿ ಮಧುಕರ ಅನಂತ ಮೆಹಂದಳೆಯವರೂ ಭಾಷಾ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಲಿ ಮತ್ತು ಪ್ರಾಕೃತ ಭಾಷಾ ತಜ್ಞರಾಗಿರುವ ಮೆಹಂದಳೆ ಅವರು ಮಧ್ಯಯುಗೀನ ಸಾಹಿತ್ಯ ಹಾಗೂ ಮಹಾಕಾವ್ಯಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿದ್ದಾರೆ. ಮರಾಠಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ.












Click it and Unblock the Notifications