ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಭದ್ರತಾ ವೈಫಲ್ಯ: ಕಂಡೂ ಕಾಣದಂತೆ ಕಣ್ಣುಮುಚ್ಚಿ ಕುಳಿತ್ರಾ ಅಧಿಕಾರಿಗಳು?
ಮಂಗಳೂರು, ಜನವರಿ 09: ಮಂಗಳೂರು ನಗರದ ಸೆಂಟ್ರಲ್ ರೈಲು ನಿಲ್ದಾಣವು ಸಂಪೂರ್ಣ ಭದ್ರತಾ ವೈಫಲ್ಯದಿಂದ ಮುಳುಗಿದೆ. ರೈಲು ನಿಲ್ದಾಣಕ್ಕೆ ಪ್ರವೇಶ ದ್ವಾರದ ಮೆಟಲ್ ಡಿಟೆಕ್ಟರೇ ಕೆಲಸ ಮಾಡದೆ ಕೆಟ್ಟು ನಿಂತಿದೆ. ಪ್ರಯಾಣಿಕರ ಬ್ಯಾಗ್ ಪರಿಶೀಲನೆ ಮಾಡುವುದೇ ಇಲ್ಲ. ಪ್ರಯಾಣಿಕರು ಪರ್ಯಾಯ ಮಾರ್ಗದ ಮೂಲಕ ಫ್ಲ್ಯಾಟ್ ಫಾರಂಗೆ ಹೊಕ್ಕರೂ ಹೇಳುವವರಿಲ್ಲ, ಕೇಳುವವರಿಲ್ಲ ಎಂಬಂತಾಗಿದೆ.
ರೈಲು ನಿಲ್ದಾಣವೆಂಬುದು ಬಸ್ ತಂಗುದಾಣದಂತೆ ಯಾರು ಬೇಕಾದರೂ ಬೇಕಾಬಿಟ್ಟಿ ಬರುವಂತಿಲ್ಲ. ರೈಲು ಟಿಕೆಟ್ ಇಲ್ಲದೆ ಫ್ಲ್ಯಾಟ್ ಫಾರ್ಮ್ ಟಿಕೆಟ್ ಇಲ್ಲದೆ ಫ್ಲ್ಯಾಟ್ ಫಾರ್ಮ್ ಒಳಗೆ ಬರುವಂತಿಲ್ಲ, ಕೂರುವಂತಿಲ್ಲ. ಆದರೂ ಮಂಗಳೂರು ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆರಾಮವಾಗಿ ಎಲ್ಲರೂ ರೈಲ್ವೆ ನಿಲ್ದಾಣದೊಳಗೆ ಹೋಗಿ ಬರುತ್ತಿದ್ದಾರೆ.

ಒಳ ಬರುವ ವೇಳೆ ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲನೆ ನಡೆಸಿ, ಬ್ಯಾಗ್ ಚೆಕಿಂಗ್ ಮಾಡಬೇಕಾಗುತ್ತದೆ. ಆದರೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇದು ಯಾವುದು ಇಲ್ಲದಂತಾಗಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷಿತ ದೃಷ್ಟಿಯಿಂದ ಭದ್ರತೆ ಎಂಬುದೇ ಇಲ್ಲವಾಗಿದೆ.
ನಿಯಮಗಳ ಪ್ರಕಾರ ರೈಲ್ವೆ ಹಳಿಯ ಮೇಲೆ ಓಡಾಡುವಂತಿಲ್ಲ. ಆದರೆ ಮಂಗಳೂರು ರೈಲು ನಿಲ್ದಾಣದಲ್ಲಿ ರೈಲ್ವೆ ಟ್ರ್ಯಾಕ್‌ನಲ್ಲಿಯೇ ಇಳಿದು ಕೆಲವರು ಅತ್ತಿಂದಿತ್ತ ಓಡಾಟ ನಡೆಸುತ್ತಿದ್ದಾರೆ. ಇದು ರೈಲ್ವೆ ಪೊಲೀಸರ ಗಮನಕ್ಕೆ ಬಂದರೂ ಯಾವ ಕ್ರಮವೂ ಆಗುತ್ತಿಲ್ಲ. ರೈಲು ನಿಲ್ದಾಣದಲ್ಲಿ ದಿನನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಬರುತ್ತಾರೆ. ಇಂತಹ ಸ್ಥಳದಲ್ಲಿ ಪ್ರಯಾಣಿಕರ ಸುರಕ್ಷತೆ ಅಗತ್ಯ. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬರುತ್ತಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ: ಆರೋಪಿ ಅರೆಸ್ಟ್
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುದದ್ವಾರದಲ್ಲಿ ಬಚ್ಚಿಟ್ಟು ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ 98.68 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆರೋಪಿ ದುಬೈನಿಂದ ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಚಿನ್ನದ ಪೇಸ್ಟ್‌ನ್ನು ಕ್ಯಾಪ್ಸೂಲ್‌ಗಳಲ್ಲಿ ತುಂಬಿಸಿಟ್ಟು ಗುದದ್ವಾರದಲ್ಲಿ ಅಡಗಿಸಿ ಸಾಗಾಟ ಮಾಡಲು ಯತ್ನಿಸಿದ್ದಾನೆ. ದುಬೈನಿಂದ ಬಂದ ಪ್ರಯಾಣಿಕನ ವರ್ತನೆಯ ಮೇಲೆ ಅನುಮಾನಗೊಂಡಿದ್ದ ಕಸ್ಟಮ್ಸ್ ಅಧಿಕಾರಿಗಳು ಪ್ರಯಣಿಕನನ್ನು ವಶಕ್ಕೆ ಪಡೆದು ಶೋಧ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಬಯಲಾಗಿದೆ.












Click it and Unblock the Notifications