ದಕ್ಷಿಣ ಕನ್ನಡ; ಜಿಲ್ಲೆಯ 5 ತಾಲೂಕುಗಳಲ್ಲಿ 144 ಸೆಕ್ಷನ್ ಜಾರಿ
ಮಂಗಳೂರು, ಡಿಸೆಂಬರ್ 15; ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂಭಾಗ ನಡೆದ ಲಾಠಿಚಾರ್ಜ್ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಯಾವುದೇ ಅಹಿತಕ ಘಟನೆ ನಡೆಯದಂತೆ ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಆದೇಶ ಮಾಡಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರುತ್ತದೆ.
ಡಿಸೆಂಬರ್ 14ರ ರಾತ್ರಿ ಉಪ್ಪಿನಂಗಡಿ ಠಾಣೆಯ ಮುಂಭಾಗ ಪಿಎಫ್ಐ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಅತಿರೇಖಕ್ಕೆ ಹೋಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಚ್ ಮಾಡಿದ್ದಾರೆ. ಈ ವೇಳೆ ಹತ್ತಕ್ಕೂ ಕಾರ್ಯಕರ್ತರಿಗೆ, ಪೊಲೀಸರಿಗೆ ಗಾಯಗಳಾಗಿವೆ.
ಲಾಠಿಚಾರ್ಜ್ ವೇಳೆ ನಾಲ್ವರು ಪೊಲೀಸ್ ಅಧಿಕಾರಿ, ಸಿಬ್ಬಂದಿಗೂ ಗಾಯವಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಐ ಪ್ರಸನ್ನ ಅವರಿಗೆ ಪ್ರತಿಭಟನಾಕಾರರು ಚೂರಿ ಇರಿದ ಆರೋಪ ಕೇಳಿಬಂದಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶ್, ಮಹಿಳಾ ಎಸ್ಐ ಓಮನ ಹಾಗೂ ಓರ್ವ ಮುಖ್ಯಪೇದೆಗೂ ಗಾಯವಾಗಿದ್ದು, ಗಾಯಾಳುಗಳು ಸದ್ಯ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಹಿತಕರ ಘಟನೆ ಹಿನ್ನಲೆಯಲ್ಲಿ ಉಪ್ಪಿನಂಗಡಿ ಪೋಲೀಸ್ ಠಾಣೆಗೆ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಭೇಟಿ ನೀಡಿದ್ದಾರೆ. ಹಿರಿಯ ಪೋಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಸೇರಿದಂತೆ ಪೋಲೀಸ್ ಅಧಿಕಾರಿಗಳ ಭಾಗಿಯಾಗಿದ್ದರು.
ಲಾಠಿಚಾರ್ಚ್ ವೇಳೆ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ. ಠಾಣೆ ಮುಂದೆ ನಿಂತಿದ್ದ ಬೈಕ್, ಪೋಲೀಸ್ ಚೀಪ್‌ಗೆ ಹಾನಿಯಾಗಿದ್ದು, ಠಾಣೆ ಮುಂದೆ ಪ್ರತಿಭಟನಾಕಾರರ ಚಪ್ಪಲಿಗಳ ರಾಶಿ ಕಂಡುಬಂದಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಿಸಿಟಿವಿ ದೃಶ್ಯಾವಳಿ; ಉಪ್ಪಿನಂಗಡಿ ಪೋಲೀಸ್ ಠಾಣೆ ಬಳಿ ನಡೆದ ಲಾಠಿಚಾರ್ಚ್ ಹಿನ್ನಲೆ ಘಟನೆಯ ಸಿಸಿ ಕ್ಯಾಮಾರಾ ದೃಶ್ಯ ನೀಡಲು ಉಪ್ಪಿನಂಗಡಿ ಪಿಡಿಒ ನಿರಾಕರಿಸಿದ ಘಟನೆಯೂ ನಡೆದಿದೆ. ಉಪ್ಪಿನಂಗಡಿ ಪಂಚಾಯತ್ ಪಿಡಿಒ ಮತ್ತುಉಪ್ಪಿನಂಗಡಿ ಠಾಣಾ ಅಧಿಕಾರಿಗಳ ನಡುವೆ ವೈಮನಸ್ಸು ಇರುವ ಕಾರಣಕ್ಕೆ ಸಿಸಿಕ್ಯಾಮೆರಾ ದೃಶ್ಯಗಳನ್ನು ನೀಡಲು ನಿರಾಕರಿಸಿದ್ದಾರೆ. ಪುತ್ತೂರು ಡಿವೈಎಸ್ಪಿ ಸಂಧಾನದ ಬಳಿಕ ಸಿಸಿ ಕ್ಯಾಮಾರಾ ದೃಶ್ಯಗಳನ್ನು ನೀಡಲು ಪಿಡಿಒ ಒಪ್ಪಿಕೊಂಡ ಘಟನೆ ನಡೆದಿದೆ.
ಉಪ್ಪಿನಂಗಡಿ ಠಾಣಾ ಮುಂಭಾಗ ನಡೆದ ಲಾಠಿಚಾರ್ಚ್ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಪಿಎಫ್ಐ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್ ಪೊಲೀಸರ ಕ್ರಮದ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಪಿಎಫ್‌ಐ ಪ್ರಮುಖರ ಅಕ್ರಮ ಬಂಧನ ಖಂಡಿಸಿ ಕಾರ್ಯಕರ್ತರ ಠಾಣೆಯ ಎದುರು ಪ್ರತಿಭಟಿಸಿದ್ದರು. ರಾತ್ರಿಯೂ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಏಕಾಏಕಿ ಲಾಠಿಚಾರ್ಜ್ ನಡೆಸಿದ್ದಾರೆ. ಕಾಲಿಗೆ ಹೊಡೆಯುವ ಬದಲು ಬೇಕಾಬಿಟ್ಟಿಯಾಗಿ ತಲೆಯ ಮೇಲೆ ಲಾಠಿಯಲ್ಲಿ ಹೊಡೆದಿದ್ದಾರೆ ಎಂದು ದೂರಿದ್ದಾರೆ.
ಮುಸ್ಲಿಂ ಧರ್ಮಗುರು ಸೈಯ್ಯದ್ ಅತೂರ್ ತಂಗಲ್ ತಲೆಗೂ ಹೊಡೆದಿದ್ದಾರೆ. ಹಲವಾರು ಜನರಿಗೆ ಗಾಯವಾಗಿದ್ದು, ಕೆಲವರು ಐಸಿಯುನಲ್ಲಿದ್ದಾರೆ. ಅಂಬ್ಯುಲೆನ್ಸ್‌ಗೂ ತಡೆ ಹಾಕಿ ಪೊಲೀಸರು ಅಡ್ಡಿ ಪಡಿಸಿದ್ದಾರೆ. ಇದೀಗ ಅವರ ದುಷ್ಕೃತ್ಯ ಮರೆಮಾಚಲು ಪೊಲೀಸರ ಮೇಲೆ ಹಲ್ಲೆ ಎಂಬ ಕಥೆ ಕಟ್ಟಿದ್ದಾರೆ. ಉಪ್ಪಿನಂಗಡಿ ತಲವಾರು ಕೇಸ್ ನಲ್ಲಿ ಅಮಾಯಕರನ್ನು ಹಿಡಿದು ಸಿಲುಕಿಸಿದ್ದಾರೆ. ಇದನ್ನ ಪ್ರತಿಭಟಿಸಿದವರ ಮೇಲೆ ಅಮಾನವೀಯವಾಗಿ ಲಾಠಿಚಾರ್ಜ್ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ತಕ್ಷಣ ಈ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಬೇಕು. ಲಾಠಿಚಾರ್ಜ್ ಘಟನೆ ಖಂಡಿಸಿ ಡಿಸೆಂಬರ್ 17ರ ಶುಕ್ರವಾರ ಎಸ್ಪಿ ಕಚೇರಿ ಚಲೋ ನಡೆಸುತ್ತೇವೆ ಅಂತಾ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ. ಕೆ. ಅಶ್ರಫ್ ಮಾತನಾಡಿ, "ಉಪ್ಪಿನಂಗಡಿ ತಲವಾರು ದಾಳಿಗೂ ನಿನ್ನೆ ಬಂಧಿಸಿದವರಿಗೂ ಸಂಬಂಧವಿಲ್ಲ. ಆದರೆ ಪ್ರಕರಣದ ಆರೋಪಿಗಳನ್ನು ಕರೆದುಕೊಂಡು ಬನ್ನಿ ಅಂತ ನಮ್ಮ ಪ್ರಮುಖರನ್ನ ಬಂಧಿಸಿದ್ದಾರೆ. ನಮ್ಮ ಮುಖಂಡರು ಠಾಣೆಯ ಒಳಗೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡ್ತಿದ್ದರು. ಆದರೆ ಹೊರಗೆ ಏಕಾಏಕಿ ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ರಾತ್ರಿ ವೇಳೆ ಬೀದಿ ದೀಪಗಳನ್ನ ಆರಿಸಿ ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಬೀಸಿದ್ದಾರೆ. ಕ್ಯಾಮಾರಗಳಲ್ಲಿ ಲಾಠಿ ಬೀಸಿದ ದೃಶ್ಯಗಳು ಸೆರೆಯಾಗಬಾರದು ಅಂತ ಹೀಗೆ ಮಾಡಿದ್ದಾರೆ ಎಂದರು.
ಬಂಟ್ವಾಳ ಎಸ್ಸೈ ಪ್ರಸನ್ನರಿಗೆ ಚೂರಿ ಇರಿತ ಆಗಿದೆ ಅಂತ ಸುದ್ದಿ ಹಬ್ಬಿಸಿದ್ದಾರೆ. ಚೂರಿ ಇರಿತ ಆಗಿದ್ದರೆ ಅವರಿಗೆ ಎಲ್ಲಿ ಗಾಯ ಆಗಿದೆ ಅಂತ ತೋರಿಸಲಿ. ಯಾವ ಪೊಲೀಸ್ ಅಧಿಕಾರಿಗೂ ಗಾಯ ಆಗಿಲ್ಲ, ಆದರೆ ಕಥೆ ಕಟ್ಟುತ್ತಿದ್ದಾರೆ. ಪೊಲೀಸ್ ಠಾಣೆಯ ಸುತ್ತ ಸಿಸಿ ಕ್ಯಾಮಾರಾ ಇದೆ, ಅದರ ವಿಡಿಯೋ ಬಹಿರಂಗ ಪಡಿಸಲಿ. ಪ್ರತಿಭಟನೆ ಮಾಡುತ್ತಿದ್ದವರು ಉದ್ವಿಗ್ನತೆ ಸೃಷ್ಟಿಸಿದ್ದರೆ ಅದರ ಸಿಸಿ ಟಿವಿ ದೃಶ್ಯ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಈ ವಿಚಾರದಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮತ್ತು ಸಿಬ್ಬಂದಿಯ ತಲೆ ತಂಡವಾಗಬೇಕು. ನಮ್ಮ ಒಬ್ಬ ಧರ್ಮ ಗುರುವಿನ ತಲೆಗೆ ಹೊಡೆದಿದ್ದಾರೆ. ಇದು ಲಾಠಿಯಲ್ಲಿ ಹೊಡೆದದ್ದಲ್ಲ, ಇದು ಬೇರೆ ಆಯುಧದಿಂದ ಹೊಡೆದಿರೋದು. ಹೀಗಾಗಿ ನಾವು ಸರ್ವ ಜನರನ್ನ ಸೇರಿಸಿ ಡಿಸೆಂಬರ್ 17ರ ಶುಕ್ರವಾರ ಎಸ್ಪಿ ಕಚೇರಿ ಚಲೋ ನಡೆಸುತ್ತೇವೆ. ಎಲ್ಲರೂ ಒಟ್ಟಾಗಿ ಶುಕ್ರವಾರ ಬೃಹತ್ ಹೋರಾಟ ನಡೆಸಲಿದ್ದೇವೆ ಎಂದರು.
ಡಿಸೆಂಬರ್ 6ರಂದು ಉಪ್ಪಿನಂಗಡಿ ಯ ಹಳೆಗೇಟುನಲ್ಲಿ ನಡೆದ ಮೂವರು ಹಿಂದೂ ಕಾರ್ಯಕರ್ತರ ಮೇಲಿನ ದಾಳಿ ಪ್ರಕರಣ ದಲ್ಲಿ ಉಪ್ಪಿನಂಗಡಿಯ ಮೂವರು ಪಿಎಫ್ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸರು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಪಿಎಫ್ಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಯ ಮುಂಭಾಗ ಪ್ರತಿಭಟನೆ ಮಾಡಿದ್ದರು.












Click it and Unblock the Notifications