ಮಂಗಳೂರಿನಲ್ಲಿ ಶಾಲಾ ಆವರಣದಲ್ಲೇ ವಿದ್ಯಾರ್ಥಿಗೆ ಹಾವು ಕಡಿತ
ಮಂಗಳೂರು ಜೂನ್ 14: ಶಾಲೆಯಲ್ಲಿ ಬಾಲಕನೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ವಿದ್ಯಾರ್ಥಿ ತೀವ್ರ ಅಸ್ವಸ್ಥಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ .
ಮಂಗಳೂರು ಹೊರವಲಯದ ಗುರುಪುರ ಎಂಬಲ್ಲಿ ಈ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಗುರುಪುರ ಕೈಕಂಬದ ಕಂದಾವರದ ಪೊಂಪೈ ಚರ್ಚಿನ ಕನ್ನಡ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಆದರ್ಶ ಎಂಬಾತನಿಗೆ ನಿನ್ನೆ ಹಾವು ಕಚ್ಚಿದ್ದು, ಅಸ್ವಸ್ಥಗೊಂಡಿದ್ದ ಎಂದು ಹೇಳಲಾಗಿದೆ.
ವಿದ್ಯಾರ್ಥಿಗೆ ಹಾವು ಕಚ್ಚಿದ ವಿಷಯ ತಿಳಿದ ತಕ್ಷಣ ಶಿಕ್ಷಕರು ಬಾಲಕನನ್ನು ಗಂಜಿಮಠದ ಬಿಗ್ ಬ್ಯಾಗ್ ಬಳಿಯಲ್ಲಿರುವ ನಾಟಿ ವೈದ್ಯ ಸುರೇಶ್ ಎಂಬುವರಲ್ಲಿಗೆ ಕರೆದೊಯ್ದಿದ್ದಾರೆ. ವಿಷಕ್ಕೆ ಮದ್ದು ನೀಡಿದ ನಾಟಿ ವೈದ್ಯ ಸುರೇಶ್, ವಿದ್ಯಾರ್ಥಿ ಹಾಗು ಶಿಕ್ಷಕರಿಗೆ ಧೈರ್ಯ ತುಂಬಿ ಕಳುಹಿಸಿಕೊಟ್ಟಿದ್ದಾರೆ. ಮನೆಗೆ ತೆರಳಿದ್ದ ವಿದ್ಯಾರ್ಥಿ ಆದರ್ಶನಿಗೆ ಮಧ್ಯಾಹ್ನದ ಹೊತ್ತಿಗೆ ಕಾಲು ಊತ ಆರಂಭವಾಗಿದೆ. ನೋವು ಮತ್ತು ವಿಷವೇರುತ್ತಲೇ ಬಾಲಕ ವಾಂತಿ ಮಾಡಲಾರಂಭಿಸಿದ. ಗಾಬರಿಗೊಂಡ ತಂದೆ ತಾಯಿ ಮಗನನ್ನು ಬೆಡಗಬೆಳ್ಳೂರಿನ ಜನಾರ್ದನ ಎಂಬುವರ ಕೊಳತ್ತಮಜಲಿನ ಚಿಕಿತ್ಸಾಲಯಕ್ಕೆ ಕರೆದೊಯ್ದಿದ್ದಾರೆ.

ಬಾಲಕನಿಗೆ ಕಚ್ಚಿದ ಕನ್ನಡಿ ಹಾವನ್ನು ಶಿಕ್ಷಕರು ಹಿಡಿದು, ಡಬ್ಬದಲ್ಲಿ ಹಾಕಿ ಜನಾರ್ದನರ ಬಳಿಗೆ ಕಳುಹಿಸಿಕೊಟ್ಟಿದ್ದರು. ಹಾವಿನ ಗುರುತು ಪತ್ತೆ ಹಚ್ಚಿದ ಜನಾರ್ದನ ಅವರು, ಪರಿಣಾಮಕಾರಿ ಚಿಕಿತ್ಸೆ ನೀಡಿದರು. ರಾತ್ರಿ ಹೊತ್ತಿಗೆ ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಹೇಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಕೆರೆ ನಾಲೆಗಳು ತುಂಬಿ ಹರಿಯುತ್ತಿವೆ. ನೀರಿನ ಹರಿವಿನೊಂದಿಗೆ ವಿಷ ಜಂತುಗಳು ಕೂಡ ಹರಿದು ಬರುತ್ತಿವೆ ಎಂದು ಹೇಳಲಾಗಿದೆ.












Click it and Unblock the Notifications