• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್; ನೆರೆಪೀಡಿತ ಪ್ರದೇಶಗಳಿಗೆ ವೀರೇಂದ್ರ ಹೆಗ್ಗಡೆ ಭೇಟಿ

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಆಗಸ್ಟ್ 11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆಯಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಜನರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 6 ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ. ಪಶ್ಚಿಮ ಘಟ್ಟಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಭೋರ್ಗರೆದು ಹರಿಯುತ್ತಿದ್ದ ನೇತ್ರಾವತಿ ಭಾನುವಾರ ಕೊಂಚ ಶಾಂತವಾಗಿದೆ.

ಶನಿವಾರ ತಡ ರಾತ್ರಿಯ ವರೆಗೂ 11.7 ಮೀ. ಅಪಾಯ ಮಟ್ಟ ಮೀರಿ ಹರಿದ ನೇತ್ರಾವತಿ ನದಿಯಲ್ಲಿ ಭಾನುವಾರ ಮುಂಜಾನೆ ನೀರಿನ ಮಟ್ಟದಲ್ಲಿ ಸ್ವಲ್ಪ ಇಳಿಮುಖವಾಗಿದೆ. ಭಾನುವಾರ ಬೆಳಗ್ಗೆ ನೀರಿನ ಮಟ್ಟ 9.5 ಮೀಟರ್ ಗೆ ಇಳಿಮುಖವಾಗಿದೆ. ಕಳೆದ 2 ದಿನಗಳಿಂದ ಉಕ್ಕಿ ಹರಿಯುತ್ತಿದ್ದ ನೇತ್ರಾವತಿ ನದಿ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿ, ಬಂಟ್ವಾಳ ವಿವಿಧ ಭಾಗಗಳಲ್ಲಿ ಪ್ರವಾಹ ಉಂಟಾಗಿ ದ್ವೀಪದಂತಾಗಿತ್ತು.

In Pics: ಕರ್ನಾಟಕದಲ್ಲಿ ಮಹಾ ಮಳೆ

ಶನಿವಾರ ತಡ ರಾತ್ರಿಯಿಂದ ನೀರಿನ ಮಟ್ಟ ಇಳಿಯತೊಡಗಿದ್ದು, ಆತಂಕದಲ್ಲಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನೆರೆ ಪೀಡಿತ ಪ್ರದೇಶಗಳಾದ ಆಲಡ್ಕ, ಬೋಗೋಡಿ, ಪಾಣೆಮಂಗಳೂರು, ತಲಪಾಡಿ, ಜಕ್ರಿಬೆಟ್ಟು, ಬಡ್ಡಕಟ್ಟೆ ಇನ್ನಿತರ ಪ್ರದೇಶಗಳಲ್ಲಿ ನಿಧಾನವಾಗಿ ನೆರೆ ನೀರು ತಗ್ಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾ ಮಳೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಹೆಚ್ಚು ಹಾನಿ ಉಂಟಾಗಿದೆ ಎಂದು ಹೇಳಲಾಗಿದೆ. ಬೆಳ್ತಂಗಡಿಯ ದಿಡುಪೆ ಗ್ರಾಮ ಮಹಾಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದು, ಗ್ರಾಮಸ್ಥರು ಬೇರೆ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ. ಮತ್ತೆ 2 ದಿನ ಭಾರೀ ಮಳೆ ಸುರಿಯುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರು ಸ್ಥಳಾಂತರಗೊಂಡಿದ್ದಾರೆ.

17 ಜಿಲ್ಲೆಗಳ 80 ತಾಲೂಕು ಪ್ರವಾಹ ಪೀಡಿತ, ಸರ್ಕಾರದ ಘೋಷಣೆ

ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಎಚ್ಚರಿಕೆ ರವಾನಿಸಲಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಭೇಟಿ

ಈ ನಡುವೆ ಬೆಳ್ತಂಗಡಿಯ ನೆರೆಪೀಡಿತ ಪ್ರದೇಶಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದ್ದಾರೆ. ಬೆಳ್ತಂಗಡಿಯ ಕಿಲ್ಲೂರು, ಕಾಜೂರು, ಕೊಲ್ಲಿ ಮಿತ್ತಬಾಗಿಲು ಪ್ರದೇಶಗಳಿಗೆ ಭೇಟಿ ನೀಡಿದ ಡಾ. ಡಿ. ವೀರೇಂದ್ರ ಹೆಗ್ಗಡೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

ಭಾನುವಾರ ಮುಂಜಾನೆಯಿಂದ ಮಳೆಯ ತೀವ್ರತೆ ಕಡಿಮೆ ಆಗಿರುವುದರಿಂದ ಸಂಚಾರ ತಡೆಯಾಗಿದ್ದ ರಸ್ತೆಗಳಲ್ಲಿರುವ ಕಲ್ಲು, ಮಣ್ಣು, ಮರಮುಟ್ಟುಗಳನ್ನು ಆದ್ಯತೆಯಲ್ಲಿ ತೆರವುಗೊಳಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೆದ್ದಾರಿ, ಮುಖ್ಯ ರಸ್ತೆ ಹಾಗೂ ಗ್ರಾಮಾಂತರ ರಸ್ತೆಗಳಲ್ಲಿ ಈಗಾಗಲೇ ನಿಂತಿರುವ ನೀರು ಇಳಿಮುಖವಾಗಿದೆ. ವಾಹನ ಸಂಚಾರ ಸುಗಮಗೊಳಿಸಲು, ತ್ಯಾಜ್ಯ ತೆರವುಗೊಳಿಸಲು ಅಗತ್ಯ ಕಾರ್ಮಿಕರು ಮತ್ತು ಜೆಸಿಬಿಗಳನ್ನು ಬಳಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಹಾನಿಗೊಂಡಿರುವ ಮನೆಗಳಿಗೆ ನಿಯಮಾನುಸಾರ ಕೂಡಲೇ ಪರಿಹಾರ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ರಾಜ್ಯ ಸರಕಾರದಿಂದ ಸಂತ್ರಸ್ತರಿಗೆ ವಿತರಿಸಲು ಜಿಲ್ಲೆಗೆ 2000 ಆಹಾರ ಕಿಟ್ ಗಳು ಬಂದಿದ್ದು, ಪ್ರತೀ ಕಿಟ್ ನಲ್ಲಿ 10 ಕೆ.ಜಿ. ಅಕ್ಕಿ, ತಲಾ 1 ಕೆ.ಜಿ. ತೊಗರಿ ಬೇಳೆ, ಉಪ್ಪು, ಸಕ್ಕರೆ ಹಾಗೂ ಎಣ್ಣೆ ಇರಲಿದೆ. ತಹಶೀಲ್ದಾರ್ ಗಳು ಈ ಕಿಟ್ ಗಳನ್ನು ಪಡೆದು, ಸಂತ್ರಸ್ತರಿಗೆ ಭಾನುವಾರವೇ ವಿತರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

English summary
Red alert announced in Dakshina Kannada district. But rain has decreased. Dr. D. Veerendra Heggade visits rain hit areas of Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X