ಬಿಜೆಪಿಯ 'ಮಂಗಳೂರು ಚಲೋ' ಕಾರ್ಯಕ್ರಮ ಸಂಪೂರ್ಣ ವರದಿ
ಮಂಗಳೂರು, ಸೆಪ್ಟೆಂಬರ್ 7: ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ, ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಬಿಜೆಪಿ ಹಮ್ಮಿಕೊಂಡಿದ್ದ 'ಮಂಗಳೂರು ಚಲೋ' ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯು ಸಂಪೂರ್ಣವಾಗಿ ಹತ್ತಿಕ್ಕಿದೆ.
In Pics : ಕಾಂಗ್ರೆಸ್ ವಿರುದ್ಧ ಬಿಜೆಪಿಯ 'ಮಂಗಳೂರು ಚಲೋ'
ಇಂದು ಬೆಳಗ್ಗೆ ಸರಿಯಾಗಿ 11 ಗಂಟೆಗೆ ನಗರದ ಜ್ಯೋತಿ ವೃತ್ತದ ಬಳಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಸೇರಿದ ಬಿಜೆಪಿ ನಾಯಕರು ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಬೈಕಿನಲ್ಲಿ ತೆರಳಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆಯೊಡಿದ್ದರು.
ಈ ವೇಳೆ ಮುಂಚೂಣಿಯಲ್ಲಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ಬಂಧಿಸಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕರೆದೊಯ್ದರು.
ನಂತರ ಆರ್. ಅಶೋಕ್, ಸಂಸದ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಹಸ್ರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಲು ಮುಂದಾದಾಗ, ಪೊಲೀಸರು ಮುಖಂಡರ ಸಹಿತ ಸಹಸ್ರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಲ್ಲು ತೂರಾಟ ನಡೆದಿದ್ದು ಕಾರ್ಯಕರ್ತರೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ನಗರ ಪ್ರವೇಶಕ್ಕೆ ತಡೆಯಾಗಿದ್ದ ಪೊಲೀಸರು
ಇಂದು ನಸುಕಿನ ಜಾವದಿಂದಲೇ ಪೊಲೀಸರು ರಸ್ತೆ ತಡೆ ನಡೆಸಿ ಬೈಕ್ ಸವಾರರ ತಪಾಸಣೆ ಆರಂಭಿಸಿದ್ದರು. ಕೊಲ್ಲೂರು, ಕೊಟ್ಟಾರ, ಕೆಪಿಟಿ, ಪಡೀಲ್, ನಂತೂರು, ಪಂಪ್ವೆಲ್ ಬಳಿ ರಸ್ತೆಗೆ ಬ್ಯಾರಿಕೇಡ್ಗಳನ್ನು ಹಾಕುವ ಮೂಲಕ ಬೈಕ್ ಸವಾರರನ್ನು ನಗರದೊಳಗೆ ಪ್ರವೇಶಿಸದಂತೆ ತಡೆದಿದ್ದರು.

ಪೊಲೀಸರ ಮೇಲೆ ಹಲ್ಲೆಯತ್ನ
ನಿರ್ಬಂಧಗಳ ನಡುವೆಯೂ 'ಮಂಗಳೂರು ಸಮಾವೇಶ' ಮಾಡಿದ ಬಿಜೆಪಿಗರು ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ಕೂಡಾ ವರದಿಯಾಗಿದೆ. 'ಮಂಗಳೂರು ಚಲೋ' ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಜಟಾಪಟಿ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಜ್ಯೋತಿ ವೃತ್ತದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು ಅಲ್ಲಿಂದ ಬೈಕ್ ಜಾಥಾ ಹೊರಟಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೆ, ಸ್ಥಳೀಯ ಚಾನೆಲ್ ವರದಿಗಾರನ ಕ್ಯಾಮೆರಾ ಕಸಿದು ಹಲ್ಲೆ ಮಾಡಿದ್ದಾರೆ.

ಶಾಪ ಹಾಕುತ್ತಿದ್ದ ಸಾರ್ವಜನಿಕರು
ಜ್ಯೋತಿ ವೃತ್ತ ನಗರದ ಪ್ರಮುಖ ಭಾಗವಾಗಿರುವ ಕಾರಣ ಇಂದು ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾದ 'ಮಂಗಳೂರು ಚಲೋ' ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯನ್ನು ಉಂಟು ಮಾಡಿತು.
ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದ ಪರಿಣಾಮ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಜ್ಯೋತಿ ವೃತ್ತದಿಂದ ಸಾಗಬೇಕಿದ್ದ ಬಸ್ಸುಗಳು ಗಂಟೆಗಟ್ಟಲೆ ಅಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಯಿತು. ಇದರಿಂದ ಸೋತು ಹೋದ ಪ್ರಯಾಣಿಕರು ಶಾಪ ಹಾಕುತ್ತಿದ್ದರು.

ನಮಗೇಕೆ ಹಿಂಸೆ
'ಇವರ ರಾಜಕೀಯ ಕಿತ್ತಾಟದಲ್ಲಿ ನಮಗೇಕೆ ಹಿಂಸೆ ನೀಡುತ್ತಾರೆ' ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದರಿಂದ ಶಾಲಾ ಕಾಲೇಜುಗಳಿಗೆ ಹೋಗಬೇಕಾಗಿದ್ದ ಕೆಲವು ವಿದ್ಯಾರ್ಥಿಗಳು ಇಂದು ಹೋಗಲಾರದ ಪರಿಸ್ಥಿತಿಯೂ ಸಂಭವಿಸಿತು.

ಜಾಥಾಕ್ಕೆ ಅನುಮತಿ ಕೊಟ್ಟಿದ್ದರೆ ಏನಾಗುತ್ತಿತ್ತು?
ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಒಂದು ವೇಳೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುತ್ತಿರಲಿಲ್ಲ. ಆದರೆ ರಾಜ್ಯ ಸರ್ಕಾರ ಅನುಮತಿ ಕೊಡದೇ ಇದ್ದ ಕಾರಣ ಇಷ್ಟೆಲ್ಲ ಪಡಬಾರದ ಪಾಡು ಸಾರ್ವಜನಿಕರು ಪಡೆಯಬೇಕಾಗಿ ಬಂತು. ಇದು ಸಾರ್ವಜನಿಕ ಸತೀಶ್ ಅವರ ಅಭಿಪ್ರಾಯ.

ಸ್ವಚ್ಛ ಭಾರತ ಕನಸು ಮರೆಯದ ಬಿಜೆಪಿಗರು
ಒಂದೆಡೆ ಪಾದಯಾತ್ರೆ ಮುಂದೆ ಮುಂದೆ ತೆರಳುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ತೆರಳಿದ ದಾರಿಯಲ್ಲಿ ಕಸ ಕಡ್ಡಿ ಹೆಕ್ಕುವ ಮೂಲಕ ಸ್ವಚ್ಛತೆಗೆ ಒತ್ತು ನೀಡುತ್ತಿದ್ದದ್ದು ಕಂಡುಬಂತು.
ಸಾಮಾನ್ಯವಾಗಿ ಪ್ರತಿಯೊಂದು ಪ್ರತಿಭಟನೆ ನಡೆದ ಬಳಿಕ ಕಸಕಡ್ಡಿಗಳಿಂದ ನಗರ ತುಂಬಿ ಹೋಗುತ್ತಿತ್ತು. ಈ ಬಗ್ಗೆ ಪ್ರತಿಭಟನೆಯ ಆಯೋಜಕರೂ ಗಮನ ಹರಿಸುತ್ತಿರಲಿಲ್ಲ. ಆದರೆ, ಇಂದು ನಡೆದ 'ಮಂಗಳೂರು ಚಲೋ' ಪ್ರತಿಭಟನೆಯಲ್ಲಿ ಸ್ವಚ್ಛತೆಗೆ ಒತ್ತು ಸಿಕ್ಕಿದ್ದು ನಗರವಾಸಿಗಳಿಂದ ಮೆಚ್ಚುಗೆಗೆ ಪಾತ್ರವಾಯಿತು.

ಕಾಂಗ್ರೆಸ್ ಮುಖಂಡರಿಂದ ಟೀಕೆ
ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಬೈಕ್ ಜಾಥಾ ಮತ್ತು ಮಂಗಳೂರು ಚಲೋ ಕೊನೆಗೂ ವಿಫಲವಾಗಿದೆ. ಮೂರು ದಿನಗಳ ಹಿಂದೆಯೇ ಪೊಲೀಸ್ ಇಲಾಖೆ ಬೈಕ್ ಜಾಥಾಗೆ ಅವಕಾಶ ನಿರಾಕರಿಸಿತ್ತು. ಜಾಥಾ ಆರಂಭಿಸಿದ್ದ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಬಿಸಿ ಮುಟ್ಟಿಸಿತ್ತು.
ಆದರೂ, 'ಮಂಗಳೂರು ಚಲೋ' ನಡೆಸಿಯೇ ಸಿದ್ಧ ಎಂದು ಬಿಜೆಪಿ ನಾಯಕರು ಸರ್ಕಾರಕ್ಕೆ ಪ್ರತಿ ಸವಾಲು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವ್ಯಾಪಕ ಭದ್ರತೆ ಮತ್ತು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇದೀಗ ಮಂಗಳೂರು ಚಲೋ ವಿಫಲವಾಗಿರುವುದರಿಂದ ಕಾಂಗ್ರೆಸ್ ನಾಯಕರು ಬಿಜೆಪಿಗರನ್ನು ಟೀಕಿಸುತ್ತಿದ್ದಾರೆ.












Click it and Unblock the Notifications