Mangaluru: ಅಂಗನವಾಡಿ ಕೇಂದ್ರದಲ್ಲಿ ಆಮ್ಲೆಟ್ ಮಾಡಿ ತಿಂದ ಕಿಡಿಗೇಡಿಗಳು
ಮಂಗಳೂರು, ಮಾರ್ಚ್ 19: ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಮಕ್ಕಳಿಗಾಗಿ ಮೀಸಲಿಟ್ಟ ಮೊಟ್ಟೆಗಳನ್ನು ತಿಂದು ತೇಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಲಿಕಟ್ಟೆಯ ಸಮೀಪದ ಅಂಗನವಾಡಿಯಲ್ಲಿ ನಡೆದಿದೆ.
ಇಂದು (ಮಾರ್ಚ್ 19) ಬೆಳಗ್ಗೆ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಕೇಂದ್ರಕ್ಕೆ ಬಂದಾಗ ಕೇಂದ್ರದ ಬಾಗಿಲ ಬೀಗ ಒಡೆದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಬಳಿಕ ಒಳಗೆ ಹೋಗಿ ಪರಿಶೀಲಿಸಿದಾಗ ಅಡುಗೆ ಕೋಣೆಯಲ್ಲಿ ಪುಟಾಣಿಗಳಿಗೆಂದು ದಾಸ್ತಾನಿರಿಸಲಾಗಿದ್ದ ಮೊಟ್ಟೆಗಳು ಒಡೆದಿದ್ದ ಸ್ಥಿತಿಯಲ್ಲಿದ್ದವು. ಪಕ್ಕದಲ್ಲಿರುವ ಗ್ಯಾಸ್ ಸ್ಟವ್‌ನ ಬಾಣಲೆಯಲ್ಲಿ ಆಮ್ಲೇಟ್ ತುಂಡುಗಳು ಕಂಡು ಬಂದಿದೆ ಎನ್ನಲಾಗಿದೆ.

ನಿನ್ನೆ (ಮಾರ್ಚ್ 18)ರ ರಾತ್ರಿ ಪುತ್ತೂರಿನ ನೆಲ್ಲಿಕಟ್ಟೆಯ ಸಮೀಪದ ಅಂಗನವಾಡಿ ಕೇಂದ್ರದ ಬೀಗ ಒಡೆದು ನುಗ್ಗಿದ ಕಿಡಿಗೇಡಿಗಳು ಅಡುಗೆ ಕೋಣೆಯಲ್ಲಿದ್ದ ಮೊಟ್ಟೆಗಳನ್ನು ಆಮ್ಲೇಟ್ ಮಾಡಿ ತಿಂದು. ಅಂಗನವಾಡಿ ಕೇಂದ್ರವನ್ನು ಕೊಳಕು ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ ಪುತ್ತೂರು ಪೊಲೀಸರು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಿಬ್ಬಂದಿ, ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ವಾರದ ಹಿಂದೆಯಷ್ಟೆ ಪಕ್ಕದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಆರೋಗ್ಯ ಕೇಂದ್ರದ ವಸ್ತುಗಳನ್ನು ನಾಶಪಡಿಸಿದ್ದಾರೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದು, ಕಿಡಿಗೇಡಿಗಳ ಪುಂಡಾಟಕ್ಕೆ ಕಡಿವಾಣ ಹಾಕುವಂತೆ ಪುತ್ತೂರು ಪೊಲೀಸರ ಬಳಿ ಸ್ಥಳೀಯರು ಮನವಿ ಮಾಡಿದ್ದಾರೆ.












Click it and Unblock the Notifications