ಗೂಡಿನಬಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮಂಗಳೂರು, ಸೆಪ್ಟೆಂಬರ್. 21: ಬಂಟ್ವಾಳದ ಗೂಡಿನಬಳಿಯಲ್ಲಿ ನಡೆದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದ ವಿರುದ್ಧ ಜನರು ಬೀದಿಗಿಳಿದಿದ್ದಾರೆ. ಅತ್ಯಾಚಾರ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಗೂಡಿನಬಳಿಯಲ್ಲಿ ಜನರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ನೀಡುವಂತೆ ಒತ್ತಾಯಿಸಿ ಗೂಡಿನಬಳಿಯ ಜಮಾಅತ್ ಆಡಳಿತ ಕಮಿಟಿ, ವಿವಿಧ ಸಂಘಟನೆ ಹಾಗೂ ನಾಗರಿಕರು ಕಪ್ಪುಪಟ್ಟಿ ಧರಿಸಿ ಬಿ.ಸಿ.ರೋಡ್ ವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಈ ಅತ್ಯಾಚಾರ ಪ್ರಕರಣವನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಕಾನೂನು ರಕ್ಷಣೆ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಪ್ರಕರಣದಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿರುವ ಇನ್ನಿತರ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಒತ್ತಾಯಿಸಿದರು.

ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳಿಗೂ ಶಿಕ್ಷೆ ವಿಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದು, ಈ ಬಗ್ಗೆ ಬಂಟ್ವಾಳದ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
4ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಟ್ವಾಳ ಠಾಣೆಯ ಪೊಲೀಸರು ನಿನ್ನೆ ಗುರುವಾರ (ಸೆ.20) ಗೂಡಿನಬಳಿ ನಿವಾಸಿಗಳಾದ ಗುಜರಿ ವ್ಯಾಪಾರಿ ಶೇಖಬ್ಬ (65), ಅಂಬಾರಿ ಯಾನೆ ರಝಾಕ್ (35) ಹಾಗೂ ನವಾಝ್ (22) ಎಂಬುವವರನ್ನು ಬಂಧಿಸಿದ್ದರು.

ಬಂಟ್ವಾಳದ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಇತ್ತೀಚೆಗೆ ಗೂಡಿನಬಳಿ ಇರುವ ತನ್ನ ಅಜ್ಜಿ ಮನೆಗೆ ಬಂದಿದ್ದ ಸಂದರ್ಭದಲ್ಲಿ ಬಂಧಿತ ಆರೋಪಿಗಳು ಬಾಲಕಿಯ ಮೇಲೆ ಆತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications