ಹಿರಿಯ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ನಿಧನ: ಶಿಷ್ಯರ ಮೆಚ್ಚಿನ ಗುರುವಿಗೆ ಸಿಎಂ ಸಂತಾಪ

ಮಂಗಳೂರು, ಜನವರಿ 06: ಹಿರಿಯ ಸಾಹಿತಿ, ವಿದ್ವಾಂಸ, ಯಕ್ಷಗಾನ, ಜಾನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಇಂದು(ಜನವರಿ 06)ರಂದು ವಿಧಿವಶರಾಗಿದ್ದಾರೆ. 88 ವರ್ಷವಾಗಿದ್ದ ಅಮೃತ ಸೋಮೇಶ್ವರ ಅವರು ವಯೋಸಹಜವಾಗಿ ತಮ್ಮ ಸ್ವಗೃಹದಲ್ಲಿ ಬೆಳಗ್ಗೆ ನಿಧನರಾಗಿದ್ದಾರೆ.

ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿ ನೂರಕ್ಕೂ ಹೆಚ್ಚು ಕೃತಿಯನ್ನು ಅಮೃತ ಸೋಮೇಶ್ವರ ಅವರು ರಚಿಸಿದ್ದರು.

Pro. Amrutha Someshwara No More

ಅಮೃತ ಸೋಮೇಶ್ವರ ಸಾಹಿತ್ಯ ಕೃಷಿಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ‌ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಗೌರವಶ್ರೀ ಪ್ರಶಸ್ತಿ ಪಡೆದಿದ್ದರು. ಇನ್ನು ಅಮೃತ ಸೋಮೇಶ್ವರ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಮಂಗಳೂರಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ 1935ರ ಸೆಪ್ಟೆಂಬರ್ 27ರಂದು ಜನಿಸಿದ ಅಮೃತ ಸೋಮೇಶ್ವರ ಅವರು, ಕೋಟೆಕಾರಿನ ಸ್ಟೆಲ್ಲ ಮೇರಿಸ್ ಕಾನ್ವೆಂಟ್​​ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಅನಂತರ ಆನಂದಾಶ್ರಮದಲ್ಲಿ ಪ್ರೌಢಶಾಲೆ ವಿಧ್ಯಾಭ್ಯಾಸ ಮಾಡಿದರು. ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಅಭ್ಯಾಸ ಮಾಡಿದರು. ಖಾಸಗಿಯಾಗಿ ಓದಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ. ಪದವಿ ಪಡೆದರು. ಆರಂಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಅನಂತರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷ ಕೆಲಸ ಮಾಡಿದರು. 1967ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯವನ್ನು ನಿರ್ವಹಿಸಿ 1993ರಲ್ಲಿ ನಿವೃತ್ತರಾಗಿದ್ದರು.

ಅಮೃತ ಸೋಮೇಶ್ವರರು ಧರ್ಮ ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಜೀವನ್, ಮೊಮ್ಮಕ್ಕಳಾದ ಸೃಜನ್ ಸೋಮೇಶ್ವರ ಹಾಗೂ ಸೃಷ್ಟಿ ಸೋಮೇಶ್ವರ ಅವರನ್ನ ಅಗಲಿದ್ದಾರೆ.

ಅಮೃತ ಸೋಮೇಶ್ವರ ಅವರ ನಿಧನ ಗಣ್ಯರ ಸಂತಾಪ

ಅಮೃತ ಸೋಮೇಶ್ವರ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಪ್ರಖ್ಯಾತ ಜಾನಪದ ವಿದ್ವಾಂಸ, ಸಂಸ್ಕೃತಿ ಚಿಂತಕ ಮತ್ತು ಶಿಷ್ಯರ ಮೆಚ್ಚಿನ ಗುರು ಪ್ರೊ.ಅಮೃತ ಸೋಮೇಶ್ವರ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಅಮೃತ ಸೋಮೇಶ್ವರ ಅವರ ನಿಧನಕ್ಕೆ ಸಂಸದ ನಳೀನ್‌ ಕುಮಾರ್‌ ಕಟೀಲ್ ಸಂತಾಪ ಸೂಚಿಸಿದ್ದಾರೆ. ಖ್ಯಾತ ಸಾಹಿತಿ ಪ್ರೊ. ಅಮೃತ ಸೋಮೇಶ್ವರ ಅವರ ನಿಧನವು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ತುಳು ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದ, ಕಾವ್ಯ, ನಾಟಕ, ಯಕ್ಷಗಾನ ಹಾಗೂ ಜಾನಪದ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದ ಶ್ರೀಯುತರು ತಮ್ಮ ಅನನ್ಯ ಕೊಡುಗೆ ನೀಡಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+