ಮೇ 15ರ ಬಳಿಕ ಕಾಂಗ್ರೆಸ್ ತೆರೆದಿದ್ದ ಮಾಫಿಯಾ ಅಂಗಡಿಗಳು ಬಂದ್: ಮೋದಿ
Recommended Video

ಮಂಗಳೂರು, ಮೇ 05: "ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಚುನಾವಣೆಯಲ್ಲಿ ಸೋಲುವ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಬಳಿಕ ರಾಜ್ಯದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಲಿದೆ ಎಂದು ಗುಲ್ಲಬ್ಬಿಸುತ್ತಿದ್ದಾರೆ. ಆದರೆ ಮೇ 15 ರ ಬಳಿಕ ಕರ್ನಾಟಕದಲ್ಲಿ ಬಿಜೆಪಿಯ ಪೂರ್ಣ ಬಹುಮತದ ಸರಕಾರ ಅಸ್ಥಿತ್ವಕ್ಕೆ ಬರಲಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಮಾವೇಶ ವನ್ನು ಉದ್ಧೇಶಿಸಿ ತುಳುವಿನಲ್ಲಿ ಮಾತು ಆರಂಭಿಸಿದ ಮೋದಿ, ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮಿಸಿದರು. ತುಳು ನಾಡಿನ ಕಾರ್ಣಿಕ ವೀರ ಪುರುಷರಾದ ಕೋಟಿ- ಚೆನ್ನಯ, ವೀರ ರಾಣಿ ಅಬ್ಬಕ್ಕ, ಬ್ರಹ್ಮಶ್ರೀ ನಾರಾಯಣಗುರು ಅವರ ಹೆಸರನ್ನು ಉಲ್ಲೇಖಿಸಿ ನಮಿಸಿದರು.
In Pics : ಕರ್ನಾಟಕದಾದ್ಯಂತ ಬಿಜೆಪಿಯಿಂದ ಭರ್ಜರಿ ಪ್ರಚಾರ

ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ
ಮಂಗಳೂರಿನ ಕೇಂದ್ರ ಮೈದಾನದಲ್ಲಿ ನೆರೆದ ಜನಸಾಗರ ಕಂಡು ಭಾವುಕರಾದ ಮೋದಿ "ಈ ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ. ಮಂಗಳೂರಿಗೆ ಅಭಿವೃದ್ದಿ ಎಂಬ ಕೊಡುಗೆ ನೀಡಿ ನಿಮ್ಮ ಪ್ರೀತಿಗೆ ಅರ್ಥ ನೀಡುತ್ತೇನೆ ಎಂದು ಹೇಳಿದರು. ಈ ಹಿಂದೆ ಲಕ್ಷದ್ವೀಪಕ್ಕೆ ತೆರಳುವ ಸಂದರ್ಭದಲ್ಲಿ ರಾತ್ರಿ ಒಂದು ಗಂಟೆಗೆ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದೀರಿ. ಅದನ್ನು ಎಂದೂ ಮರೆಯಲಾರೆ. ಇಲ್ಲಿಯ ಸಜ್ಜಿಗೆ-ಬಜಿಲ್, ನೀರು ದೋಸೆ, ಮೂಡೆಯ ರುಚಿ ಮರೆಯಲು ಸಾಧ್ಯವಿಲ್ಲ," ಎಂದು ಹೇಳಿದರು.
ನಂತರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಆರಂಭಿಸಿದ ಮೋದಿ, ಕಾಂಗ್ರೆಸ್ಸಿಗರು ಚುನಾವಣೆಯಲ್ಲಿ ಸೋತ ಸಂದರ್ಭದಲ್ಲಿ ಇವಿಎಂ ಲೋಪ ಎಂಬ ಆರೋಪ ಮಾಡುತ್ತಾರೆ. ಆದರೆ ಗೆಲುವು ಸಾಧಿಸುತ್ತಿದ್ದಂತೆ ಅದೇ ಇವಿಎಂ ಯಂತ್ರಗಳು ಕಾಂಗ್ರೆಸ್ ನಾಯಕರಿಗೆ ಸರಿಯಾಗಿ ಬಿಡುತ್ತದೆ ಈಗ ಕರ್ನಾಟಕದಲ್ಲಿ ಸೋಲುವ ಭೀತಿ ಕಾಂಗ್ರೆಸ್ಸಿಗರಿಗೆ ಆರಂಭವಾಗಿದ್ದು ಈಗ ಮತ್ತೇ ಇವಿಎಂ ಲೋಪದ ಆರೋಪ ಜಪಿಸಲು ತೊಡಗಿದ್ದಾರೆ ಎಂದು ವ್ಯಂಗ್ಯ ವಾಡಿದರು. ಇವಿಎಂ ಎಂದರೆ ನನಗೆ ಎನರ್ಜಿ, ವಾಲ್ಯು ಎಡಿಷನ್, ಮೋಟಿವೇಶನ್ ಎಂದು ಮೋದಿ ಹೇಳಿದರು.

ಕಾಂಗ್ರೆಸಿಗರಿಗೆ ಮೋದಿ ವಿರೋಧಿಸುವುದೇ ಅಜೆಂಡಾ
ಕಾಂಗ್ರೆಸಿಗರಿಗೆ ಮೋದಿಯನ್ನು ವಿರೋಧಿಸುವುದು ಬಿಟ್ಟರೆ ಬೇರೆ ಅಜೆಂಡಾ ಇಲ್ಲ. ದೇಶದಲ್ಲಿ ಇದ್ದರೂ, ಇತರ ರಾಜ್ಯಗಳ ಪ್ರವಾಸದಲ್ಲಿದ್ದರೂ, ವಿದೇಶ ಪ್ರವಾಸದಲ್ಲಿದ್ದರೂ ಇವರು ವಿರೋಧಿಸುವುದನ್ನು ಮಾತ್ರ ಬಿಡಲ್ಲ. ಕಾಂಗ್ರೆಸ್ ಒಂದು ಕುಟುಂಬದ ಪರವಾಗಿ ಕೆಲಸ ಮಾಡುತ್ತದೆ. ಆದರೆ ನನಗೆ ದೇಶದ 125 ಕೋಟಿ ಜನರೇ ನನ್ನ ಕುಟುಂಬ; ನನ್ನ ಪರಿವಾರ . ನನ್ನ ಶ್ರಮ ಏನಿದ್ದರೂ ಈ ದೇಶ ಉನ್ನತಿಗಾಗಿ , ಜನಸಾಮಾನ್ಯರಿಗಾಗಿ ಎಂದು ಹೇಳಿದರು.
"ಒಂದು ಕುಟುಂಬಕ್ಕೋಸ್ಕರ ಕಾಂಗ್ರೆಸ್ ದೇಶದ ದಿಗ್ಗಜ ನಾಯಕರಾದ ಸರ್ದಾರ್ ವಲ್ಲಭಭಾಯ್ ಪಟೇಲ, ಸುಭಾಶ್ ಚಂದ್ರ ಬೋಸ್, ನಿಜಲಿಂಗಪ್ಪ, ದೇವರಾಜ್ ಅರಸ್ , ವೀರೇಂದ್ರ ಪಾಟೀಲ್ ರನ್ನು ಮೂಲೆ ಗುಂಪಾಗಿಸಿತು ಎಂದು ಅವರು ಕಿಡಿಕಾರಿದರು. ಚಿಕ್ಕಮಗಳೂರಿನಲ್ಲಿ ಶ್ರೀಮತಿ ಇಂದಿರಾ ಗಾಂಧಿ ಅವರು ಗೆಲ್ಲಲು ದೇವರಾಜ ಅರಸು ಕಾರಣ. ದೇವರಾಜ್ ಅರಸು ಅವರು ಮನಸ್ಸು ಮಾಡದಿದ್ದರೆ ಇಂದಿರಾ ಗಾಂಧಿ ಲೋಕಸಭೆಗೆ ತಲುಪುತ್ತಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ದೇವರಾಜ್ ಅರಸು ಅವರನ್ನೇ ತುಳಿಯಲಾಯಿತು. ರಾಜಕೀಯ ಮರು ಜನ್ಮ ನೀಡಿದ ಕರ್ನಾಟಕಕ್ಕೆ ಕಾಂಗ್ರೆಸ್ ಕೊಡುಗೆ ಏನು?" ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸಿಗೆ ಒಂದರ ಹಿಂದೊಂದು ಸೋಲು
ಕಾಂಗ್ರೆಸ್ ಒಂದರ ಹಿಂದೆ ಒಂದು ಸೋಲು ಕಾಣುತ್ತಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಧೂಳೀಪಟವಾಗಿದೆ. ಈಗ ಕರ್ನಾಟಕದ ಸರದಿ. ಇಲ್ಲೂ ಕಾಂಗ್ರೆಸ್ ದಯನೀಯ ವೈಫಲ್ಯ ಕಾಣಲಿದೆ ಎಂದು ಭವಿಷ್ಯ ನರೇಂದ್ರ ಮೋದಿ ಭವಿಷ್ಯ ನುಡಿದರು.
ಕಾಂಗ್ರೆಸ್ಸಿಗರು ದೇಶದ ಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಸೇನೆ ಮೇಲೆ ಸಂಶಯ ವ್ಯಕ್ತಪಡಿಸುತ್ತಾರೆ. ನೋಟ್ ಬಂದಿ ವೇಳೆ ರಿಸರ್ವ್ ಬ್ಯಾಂಕ್ ಮೇಲೆ ಸಂಶಯ ವ್ಯಕ್ತಪಡಿಸುತ್ತಾರೆ . ಚುನಾವಣೆಯಲ್ಲಿ ಸೋತಾಗ ಇವಿಎಂ, ಚುನಾವಣಾ ಆಯೋಗದ ಮೇಲೂ ಸಂಶಯ ವ್ಯಕ್ತಪಡಿಸುತ್ತಾರೆ ಎಂದು ಅವರು ಲೇವಡಿ ಮಾಡಿದರು.

ಮಾಫಿಯಾ ಅಂಗಡಿಗಳು ಬಂದು
ಸ್ವಚ್ಛ ಭಾರತ್ ಅಭಿಯಾನ , ಶೌಚಾಲಯ ನಿರ್ಮಾಣ ಅಭಿಯಾನದ ಕುರಿತು ಈ ಕಾಂಗ್ರೆಸ್ಸಿಗರು ನನಗೆ ತಮಾಷೆ ಮಾಡಿದರು. ಅವರಿಗೆ ನಾನು ಏನು ಮಾಡಿದರೂ ಆಗಲ್ಲ. ಯೋಗ ಮಾಡಿದರೂ ಅವರಿಗೆ ಕಷ್ಟವಾಗಿದೆ. ನೋಟ್ ಬಂದಿ ಇಫೆಕ್ಟ್ ನಿಂದ ಕಾಂಗ್ರೆಸ್ ನಾಯಕರ ಇನ್ನೂ ಹೊರಗೆ ಬಂದಿಲ್ಲ. ಇನ್ನೂ ಅವರ ನೋಟುಗಳು ಹೊರಗೆ ಬರುತ್ತಿದೆ ಎಂದು ಮೋದಿ ವ್ಯಂಗ್ಯವಾಡಿದರು.
ಮೇ 15ರ ಬಳಿಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಉತ್ತಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮರಳು ಮಾಫಿಯಾ, ಶಿಕ್ಷಣ ಮಾಫಿಯಾ ಸೇರಿದಂತೆ ಕಾಂಗ್ರೆಸ್ ಆಡಳಿತದಲ್ಲಿ ತೆರೆದು ಕೊಂಡಿರುವ ಎಲ್ಲ ಅಂಗಡಿಗಳು ಬಂದ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಪರಾಧಕ್ಕೂ ಕೋಮು ಬಣ್ಣ
ಕಾಂಗ್ರೆಸ್ ಆಡಳಿತದಲ್ಲಿ ಅಪರಾಧಕ್ಕೂ ಕೋಮು ಬಣ್ಣ ನೀಡಲಾಗಿದೆ. ರಾಜ್ಯದಲ್ಲಿ24 ಹಿಂದೂ ಕಾರ್ಯಕರ್ತರನ್ನು ಬಲಿ ಪಡೆಯಲಾಗಿದೆ. ಮುಖ್ಯಮಂತ್ರಿಯವರ ಈ ಪಾಪಗಳಿಗೆ ಜನ ತೀರ್ಪು ನೀಡಲಿದ್ದಾರೆ . ಮುಂದೆ ಅಸ್ತಿತ್ವಕ್ಕೆ ಬರಲಿರುವ ಬಿಜೆಪಿ ಸರಕಾರ ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಕೊಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.












Click it and Unblock the Notifications