1256 ರೌಡಿಗಳ ರೌಡಿಶೀಟ್ ಕ್ಲೋಸ್ ಮಾಡಿದ ಮಂಗಳೂರು ಪೊಲೀಸರು!
ಮಂಗಳೂರು, ಡಿಸೆಂಬರ್ 17: ಅವರೆಲ್ಲಾ ರೌಡಿಶೀಟರ್ ಗಳು, ಯಾವಾಗಲೂ ಪೊಲೀಸರ ಎದುರು ಭಯದಿಂದ ಕೈಕಟ್ಟಿ ನಿಲ್ಲುತ್ತಿದ್ದ ರೌಡಿಶೀಟರ್‌ಗಳು ಈ ಬಾರಿ ಮಾತ್ರ ಪೊಲೀಸರ ಎದುರು ಖುಷಿಯಿಂದ ಕುಳಿತಿದ್ದರು. ಖಾಕಿ ಲಾಠಿ ಏಟು ತಿಂದವರು, ಖಾಕಿಗಳ ವಿಶೇಷ ಆಹ್ವಾನದ ಮೇರೆಗೆ ಅತಿಥಿಯಾಗಿ ಬಂದಿದ್ದರು.
ಮಂಗಳೂರು ನಗರ ಪೊಲೀಸರ ವಿಶೇಷ ಕಾರ್ಯಕ್ರಮ ಎಲ್ಲರ ಮೆಚ್ಚುಗೆಯನ್ನು ಪಡೆದಿತ್ತು. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಹಣೆಪಟ್ಟಿ ಹೊತ್ತಿದ್ದ 1256 ಮಂದಿಯನ್ನು ರೌಡಿಶೀಟರ್ ಲೀಸ್ಟ್‌ನಿಂದ ಕೈಬಿಟ್ಟು ಸಮಾಜದಲ್ಲಿ ಸತ್‌ಪ್ರಜೆಗಳಾಗಿ ಬಾಳಲು ಅವಕಾಶ ಮಾಡಿಕೊಡಲಾಗಿತ್ತು. ಪೊಲೀಸ್ ಇಲಾಖೆಯ ಈ ನಿರ್ಣಯ ರೌಡಿ ಶೀಟರ್‌ಗಳ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.
ಒಮ್ಮೆ ಪೊಲೀಸ್ ರೆಕಾರ್ಡ್‌ನಲ್ಲಿ ರೌಡಿಶೀಟರ್ ಅಂತಾ ಪಟ್ಟಿಯಲ್ಲಿ ಸೇರಿಬಿಟ್ಟರೆ ಸಾಕು ಆತನಿಗೆ ಚಿತ್ರಹಿಂಸೆ ಮಾನಸಿಕ ಹಿಂಸೆ ತಪ್ಪಿದ್ದಲ್ಲ. ಹೊಸ ಇನ್ಸ್‌ಪೆಕ್ಟರ್ ಬಂದ್ರೆ ಸ್ಟೇಷನ್‌ಗೆ ಕಡ್ಡಾಯವಾಗಿ ಹೋಗಲೇಬೇಕು. ಚುನಾವಣೆ ಆದರೆ ಗಡಿಪಾರು ಆಗಬೇಕು. ಹಬ್ಬ ಬಂದರೆ ಸ್ಟೇಷನ್‌ಗೆ ಹೋಗಿ ಸಹಿ ಹಾಕಬೇಕು. ಯಾವುದಾದರೂ ಕ್ರೈಂ ಆದರೆ ಪೊಲೀಸರ ಕಣ್ಣು ರೌಡಿಶೀಟರ್‌ಗಳ ಮೇಲಿರುತ್ತದೆ. ಇಂತಹ ನರಕಯಾತನೆಯಲ್ಲಿ ಬದುಕುತ್ತಿದ್ದ ರೌಡಿಶೀಟರ್‌ಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಒಂದು ಅವಕಾಶ ನೀಡಿದ್ದಾರೆ.

ಸನ್ನಡತೆಯುಳ್ಳ, ಕಳೆದ ಹಲವು ವರ್ಷಗಳಿಂದ ಕ್ರಿಮಿನಲ್ ಕೆಲಸದಲ್ಲಿ ಭಾಗಿಯಾಗದ ಮತ್ತು ವಯಸ್ಸಾದ ರೌಡಿಶೀಟರ್‌ಗಳಿಗೆ ಜೀವನದಲ್ಲಿ ಉತ್ತಮ ರೀತಿಯಲ್ಲಿ ಬದುಕುವ ಅವಕಾಶವನ್ನು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ನೀಡಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 3263 ಜನ ರೌಡಿಶೀಟರ್‌ಗಳಿದ್ದಾರೆ.
ಅದರಲ್ಲಿ 80 ಜನರು ವಯಸ್ಸಾದ ರೌಡಿಶೀಟರ್‌ಳಾದರೆ, 663 ಜನ ರೌಡಿಶೀಟರ್‌ಗಳ ಪ್ರಕರಣ ಮುಗಿದಿದೆ. ಕ್ರೈಂನಲ್ಲಿ ಭಾಗಿಯಾಗದ 513 ರೌಡಿಗಳ ಪಟ್ಟಿ ಮಾಡಿ, ಒಟ್ಟು 1256 ಜನ ರೌಡಿಗಳ ರೌಡಿಶೀಟ್ ಅನ್ನು ಕ್ಲೋಸ್ ಮಾಡಲಾಗಿದೆ. ಅಲ್ಲದೇ ಹೊಸದಾಗಿ 400ಕ್ಕೂ ಹೆಚ್ಚು ಜನರ ಮೇಲೆ ರೌಡಿಶೀಟ್ ತೆರೆಯಲಾಗಿದೆ.

ಮಂಗಳೂರಿನ ಟಿ.ಎನ್. ರಮಣ ಪೈ ಹಾಲ್‌ನಲ್ಲಿ ರೌಡಿಶೀಟ್ ಕ್ಲೋಸ್ ಆದ ರೌಡಿಗಳಿಗೆ ಪರಿವರ್ತನಾ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೂರು ಧರ್ಮಗಳ ಧರ್ಮಗುರುಗಳನ್ನು ಕರೆಸಿ ಪರಿವರ್ತನೆಯಾಗುವಂತಹ ಸಂದೇಶವನ್ನು ಸನ್ನಡತೆಯಿರುವ ರೌಡಿಶೀಟರ್‌ಗಳಿಗೆ ನೀಡಿಲಾಗಿದೆ. ಧರ್ಮಗುರುಗಳು ಸಮಾಜದಲ್ಲಿ ಇನ್ನು ಮುಂದೆ ಸನ್ನಡತೆಯಿಂದ ಬದುಕುವಂತೆ ಸಂದೇಶ ನೀಡಿದ್ದರು. ಇನ್ನು ಮುಂದೆ ಪೊಲೀಸ್ ಇನ್‌ಫರ್ಮರ್‌ಗಳಾಗಿ ಕೆಲಸ ಮಾಡಿ ಎಂದು ಕೂಡ ಹೇಳಿದರು.
ಇನ್ನು ಇದರಲ್ಲಿ ಭಾಗಿಯಾದ ರೌಡಿಶೀಟರ್‌ಗಳಿಗೂ ಸ್ಟೇಜ್ ಮೇಲೆ ತಮ್ಮ ಅನುಭವ ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು. ಇನ್ನು ಹಲವರು ಸುಖಾಸುಮ್ಮನೆ ರೌಡಿಶೀಟ್‌ಗೆ ಒಳಗಾಗಿದ್ದಾಗಿ ಹೇಳಿಕೊಂಡರು. "ಇನ್ನು ಇದೊಂದು ಅವಕಾಶ ಸಿಕ್ಕಿದ್ದು, ತುಂಬಾ ಸಂತೋಷ. ಇನ್ನು ಮುಂದೆ ಯಾವುದೇ ಗಲಾಟೆ ಗಲಭೆಗಳಿಗೆ ಹೋಗದೇ ಉತ್ತಮ ರೀತಿಯಲ್ಲಿ ಜೀವನ ಸಾಗಿಸುತ್ತೇವೆ," ಅಂತಾ ಮಾಜಿ ರೌಡಿ ಶೀಟರ್ ಶಿವರಾಮ್ ಶೆಟ್ಟಿ ಹೇಳಿದ್ದಾರೆ.

ಇನ್ನು ಮಾಜಿ ರೌಡಿಶೀಟರ್ ಖಲೀಲ್ ರೆಹಮತ್ ಮಾತನಾಡಿ, "ಜೀವನದಲ್ಲಾದ ಆಕಸ್ಮಿಕ ಘಟನೆಯಿಂದ ರೌಡಿಯಾಗಬೇಕಾಯಿತು. ಆದರೆ ಮತ್ತೆ ಜವಾಬ್ದಾರಿ ಹೆಗಲೇರಿದಾಗ ಇದು ಯಾವುದೂ ಬೇಡ ಅಂತಾ ನಿರ್ಧರಿಸಿದೆ. ಆದರೂ ರೌಡಿ ಶೀಟರ್ ಹಣೆಪಟ್ಟಿ ಇದ್ದಿದ್ದರಿಂದ ಯಾವಾಗಲೂ ಪೊಲೀಸ್ ಠಾಣೆಗೆ ಹೋಗುವುದರಿಂದ ನನಗೂ ಮನೆಯವರಿಗೂ ಕಿರಿಕಿರಿಯಾಗುತ್ತಿತ್ತು. ಆದರೆ ಈಗ ಕಮೀಷನರ್ ಎನ್. ಶಶಿಕುಮಾರ್ ಅವಕಾಶ ನೀಡಿದ್ದಾರೆ, ಅವರಿಗೆ ಧನ್ಯವಾದಗಳು," ಅಂತಾ ಹೇಳಿದ್ದಾರೆ.
ಆದರೆ ಕಾರ್ಯಕ್ರಮಕ್ಕೆ ಆಗಮಿಸಿದ ಕೆಲ ರೌಡಿಗಳು ಮಾತ್ರ ಕಾರ್ಯಕ್ರಮಕ್ಕೆ ರೌಡಿಗಳ ಗೆಟಪ್‌ನಲ್ಲೇ ಬಂದಿದ್ದು ಮಾತ್ರ ಆಶ್ಚರ್ಯವಾಗಿತ್ತು. ರೌಡಿಶೀಟ್ ಕ್ಲೋಸ್ ಆಗಿದ್ದರಿಂದ ಡೀಸೆಂಟ್ ಲುಕ್‌ನಲ್ಲಿ ರೌಡಿಶೀಟರ್‌ಗಳು ಬರುತ್ತಾರೆ ಅಂದುಕೊಂಡರೆ ಕೆಲವರು ಇನ್ನು ರೌಡಿ ಗೆಟಪ್‌ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅದೇನೇ ಇದ್ದರೂ ಸಿಕ್ಕ ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಇನ್ನಾದರೂ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications