ಬಿಜೆಪಿ ರಾಜ್ಯಾಧ್ಯಕ್ಷರ ಬ್ಯಾನರ್‌ಗೆ ಚಪ್ಪಲಿ ಹಾರ: ಚರ್ಮ ಕಿತ್ತು ಬರುವಂತೆ ಥಳಿಸಿದ ಪೊಲೀಸರು?
ಮಂಗಳೂರು, ಮೇ 17: ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಅವರ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಅವರಿಗೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ ಆರೋಪ ಕೇಳಿಬಂದಿದೆ.
ಬಂಧಿತ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಬೆನ್ನು, ಸೊಂಟದ ಹಿಂಭಾಗಕ್ಕೆ ಬಾಸುಂಡೆ ಬರುವ ರೀತಿ ಥಳಿಸಿದ್ದು, ಮಾರಣಾಂತಿಕವಾಗಿ ಗಾಯಗೊಂಡ ಕಾರ್ಯಕರ್ತರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿ ನಾಯಕರ ಸೂಚನೆಯಂತೆ ಕಾರ್ಯಕರ್ತರಿಗೆ ಪೊಲೀಸರು ಥಳಿಸಿದ್ದು, ನಳಿನ್ ಕುಮಾರ್ ಆಪ್ತ, ಪುತ್ತೂರಿನ ಬಿಜೆಪಿ ನಾಯಕರ ಒತ್ತಡಕ್ಕೆ ಬಿದ್ದು ಥಳಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಪೊಲೀಸರ ಕಿರುಕುಳದಿಂದ ಕಾರ್ಯಕರ್ತರನ್ನು ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಬಿಡುಗಡೆ ಗೊಳಿಸಿದ್ದು, ಪೊಲೀಸರ ಕಿರುಕುಳದಿಂದ ಕೆಲವರು ಎದ್ದು ನಡೆಯಲಾಗದ ಸ್ಥಿತಿಯಲ್ಲಿದ್ದರೆ, ಮೂವರು ಕಾರ್ಯಕರ್ತರ ಸ್ಥಿತಿ ಗಂಭೀರವಾಗಿದೆ.
ಮೇ 15ರಂದು ಪುತ್ತೂರು ತಾಲೂಕಿನ ಕಸ್ಬಾ ಗ್ರಾಮದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಎದುರು ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ನಳಿನ್ ಕುಮಾರ್ ಕಟೀಲು ಹಾಗೂ ಡಿ.ವಿ ಸದಾನಂದ ಗೌಡ ಅವರ ಫೋಟೋ ಹಾಕಿ, ಅವಹೇಳನಕಾರಿ ಬರಹದ ಬ್ಯಾನರ್ ಪ್ರದರ್ಶಿಸಿ ಅದಕ್ಕೆ ಚಪ್ಪಲಿ ಹಾರವನ್ನು ಹಾಕಿರುವ ಬಗ್ಗೆ ಪುತ್ತೂರು ನಗರ ಸಭೆಯ ಪೌರಾಯುಕ್ತ ಮಧು ಎಸ್ ಮನೋಹರ್ ಪೊಲೀಸರಿಗೆ ದೂರು ನೀಡಿದ್ದರು.
ಸರ್ಕಾರಿ ಆಸ್ತಿ-ಪಾಸ್ತಿಯನ್ನು ಮತ್ತು ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿರುವುದಾಗಿ ದೂರನ್ನು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಮೊದಲು ನರಿಮೊಗರು ನಿವಾಸಿ ವಿಶ್ವನಾಥ್ ಮತ್ತು ಮಾಧವ ಎನ್ನುವವರನ್ನು ಬಂಧಿಸಿದ್ದರು. ಬಳಿಕ ಅಭಿ ಅಲಿಯಾಸ್ ಅವಿನಾಶ್, ಶಿವರಾಮ್, ಚೈತ್ರೇಶ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ಈ ವೇಳೆ ಕಾರ್ಯಕರ್ತರಿಗೆ ಮಾರಣಾಂತಿಕ ವಾಗಿ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಬಂಧಿತ 9 ಮಂದಿಯಲ್ಲಿ ನಾಲ್ಕು ಜನ ಬಿಜೆಪಿ ಅಭ್ಯರ್ಥಿ ಪರವಾಗಿಯೇ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು ಎಂದು ಹೇಳಲಾಗಿದೆ.
ಕಾರ್ಯಕರ್ತರಿಗೆ ಮಾರಣಾಂತಿಕವಾಗಿ ಥಳಿಸಿದ ಬೆನ್ನಲ್ಲೇ ಪುತ್ತೂರಿನಲ್ಲಿ ಮತ್ತೆ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಆಕ್ರೋಶ ಕಟ್ಟೆಯೊಡೆದಿದೆ. ಇತ್ತೀಚಿಗೆ ಬ್ಯಾನರ್ ಅಳವಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಕೂಗಿದ್ದು ವಿವಾದ ಸೃಷ್ಟಿಯಾಗಿತ್ತು.












Click it and Unblock the Notifications