ಮಂಗಳೂರು; ವಾಹನ ತಪಾಸಣೆ ವೇಳೆ ಯುವಕ ಸಾವು, ಚೆಕ್ ಪೋಸ್ಟ್ ಧ್ವಂಸ
ಮಂಗಳೂರು, ಜೂನ್ 29; ಪೊಲೀಸರ ವಾಹನ ತಪಾಸಣೆ ವೇಳೆ ಗೂಡ್ಸ್ ಗಾಡಿ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿಯ ಆತೂರಿನಲ್ಲಿ ನಡೆದಿದೆ.
ಅಪಘಾತದ ಬಳಿಕ ಆಕ್ರೋಶಗೊಂಡ ಸ್ಥಳೀಯರು ಪೊಲೀಸ್ ಚೆಕ್ ಪಾಯಿಂಟ್ ಧ್ವಂಸ ಮಾಡಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನಲೆಯಲ್ಲಿ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ.
ಅಘಫಾತದಲ್ಲಿ ಮೃತಪಟ್ಟವರನ್ನು ಆತೂರು ಬೈಲು ನಿವಾಸಿ ಹಾರಿಸ್ (33) ಎಂದು ಗುರುತಿಸಲಾಗಿದೆ. ತಾಯಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಆತೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಡೆದಿದ್ದರು.

ಈ ವೇಳೆ ದಾಖಲಾತಿ ತೆಗೆದುಕೊಂಡು ರಸ್ತೆ ದಾಟುವ ವೇಳೆ ಟಾಟಾ ಏಸ್ ಗೂಡ್ಸ್ ವಾಹನ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications