ಮಂಗಳೂರಿನಲ್ಲಿ ಕರ್ತವ್ಯಕ್ಕೆ ಅಡ್ಡಿ, ಪೊಲೀಸರಿಗೆ ನಿಂದನೆ: ಎಸ್‌ಡಿಪಿಐ ಕಾರ್ಯಕರ್ತರಿಗಾಗಿ ತಲಾಶ್!
ಮಂಗಳೂರು, ಮೇ 30: ಕರ್ತವ್ಯದಲ್ಲಿ ಪೊಲೀಸರಿಗೆ ಹೀನಾಯವಾಗಿ ನಿಂದಿಸಿದ ಎಸ್‌ಡಿಪಿಐ ಕಾರ್ಯಕರ್ತರಿಗೆ ಮಂಗಳೂರು ಪೊಲೀಸರು ತಲಾಶ್ ಆರಂಭಿಸಿದ್ದಾರೆ. ಮೇ 27 ರಂದು ನಗರ ಹೊರವಲಯದ ಕಣ್ಣೂರಿನಲ್ಲಿ ನಡೆದಿದ್ದ ಎಸ್.ಡಿ.ಪಿ.ಐ ಸಮಾವೇಶಕ್ಕೆ ಬೈಕ್ ಮತ್ತು ಕಾರ್ ನಲ್ಲಿ ಬಂದ ಸವಾರ, ಸಹ ಸವಾರರು ಸೇರಿ ಒಟ್ಟು ಆರು ಮಂದಿ ಕಾರ್ಯಕರ್ತರು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಆರೋಪಿಗಳ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಐ.ಪಿ.ಸಿ 143, 353, 504, 149 ಅಡಿ ಪ್ರಕರಣ ದಾಖಲಾಗಿದೆ..
ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ಎ.ಎಸ್.ಐ ಚಂದ್ರಶೇಖರ್ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು,ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಸಂಗನ ಗೌಡ ಮೈಮೇಲೆ ಹಾಯಿಸುವಂತೆ ಬೈಕ್ ಸವಾರಿ ಮಾಡಲಾಗಿದೆ. ಕರ್ತವ್ಯ ನಿರತ ಪೊಲೀಸರಿಗೆ ಅಡೆತಡೆಯುಂಟು ಮಾಡಿ ನಿಂದನೆ ಮಾಡಿರುವ ಬಗ್ಗೆ ದೂರಲಾಗಿದೆ.ಸದ್ಯ ಅಪರಿಚಿತ 5 ಮಂದಿ ಮತ್ತು ಇತರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮೇ 27 ರಂದು ಕಣ್ಣೂರು ಗ್ರಾಮದ ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ ಮೈದಾನದಲ್ಲಿ ಎಸ್.ಡಿ.ಪಿ.ಐ ಪಕ್ಷವು ಆಯೋಜಿಸಿದ ಜನಾಧಿಕಾರ ಕಾರ್ಯಕ್ರಮದ ಬಂದೋಬಸ್ತ್ ಗಾಗಿ ಪೊಲೀಸರು ಕೊಡೆಕ್ಕಲ್ ಕಣ್ಣೂರು ಬ್ಯಾರಿಕೆಡ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತರಾಗಿದ್ದರು. ಈ ವೇಳೆ ಪಡೀಲ್ ಕಡೆಯಿಂದ ಬಂದ ಕೆ.ಟಿ.ಎಂ ಬೈಕ್ ನ ನವಾರ ಹಾಗೂ ಸಹ ಸವಾರ, ಸ್ಕೂಟರ್ ನ ಸವಾರ ಹಾಗೂ ಸಹಸವಾರ ಮತ್ತು ಕಾರ್ ನಲ್ಲಿದ್ದ ಸವಾರ ಹಾಗೂ ಇತರರು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ.

ಪೊಲೀಸ್ ಇಲಾಖೆಯನ್ನು ಉದ್ದೇಶಿಸಿ ಬ್ಯಾರಿ ಭಾಷೆಯಲ್ಲಿ, ''ಪೋಡಾ ಪುಲ್ಲೆ ಪೊಲೀಸೆ". "ನಾಯಿಂಡೆ ಮೋನೆ ಪೊಲೀಸೆ" ಎಂದು ನಿಂದಿಸಿದ್ದಾರೆ. ನಿಂದನೆಯ ವಿಡಿಯೋ ವನ್ನು ಸ್ವತಃ ಕಾರ್‌ನಲ್ಲಿದ್ದ ಎಸ್ ಡಿ ಪಿ ಐ ಕಾರ್ಯಕರ್ತರೇ ಮಾಡಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರೋಪಿಗಳಿಗಾಗಿ ಪೊಲೀಸರು ಶೋಧ
ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.. ಇನ್ನು ಜನಾಧಿಕಾರ ಸಮಾವೇಶದಲ್ಲಿ ಮಳಲಿಯಲ್ಲಿ ನಡೆದ ಮಸೀದಿ ವರ್ಸಸ್ ಮಂದಿರ ವಿವಾದದ ತಾಂಬೂಲ ಪ್ರಶ್ನೆ ಮತ್ತೆ ಚರ್ಚೆಗೆ ಕಾರಣವಾಗಿದೆ. ಎಸ್.ಡಿ.ಪಿ.ಐ ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದು ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು ಎಂದು ಬಹಿರಂಗವಾಗಿ ಹೇಳಿದೆ.

ಮಂಗಳೂರಿನ ಮಳಲಿ ಮಸೀದಿ ವರ್ಸಸ್ ಮಂದಿರ ವಿವಾದದಲ್ಲಿ ನಡೆದ ತಾಂಬೂಲ ಪ್ರಶ್ನೆ ಕಾರ್ಯಕ್ರಮ ಹಲವು ಆಯಾಮ ಪಡೆದುಕೊಳ್ಲುತ್ತಿದೆ. ಎಸ್.ಡಿ.ಪಿ.ಐ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಈ ವಿಚಾರದಲ್ಲಿ ವಿವದಾತ್ಮಕ ಭಾಷಣ ಮಾಡಿದ್ದಾರೆ. ಮಂಗಳೂರು ನಗರ ಹೊರವಲಯದ ಕಣ್ಣೂರಿನಲ್ಲಿ ನಡೆದ ಎಸ್.ಡಿ.ಪಿ.ಐ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಪ್ರಚೋಧನಕಾರಿ ಮಾತನಾಡಿದ್ದಾರೆ. ಮಸೀದಿ ಬಿಟ್ಟುಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ, ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ. ಹೀಗಾಗಿ ಮಳಲಿ ಮಸೀದಿಯ ಒಂದು ಹಿಡಿ ಮರಳನ್ನು ಸಹ ಕೊಡಲಾರೆವು ಎಂದು ಹೇಳಿದ್ದಾರೆ. ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು, ಪೂಜಾ ಸ್ಥಳ ಕಾಯ್ದೆ 1991 ಪ್ರಕಾರ ಮೂರು ವರ್ಷ ಜೈಲಿಗೆ ಹಾಕಬೇಕು. ಈ ಆಕ್ಟ್ ಅನ್ನು ಪೊಲೀಸರು ಓದಿಲ್ವೇ ಎಂದು ಅಬ್ದುಲ್ ಮಜೀದ್ ಪೊಲೀಸರನ್ನೆ ಪ್ರಶ್ನಿಸಿದ್ದಾರೆ.
ಅಬ್ದುಲ್ ಮಜೀದ್ ಹೇಳಿಕೆಗೆ ಸಾಕಷ್ಟು ಖಂಡನೆ
ಅಬ್ದುಲ್ ಮಜೀದ್ ಹೇಳಿಕೆಗೆ ಸಾಕಷ್ಟು ಖಂಡನೆ ವ್ಯಕ್ತವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಈ ವಿಚಾರದ ಕುರಿತಂತೆ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮೈಸೂರಿನಲ್ಲಿ ಮಾತನಾಡಿದ್ದು, ಗಲಭೆ ಪ್ರಚೋದನೆಗಾಗಿ ಕೆರಳಿಸುವ ಹೇಳಿಕೆ ಎಸ್.ಡಿ.ಪಿ.ಐ ನೀಡಿದೆ. ಒಂದು ಹಿಡಿ ಮರಳು ಕೊಡಲ್ಲ ಅಂತಾರೆ ಅದೇನೂ ನಿಮ್ಮ ಅಪ್ಪನದಾ ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ. ಇದು ನಮ್ಮ ದೇಶ. 30 ಸಾವಿರ ದೇವಸ್ಥಾನ ವಾಪಾಸ್ ಪಡೆಯುವ ಶಪಥ ಮಾಡುತ್ತೇವೆ. ಉದ್ದಟತನ ಸೊಕ್ಕಿನ ಮಾತು ಇನ್ನು ಮೇಲೆ ನಡೆಯುವುದಿಲ್ಲ, ಸಂವಿಧಾನದ ಆಧಾರದ ಮೇಲೆ ಪಡೆಯುತ್ತೇವೆ. ತಾಂಬೂಲ ಪ್ರಶ್ನೆ ಹೋಮ ಹವನ ಎಲ್ಲವೂ ಸಾಕಷ್ಟು ಶಕ್ತಿಯುತವಾಗಿವೆ, ವೈಜ್ಞಾನಿಕವಾಗಿದೆ. ಇದನ್ನು ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಶಾಸ್ತ್ರಗಳು ಅಷ್ಟು ಸುಲಭವಾಗಿಲ್ಲ. ಸಾಧಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸೀಳಿ ಹಾಕುತ್ತೇವೆ ಎಂದು ಮುತಾಲಿಕ್ ಕಿಡಿಕಾರಿದ್ದಾರೆ.

ಮಳಲಿ ಮಸೀದಿ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಈವರೆಗೂ ಸ್ಥಳೀಯ ಮುಸ್ಲಿಂ ವ್ಯಕ್ತಿಗಳು ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಆದ್ರೆ ಎಸ್.ಡಿ.ಪಿ.ಐ ಮಾತ್ರ ಈ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಂತೆ ಕಂಡು ಬರುತ್ತಿದೆ. ಒಟ್ಟಿನಲ್ಲಿ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆಯನ್ನು ಯಾರೇ ನೀಡಿದ್ರು ಅಂತವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications