ಮಂಗಳೂರು ಗಲಭೆಗೆ ಮೊದಲೇ ನಡೆದಿತ್ತಾ ಪ್ಲಾನ್..? ಸಿಸಿಟಿವಿಯಲ್ಲಿ ಸೆರೆ
Recommended Video
ಮಂಗಳೂರು, ಡಿಸೆಂಬರ್ 24: ಮಂಗಳೂರಲ್ಲಿ ಪೌರತ್ವ ವಿರೋಧಿ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಲು ಮೊದಲೇ ಪ್ರತಿಭಟನಾಕಾರರು ಸಂಚು ರೂಪಿಸಿದ್ದರೇ ಎಂಬ ಸಂಶಯ ಹುಟ್ಟಿಕೊಂಡಿದೆ.
ಗಲಭೆ ಶುರುವಾಗುವುದಕ್ಕೂ ಮುಂಚೆ ಆಟೋದಲ್ಲಿ ಕಲ್ಲುಗಳನ್ನು ತಂದಿಟ್ಟುಕೊಂಡಿದ್ದರು ಎಂಬುದಕ್ಕೆ ಸಿಸಿಟಿವಿ ದೃಶ್ಯಾವಳಿ ಸಾಕ್ಷಿಯಾಗಿದೆ. ಮಂಗಳೂರಲ್ಲಿ ನಡೆದ ಗಲಭೆಯಲ್ಲಿ ಇಬ್ಬರು ಗೋಲಿಬಾರ್ ಗೆ ಬಲಿಯಾಗಿದ್ದರು, ಹಲವು ಪೊಲೀಸರು ಗಾಯಗೊಂಡಿದ್ದರು.
ಸಿಎಎ, ಎನ್ಆರ್ಸಿ ವಿರೋಧದ ಹೆಸರಿನಲ್ಲಿ ಗಲಭೆ ನಡೆಸಲು ಪಾತಕಿಗಳು ಸಜ್ಜಾಗಿದ್ದರು ಎಂಬುದು ಜಗಜ್ಜಾಹೀರಾಗಿದೆ. ಗಲಭೆ ಮೊದಲು ಮುಖಕ್ಕೆ ಮಾಸ್ಕ್ ಧರಿಸಿ ಸಿಸಿಟಿವಿ ಧ್ವಂಸ ಮಾಡಿದ್ದಾರೆ.

ಮಂಗಳೂರು ಬೆಂಕಿ ಹತ್ತಿ ಉರಿಯಲು ಕೆಲವು ಕಿಡಿಗೇಡಿಗಳು ಮೊದಲೇ ಹೊಂಚು ಹಾಕಿ ಸಂಚು ರೂಪಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಗೂಡ್ಸ್ ಆಟೋದಲ್ಲಿ ಗೋಣಿ ಚೀಲದಲ್ಲಿ ಕಲ್ಲುಗಳನ್ನು ತಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಲವು ಗಲಭೆಕೋರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಕಲ್ಲು ತೂರುವ ಯಾವುದೇ ಸಾಕ್ಷ್ಯ ಲಭಿಸಬಾರದೆಂದು ಹತ್ತಿರವಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ.

ಒಂದು ಯುವಕರ ಗುಂಪು ಪ್ರತಿಭಟನೆ ವೇಳೆ ಆಟೋದಲ್ಲಿ ಕಲ್ಲು ತಂದು ಹಾಕಿದರೆ, ಇನ್ನೊಂದು ಗುಂಪು ಸಿಸಿಟಿವಿಗಳನ್ನು ಧ್ವಂಸಗೊಳಿಸಿದ್ದಾರೆ. ಇದರಿಂದಾಗಿಯೇ ಪೊಲೀಸರು ಕಠಿಣ ಕ್ರಮ ತೆಗೆದುಕೊಂಡಿದ್ದಾರೆ.

ಕಲ್ಲು ತೂರಾಟ ನಡೆದಿಲ್ಲವೆಂದು ಪ್ರತಿಪಕ್ಷಗಳ ಅನೇಕ ನಾಯಕರು ಹೇಳಿದ್ದರು. ಇದೀಗ ಮಂಗಳೂರು ಪೊಲೀಸರು ಕಲ್ಲು ತೂರಾಟ ನಡೆದಿರುವುದಕ್ಕೆ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಗೊಳಿಸಿದ್ದಾರೆ.












Click it and Unblock the Notifications