ಮುಂಬೈನಲ್ಲಿ ಮಂಗಳೂರಿನ ಹುಲಿಕುಣಿತ ಆಯೋಜನೆಗೆ ಪ್ಲಾನ್: ಯಾವಾಗ ಮತ್ತು ಬಹುಮಾನಗಳ ಮೊತ್ತ, ಭಾಗಿಯಾಗಲಿರುವವರ ಮಾಹಿತಿ
ಮಂಗಳೂರು, ಅಕ್ಟೋಬರ್, 21: ಹುಲಿವೇಷಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರೆಯಬೇಕು. ಜೊತೆಜೊತೆಗೆ ಈ ಕಲೆಯನ್ನು ಶಾಶ್ವತವಾಗಿ ಉಳಿಸಿ ಮುಂದಿನ ಪೀಳಿಗೆಗೆ ರವಾನಿಸಬೇಕು ಎಂಬ ದೃಷ್ಟಿಯಿಂದ ಮಂಗಳೂರಿನ ಪಿಲಿನಲಿಕೆ ಪ್ರತಿಷ್ಠಾನದಿಂದ ಮುಂಬೈನಲ್ಲಿ ಪ್ರೋ ಕಬ್ಬಡ್ಡಿ ಮಾದರಿಯಲ್ಲಿ ಪಿಲಿನಲಿಕೆ ಕಾರ್ಯಕ್ರಮವನ್ನು ಆಯೋಜಿಸುವ ಚಿಂತನೆಯಿದೆ. ಪ್ರಖ್ಯಾತ ಸಿನಿಮಾ ತಾರೆಯರು ಮಾಲೀಕತ್ವದ ತಂಡ ಒಂದೊಂದು ತಂಡವನ್ನು ಮುನ್ನಡೆಸಿ 8-9 ತಂಡಗಳು ಬೃಹತ್ ವೇದಿಕೆಯಲ್ಲಿ ಭರ್ಜರಿಯಾಗಿ ಪ್ರದರ್ಶಿಸುವ ಯೋಜನೆಯಿದೆ ಎಂದು ಪಿಲಿನಲಿಕೆ ಪ್ರತಿಷ್ಠಾನದ ಮಿಥುನ್ ರೈ ಹೇಳಿದರು.
ಸುನೀಲ್ ಶೆಟ್ಟಿ, ರೋಹಿತ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಸಲ್ಮಾನ್ ಖಾನ್, ರಿಷಭ್ ಶೆಟ್ಟಿ ಸೇರಿದಂತೆ ಪ್ರಖ್ಯಾತ ನಟ, ನಟಿ, ನಿರ್ದೇಶಕರು ಈಗಾಗಲೇ ತಮ್ಮ ಮಾಲಕತ್ವದಲ್ಲಿ ಹುಲಿವೇಷ ತಂಡ ರಚಿಸಲು ಸಮ್ಮತಿ ಸೂಚಿಸಿದ್ದಾರೆ. ಈ ಬಗ್ಗೆ ನಟ ಸುನೀಲ್ ಶೆಟ್ಟಿ ಅವರು ತಮ್ಮ ಗಮನ ಸೆಳೆದಿದ್ದು, 2024ರ ಮಾರ್ಚ್-ಏಪ್ರಿಲ್ ವೇಳೆ ಈ ಪ್ರದರ್ಶನ ಆಯೋಜಿಸುವ ಚಿಂತನೆಯಿದೆ.

ಪಿಲಿನಲಿಕೆ ಪ್ರತಿಷ್ಠಾನವು ಕಳೆದ ಏಳು ವರ್ಷಗಳಿಂದ ಮಂಗಳೂರಿನಲ್ಲಿ ಪಿಲಿನಲಿಕೆ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ಬಾರಿ ಎಂಟನೇ ಪಿಲಿ ನಲಿಕೆ ಕಾರ್ಯಕ್ರಮ ಅಕ್ಟೋಬರ್ 23ರಂದು ಉರ್ವ ಮೈದಾನದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 10 ತಂಡಗಳು ಇಲ್ಲಿ ಹುಲಿವೇಷ ಕುಣಿತ ಪ್ರದರ್ಶಿಸಲಿದೆ. ಒಂದೊಂದು ತಂಡವು 20 ನಿಮಿಷಗಳ ಕಾಲ ಪ್ರದರ್ಶನ ನೀಡಲಿದೆ.
ಹುಲಿವೇಷ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಥಮ ಬಹುಮಾನ ಪಡೆಯುವ ತಂಡಕ್ಕೆ 5 ಲಕ್ಷ ರೂ., ಎರಡನೇ ಬಹುಮಾನ 3 ಲಕ್ಷ ರೂ., ತೃತೀಯ ಬಹುಮಾನ 2ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಅದೇ ರೀತಿ ವೈಯುಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಬಣ್ಣಗಾರಿಕೆ, ಕರಿ ಹುಲಿ, ಮರಿ ಹುಲಿ, ತಾಸೆ, ಮುಡಿ ಹಾರಿಸುವುದು, ವೈವಿಧ್ಯಮಯ ನರ್ತನ ಸೇರಿ ಭಾಗವಹಿಸುವ ಎಲ್ಲಾ ತಂಡಗಳಿಗೆ ತಲಾ 50 ಸಾವಿರ ರೂಪಾಯಿ ಬಹುಮಾನವಿದೆ.

ಈ ಬಾರಿ 10ಸಾವಿರ ಜನ ಕುಳಿತುಕೊಂಡು ಪ್ರದರ್ಶನ ವೀಕ್ಷಿಸಲು ಜರ್ಮನ್ ಪೆಂಡಾಲ್ ಹಾಕಲಾಗುತ್ತದೆ. ಸುನಿಲ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಶೆಟ್ಟಿ, ಹರ್ಭಜನ್ ಸಿಂಗ್, ಜಾಂಟಿ ರೋಡ್ಸ್ ಸೇರಿದಂತೆ ಸಿನಿಮಾ, ಕ್ರೀಡಾ ತಾರೆಯರು ಪಿಲಿನಲಿಕೆಯ ಮೆರುಗು ಹೆಚ್ಚಿಸಲಿದ್ದಾರೆ. ಕಳೆದ ಬಾರಿ ಪಿಲಿನಲಿಕೆಯಲ್ಲಿ ಮೊದಲ ಬಹುಮಾನ ಗಳಿಸಿದ ಗೋರಕ್ಷನಾಥ ತಂಡಕ್ಕೆ ಆ ಬಳಿಕ ದೇಶಾದ್ಯಂತ 42 ದೊಡ್ಡದೊಡ್ಡ ವೇದಿಕೆಗಳಲ್ಲಿ ಪ್ರದರ್ಶನಕ್ಕೆ ಅವಕಾಶ ದೊರಕಿದೆ. ಇದು ನಮ್ಮ ಪಿಲಿನಲಿಕೆ ಪ್ರತಿಷ್ಠಾನದ ಹೆಮ್ಮೆ ಎಂದು ಮಿಥುನ್ ರೈ ಹೇಳಿದರು.












Click it and Unblock the Notifications