ಮಂಗಳೂರಿನಲ್ಲಿ ಪಿಎಫ್ಐ ಶಕ್ತಿಪ್ರದರ್ಶನ; ಪೊಲೀಸರ ಮೇಲೆ ಆಕ್ರೋಶ
ಮಂಗಳೂರು, ಡಿಸೆಂಬರ್ 17; ಪಿಎಫ್ಐ ಕಾರ್ಯಕರ್ತರ ಮೇಲೆ ಉಪ್ಪಿನಂಗಡಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಖಂಡಿಸಿ ಮಂಗಳೂರಿನಲ್ಲಿ ಪಿಎಫ್ಐ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಮಂಗಳೂರಿನ ಪಾಂಡೇಶ್ವರ ದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಗೆ ಚಲೋ ಕಾರ್ಯಕ್ರಮವನ್ನು ಪಿಎಫ್ಐ ಕೈಗೊಂಡಿತ್ತು. ಆದರೆ ಪೊಲೀಸರು ನಗರದ ಕ್ಲಾಕ್ ಟವರ್‌ನಲ್ಲಿ ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ಪಿಎಫ್ಐ ಪ್ರತಿಭಟನೆ ಹಿನ್ನಲೆ ಮಂಗಳೂರಿನ ಹಂಪನಕಟ್ಟೆಯಲ್ಲಿ ಮಂಗಳೂರು ತಾಲೂಕು ಕಛೇರಿಯಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು. ಕ್ಲಾಕ್ ಟವರ್‌ನಿಂದ ಪಾಂಡೇಶ್ವರ ಎಸ್ಪಿ ಕಛೇರಿಗೆ ಹೋಗುವ ಮಾರ್ಗದಲ್ಲಿ ಎರಡು ಬ್ಯಾರಿ ಕೇಡ್‌ಗಳನ್ನು ಹಾಕಲಾಗಿತ್ತು. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ವೇಳೆ ಪೊಲೀಸರು ಮೊದಲು ಬ್ಯಾರಿಕೇಡ್ ತೆರೆವುಗೊಳಿಸಿದ್ದು, ಎರಡನೇ ಬ್ಯಾರಿಕೇಡ್‌ನಲ್ಲಿ ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಧರಣಿ ಮಾಡಿದ್ದಾರೆ. ಈ ವೇಳೆ ಮೂರುಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ನೆರೆದಿದ್ದರು.

ಈ ವೇಳೆ ಮಾತನಾಡಿದ ಮಾತಾನಾಡಿದ ಎಸ್‌ಡಿಪಿ ಮುಖಂಡ ಶಾಫಿ ಬೆಳ್ಳಾರೆ, "ಯಾವುದೇ ಆಧಾರವಿಲ್ಲದೇ ಪಿಎಫ್‌ಐ ಕಾರ್ಯಕರ್ತರ ಮೇಲೆ ಪೊಲೀಸರು ಸುಳ್ಳು ಕೇಸ್ ದಾಖಲಿಸಿದ್ದಾರೆ. ರಾತ್ರಿಯ ವೇಳೆಗೆ ಠಾಣೆಯ ಮೇಜುಗಳನ್ನು ಹೊರಗೆಳೆದು ಹಾಕಿದ್ದಾರೆ. ಬಳಿಕ ಪೊಲೀಸರೇ ಠಾಣೆಯ ಜೀಪ್‌ನ ಗ್ಲಾಸ್ ಹಾನಿ ಮಾಡಿದ್ದಾರೆ" ಎಂದು ಆರೋಪಿಸಿದರು.
"ಆದರೆ ಹತ್ತು ಮಂದಿ ಕಾರ್ಯಕರ್ತರ ಮೇಲೆ ಮಾನಭಂಗ, ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣವನ್ನು ದಾಖಲಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜ್, ನಮ್ಮ ರಿವಾಲ್ವರ್‌ಗೆ ಧರ್ಮ ಇಲ್ಲ ಅಂತಾ ಹೇಳಿದ್ದಾರೆ. ಆದರೆ ಈ ರಿವಾಲ್ವರ್ ಕೇವಲ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದೆ" ಎಂದು ದೂರಿದರು.

ಎಸ್ಪಿ ಕಛೇರಿ ಮುತ್ತಿಗೆ ಹಾಕಲು ಯತ್ನ ವಿಫವಾದ ಹಿನ್ನಲೆಯಲ್ಲಿ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಷ್ ಸೋನಾವಣೆ ಬರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಮೊದಲು ಪ್ರತಿಭಟನಾಕಾರರ ಬಳಿ ತೆರಳಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಪ್ರತಿಭಟನಾಕಾರರ ಮನವೊಲಿಸಿದರು.
ಮಂಗಳೂರು ನಗರ ಭಾಗದಲ್ಲಿ ಶಾಂತರೀತಿಯಲ್ಲಿ ಪ್ರತಿಭಟನೆ ಮಾಡೋಕೆ ಅವಕಾಶ ನೀಡಲಾಗಿದೆ. ಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ ಬಳಿಕವೂ ಶಾಂತವಾಗಿದ್ದು, ಕಾರ್ಯಕ್ರಮ ಮುಗಿದ ಬಳಿಕವೂ ಶಾಂತವಾಗಿ ತೆರಳಬೇಕೆಂದು ಮನವಿ ಮಾಡಿದ್ದಾರೆ. ಕಮೀಷನರ್ ಮನವಿಗೆ ಪ್ರತಿಭಟನಾಕಾರರು ಸ್ಪಂದಿಸಿದ ಹಿನ್ನಲೆಯಲ್ಲಿ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಷ್ ಸೋನಾವಣೆ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ್ದಾರೆ.
ಪಿಎಫ್ಐ ಪ್ರತಿಭಟನೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕ್ಲಾಕ್ ಟವರ್, ಕಮೀಷನರ್ ಕಛೇರಿ, ಎಸ್ ಪಿ ಕಛೇರಿ, ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಬಿಗಿ ಪೊಲೀಸ್ ಬಂದ್ ಬಸ್ತ್ ಮಾಡಲಾಗಿತ್ತು.
6 ಎಸಿಪಿ,16 ಇನ್ಸ್ ಪೆಕ್ಟರ್, 32 ಪಿಎಸೈ, 4 ಕೆಎಸ್ಆರ್‌ಪಿ ತುಕುಡಿ, 5 ಸಿಎಆರ್ ಸೇರಿದಂತೆ ಕಮೀಷನೇಟರ್ ವ್ಯಾಪ್ತಿಯ ಸುಮಾರು 600ಕ್ಕೂ ಅಧಿಕ ಪೊಲೀಸರನ್ನು ಭಧ್ರತೆಗೆ ನಿಯೋಜಿಸಲಾಗಿತ್ತು.












Click it and Unblock the Notifications