ಮಂಗಳೂರು: ನವಿಲಿನ ಕಾಲಿಗೆ ಗೆಜ್ಜೆ ಕಟ್ಟಿದ ಅರ್ಚಕ, ಮೊಬೈಲ್ ಕಂಡರೆ ಗರಿ ಬಿಚ್ಚುತ್ತೆ ಈ ನವಿಲು
ಮಂಗಳೂರು, ನವೆಂಬರ್ 27: ನವಿಲು ಎಂದಾಕ್ಷಾಣ ಉದ್ದನೆಯ ಸೊಗಸಾದ ಗರಿ, ಕಡು ಹಸಿರು ಬಣ್ಣದ ಸೊಬಗಿನ ಮೈಮಾಟ, ಗರಿಬಿಚ್ಚಿ ನರ್ತಿಸುವ ಸೌಂದರ್ಯರಾಶಿಯೇ ಕಣ್ಣೆದುರು ಬರುತ್ತದೆ. ಇಂಥಹ ನವಿಲೊಂದು ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಿದೆ ಎಂದರೆ ನಮ್ಮ ಕಾತರ ಇನ್ನೂ ಹೆಚ್ಚಾಗುವುದು ಸಹಜ. ಇದೇ ಸೋಜಿಗವನ್ನು ಮಂಗಳೂರಿನ ಜನರು ಕಣ್ತುಂಬಿಕೊಳ್ಳುತ್ತಿದ್ದು, ಗೆಜ್ಜೆ ಕಟ್ಟಿದ ಮಯೂರ ನೃತ್ಯಕ್ಕೆ ಮನಸೋಲದವರಿಲ್ಲ.
ಮಂಗಳೂರು ನಗರದ ನೀರು ಮಾರ್ಗದ ಮಾಣೂರು ಶ್ರೀಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿರುವ ನವಿಲೊಂದು ಜನರನ್ನು ಕಂಡಾಕ್ಷಣ ಗರಿಬಿಚ್ಚಿ ಕುಣಿವ ಸುದ್ದಿ ಭಾರೀ ಸದ್ದು ಮಾಡಿತ್ತು. ಇದೀಗ ಈ ಮಯೂರನಿಗೆ ದೇವಾಲಯದ ಅರ್ಚಕ ರಾಜೇಶ್ ಭಟ್ ಅವರು ಬೆಳ್ಳಿಯ ಗೆಜ್ಜೆ ಮಾಡಿದ್ದಾರೆ. ನವರಾತ್ರಿ ವೇಳೆಗೆ ಗೆಜ್ಜೆ ಕಟ್ಟಿದ್ದು, ಈಗ ಗೆಜ್ಜೆಯ ಲಯಕ್ಕೆ ತಕ್ಕಂತೆಯೂ ನರ್ತಿಸಲು ಆರಂಭಿಸಿದೆ ಈ ನವಿಲು. ಇದು ದೇವಾಲಯದ ಭಕ್ತರ ಆಕರ್ಷಣೆಗೂ ಕಾರಣವಾಗಿದೆ.

ಈ ನವಿಲು ಕಳೆದ ಆರು ವರ್ಷಗಳಿಂದ ಈ ದೇವಸ್ಥಾನದಲ್ಲಿದೆ. ಸ್ಥಳೀಯರೊಬ್ಬರು ತಮಗೆ ದೊರೆತ ಮೂರು ತತ್ತಿಯನ್ನು ಕೋಳಿಯ ಕಾವಿಗೆ ಇಟ್ಟಿದ್ದರು. ತತ್ತಿ ಒಡೆದು ಕೋಳಿ ಮರಿಯೊಂದಿಗೆ ಮೂರು ನವಿಲಿನ ಮರಿಗಳು ಹೊರಬಂದಿತ್ತು. ಅವರು ಈ ನವಿಲು ಮರಿಗಳನ್ನು ದೇವಸ್ಥಾನಕ್ಕೆ ಒಪ್ಪಿಸಿದ್ದರು.
ಎರಡೂ ಎಲ್ಲೋ ಹೋಗಿತ್ತು. ಆದರೆ ಈ ನವಿಲು ಮಾತ್ರ ದೇವಸ್ಥಾನದ ಪರಿಸರ, ಸುತ್ತಮುತ್ತಲಿನ ಮನೆಗಳ ಪರಿಸರದಲ್ಲಿಯೇ ಇದೆ. ಈ ನವಿಲಿಗೆ ದೇವಾಲಯದ ಅರ್ಚಕ ರಾಜೇಶ್ ಭಟ್ 'ಮಯೂರ'ವೆಂದು ಹೆಸರಿಟ್ಟಿದ್ದಾರೆ.

ಅರ್ಚಕ ರಾಜೇಶ್ ಭಟ್ ಹಾಗೂ ಅವರ ಮನೆಯವರೊಂದಿಗೆ ಬಹಳ ಆತ್ಮೀಯವಾಗಿ ವರ್ತಿಸುತ್ತದೆ. ಕರೆಗೆ ಸ್ಪಂದಿಸಿ ಮೆಲ್ಲನೆ ಹೆಜ್ಜೆಯಿರಿಸಿ ಹತ್ತಿರಕ್ಕೆ ಬರುತ್ತದೆ. ಅವರು ಮಾಡುವ ಹಾವಭಾವಕ್ಕೆ ತಕ್ಕಂತೆ ಸ್ಪಂದಿಸುತ್ತದೆ. ಈ ಮಯೂರ ಪ್ರತಿದಿನವೂ ರಾತ್ರಿ ಪೂಜೆಯ ವೇಳೆ ನಮಸ್ಕಾರ ಮಂಟಪಕ್ಕೆ ತಪ್ಪದೇ ಬರುತ್ತದೆ.
ದೇವಸ್ಥಾನ ಪರಿಸರದಲ್ಲಿಯೇ ಇರುವ ಈ ನವಿಲು ಭಕ್ತರೊಂದಿಗೆ ಸುಲಭದಲ್ಲಿ ಬೆರೆಯುತ್ತದೆ. ಅವರ ಸೆಲ್ಫಿಗೆ ನರ್ತನ ಮಾಡಿ ಪೋಸ್ ಕೊಡುತ್ತದೆ. ಮೊಬೈಲ್ ಕಂಡರೆ ಎಷ್ಟು ಹೊತ್ತು ಬೇಕಾದರೂ ಗರಿಬಿಚ್ಚಿ ನರ್ತಿಸುತ್ತದೆ. ಒಟ್ಟಿನಲ್ಲಿ ಕಾಡುಪಕ್ಷಿಯಾದರೂ ಈ ನವಿಲು ಮನುಷ್ಯ ಪ್ರೀತಿಯನ್ನು ಬಯಸುತ್ತಿರುವುದು ಸೋಜಿಗವೇ ಸರಿ.












Click it and Unblock the Notifications