ಧರ್ಮಸ್ಥಳದಲ್ಲಿ ಪಂಚ ಮಹಾವೈಭವದ ಮುಖ್ಯ ವೇದಿಕೆ ಕುಸಿತ:ನಾಲ್ವರಿಗೆ ಗಾಯ
ಮಂಗಳೂರು, ಫೆಬ್ರವರಿ 14:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪಂಚ ಮಹಾವೈಭವ ವೇದಿಕೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಏಕಾಏಕಿ ಪೆಂಡಾಲ್ ನ ಒಂದು ಕಡೆ ಕುಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೆಂಡಾಲ್ ನಲ್ಲಿ ಕೆಳಗೆ ಹಲವಾರು ಮಂದಿ ಸಿಲುಕಿರುವ ಶಂಕೆ ಇದ್ದ ಕಾರಣ ಅಗ್ನಿಶಾಮಕದಳ ಹಾಗೂ ಸ್ಥಳೀಯರು ತೆರವು ಕಾರ್ಯಾಚರಣೆ ನಡೆಸಿ ಅಪಾಯದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದರು.

ಪೆಂಡಾಲ್ ಭಾರ ಒಂದೆಡೆ ಜಾಸ್ತಿ ಆಗಿ ಕುಸಿದಿದೆ ಎಂದು ಹೇಳಲಾಗಿದೆ. ಪೆಂಡಾಲ್ ಕುಸಿದ ಹಿನ್ನೆಲೆಯಲ್ಲಿ ಪಂಚಮಹಾವೈಭವ ಕಾರ್ಯಕ್ರಮ ಮುಖ್ಯ ವೇದಿಕೆಯಲ್ಲಿ ರದ್ದಾಗಿದ್ದು, ದೃಶ್ಯ ರೂಪಕವನ್ನು ಅಮೃತವರ್ಷಿಣಿ ವೇದಿಕೆಗೆ ಸ್ಥಳಾಂತರಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು, ಭರತ ಬಾಹುಬಲಿಯ ಜೀವನ ಸಾರುವ ದೃಶ್ಯ ರೂಪಕಕ್ಕಾಗಿ ಪಂಚ ಮಹಾವೈಭವ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು.

ಪೆಂಡಾಲ್ ಬಿದ್ದ ಸಮಯದಲ್ಲಿ ಪೆಂಡಾಲ್ ಒಳಗಡೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಕೆಲವು ಮಂದಿಗೆ ಗಾಯಗಳಾಗಿವೆ. ಪೆಂಡಾಲ್ ಬಿದ್ದ ದೃಶ್ಯವನ್ನು ಚಿತ್ರೀಕರಿಸಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೂ ನೆರೆದಿದ್ದ ಮಂದಿ ಆಕ್ರೋಶವನ್ನು ತೋರ್ಪಡಿಸಿದ್ದಾರೆ.












Click it and Unblock the Notifications