ಮಂಗಳೂರು ಪೊಲೀಸರ ಫೈರಿಂಗ್, ಪೊಲೀಸ್ ಆಯುಕ್ತ ಏನು ಹೇಳುತ್ತಾರೆ?
ಮಂಗಳೂರು, ಡಿಸೆಂಬರ್ 19: ಮಂಗಳೂರು ಪೊಲೀಸರು ಪೌರತ್ವ ಕಾಯ್ದೆ, ಎನ್‌ಸಿಆರ್ ವಿರುದ್ಧ ಪ್ರತಿಭಟನಾಕಾರರ ವಿರುದ್ಧ ಗುಂಡು ಹಾರಿಸಿದ್ದು, ಆರು ಮಂದಿ ಗಾಯಗೊಂಡು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಘಟನೆ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷಾ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, 'ಪೊಲೀಸ್ ಶೂಟೌಟ್‌ನಲ್ಲಿ ಸತ್ತಿದ್ದಾರೆ ಎಂಬುದು ವದಂತಿ, ಇಬ್ಬರ ಸ್ಥಿತಿ ಗಂಭೀರವಾಗಿದೆ. ಯಾರೂ ಸತ್ತಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
''ಮಧ್ಯಾಹ್ನ 2 ಗಂಟೆಯ ನಂತರ ಗುಂಪು ಸೇರಿ ಪ್ರತಿಭಟನೆ ನಡೆಸಿದರು, ಈ ವೇಳೆ ಲಾಠಿಚಾರ್ಜ್ ನಡೆಸಿ ಪೊಲೀಸರು ಗುಂಪು ಚದುರಿಸಿದರು, ಬಳಿಕ ಮತ್ತಷ್ಟು ಗುಂಪು ನುಗ್ಗಿ ಬಂದಾಗ ಡಿಸಿ ಕಚೇರಿ ಬಳಿ ಅಶ್ರುವಾಯು ಪ್ರಯೋಗ ಮಾಡಿದೆವು, ಆಗಲೂ ಜಗ್ಗದೇ ಗುಂಪುಗುಂಪಾಗಿ ಪೊಲೀಸರ ಮೇಲೆಯೇ ದಾಳಿಗೆ ಮುಂದಾದರು'' ಎಂದು ನಗರ ಆಯುಕ್ತ ಹರ್ಷಾ ಘಟನೆಯನ್ನು ವಿವರಿಸಿದರು.

''ಸ್ಟೇಟ್ ಬ್ಯಾಂಕ್, ಬಂದರ್, ರಾವ್ ಅಂಡ್ ರಾವ್ ಸರ್ಕಲ್ ಬಳಿ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ, ಅಲ್ಲದೇ ಆ ಬಳಿಕ ಬಂದರು ಠಾಣೆಗೆ ನೂರಾರು ಜನರ ತಂಡ ನುಗ್ಗಲು ಯತ್ನಿಸಿದೆ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮತ್ತು ಪೊಲೀಸರ ಮೇಲೆ ದಾಳಿ ಮಾಡುವ ಉದ್ದೇಶದಿಂದ ನುಗ್ಗಿದ್ದಾರೆ, ಆಗ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ'' ಎಂದು ಹೇಳಿದರು.
''ಗಾಳಿಯಲ್ಲಿ ಗುಂಡು ಹಾರಿಸಿದರೂ ಪ್ರತಿಭಟನಾಕಾರರು ಜಗ್ಗದೆ ಮುಂದೆ ಬಂಗಾದ ಪೊಲೀಸರು ಕಾನೂನು ಅಡಿಯಲ್ಲಿ ಬಲಪ್ರಯೋಗ ಮಾಡಿದ್ದಾರೆ (ಶೂಟೌಟ್) ಇದರಲ್ಲಿ ಹಲವರಿಗೆ ಗಾಯಗಳಾಗಿವೆ. ಇಬ್ಬರ ಸ್ಥಿತಿ ಗಂಭೀರವಾಗಿದೆ'' ಎಂದು ಹರ್ಷಾ ಹೇಳಿದರು.
'ಈ ಘಟನೆಯಲ್ಲಿ ಪೊಲೀಸರಿಗೂ ಗಾಯಗಳಾಗಿವೆ. 20ಕ್ಕೂ ಅಧಿಕ ಪೊಲೀಸರು, ಡಿಸಿಪಿಗಳಿಗೂ ಗಾಯವಾಗಿದೆ, ಹತ್ತಾರು ಜನರಿಗೂ ಘಟನೆಯಲ್ಲಿ ಸಣ್ಣ-ಪುಟ್ಟ ಗಾಯ ಆಗಿದೆ, ಕಟ್ಟಡಗಳಲ್ಲಿ ಅವಿತು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ' ಎಂದು ಹೇಳಿದ್ದಾರೆ.












Click it and Unblock the Notifications